ತುಮಕೂರು: ಬಡವರು, ಮಧ್ಯಮ ವರ್ಗದವರ ಪಾಲಿಗೆ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳೇ ವರದಾನ. ಆದರೆ ಇಂತಹ ಆಸ್ಪತ್ರೆಗಳಲ್ಲೂ ಕೆಲ ವೈದ್ಯರ ಲಂಚಬಾಕತನಕ್ಕೆ ಜನರು ಕಂಗಲಾಗಿದ್ದಾರೆ. ಹೆರಿಗೆ ನೋವೆಂದು ಬಂದವರಿಗೆ ಚಿಕಿತ್ಸೆ ಕೊಡುವ ಬದಲು ಲಂಚಕ್ಕೆ ಬೇಡಿಕೆಯಿಟ್ಟ ವೈದ್ಯನಿಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಶಾಕ್ ಕೊಟ್ಟಿದ್ದಾರೆ.
ಮಹಿಳೆಯೊಬ್ಬರಿಂದ ಲಂಚದ ಹಣ ಪಡೆಯುವಾಗಲೇ ವೈದ್ಯನೊಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಡಾ. ಹರಿಪ್ರಸಾದ್ (44) ಲೋಕಾಯುಕ್ತ ಬಲೆಗೆ ಬಿದ್ದ ವೈದ್ಯ. ತುಮಕೂರು ಜಿಲ್ಲೆ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಹರಿಪ್ರಸಾದ್, ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಲು 3 ಸಾವಿರ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದ.
ಮಹಿಳೆಯ ಸಂಬಂಧಿಯೊಬ್ಬರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ನಿನ್ನೆ ಗುರುವಾರ ಸಂಜೆ ಲಂಚದ ಹಣ ಪಡೆಯುವಾಗಲೇ ಹರಿಪ್ರಸಾದ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಇನ್‌ಸ್ಪೆಕ್ಟರ್ ರಾಮ ರೆಡ್ಡಿ, ಸಲೀಂ ಅಹ್ಮದ್, ಶಿವರುದ್ರಪ್ಪ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಸದ್ಯ ವೈದ್ಯ ಡಾ. ಹರಿಪ್ರಸಾದ್‌ನನ್ನು ವಶಕ್ಕೆ ಪಡೆದು ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: BJP JDS Alliance: ಲೋಕಸಭೆಗೆ ನಿಖಿಲ್ ಸ್ಪರ್ಧೆ ಇಲ್ಲವೆಂದ ಎಚ್‌ಡಿಕೆ; ಕೇಂದ್ರ ಮಂತ್ರಿ ಆಗ್ತಾರಾ ಕುಮಾರಸ್ವಾಮಿ?
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಿದ ಕಿರಾತಕರು
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಿದ್ದಾರೆಂದು ವ್ಯಕ್ತಿಯೊಬ್ಬರು ಲೋಕಾಯುಕ್ತ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು. ಕರ್ನಾಟಕ ಲೋಕಾಯುಕ್ತ ಎಸ್‌ಪಿ ಪವನ್ ನೆಜ್ಜೂರು ನೇತೃತ್ವದಲ್ಲಿ ಜನಸಂಪರ್ಕ ಸಭೆಯು ಆನೇಕಲ್ ಪಟ್ಟಣದಲ್ಲಿ ನಡೆಯಿತು. ತಾಲ್ಲೂಕು ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು.
ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಅಬಕಾರಿ ಸೇರಿದಂತೆ ಹಲವು ಇಲಾಖಾ ಅಧಿಕಾರಿಗಳು ಭಾಗಿಯಾಗಿದ್ದರು. ಸಾರ್ವಜನಿಕರ ಕೊಂದು ಕೊರತೆಗಳನ್ನು, ಅಹವಾಲು ಸ್ವೀಕರಿಸಿದರು. ಈ ವೇಳೆ ರಾಧಕೃಷ್ಣ ಎಂಬುವವರು ಸಮಸ್ಯೆ ಹೇಳಿಕೊಂಡು ಲೋಕಾಯುಕ್ತ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು. ನಕಲಿ ದಾಖಲೆ ಸೃಷ್ಠಿಸಿ 6 ಎಕರೆ 20 ಕುಂಟೆ ಜಾಗವನ್ನು ಕಬಲಿಸಿದ್ದಾರೆಂದು ಆರೋಪಿಸಿದರು. ಸಾಕಷ್ಟು ವರ್ಷಗಳಿಂದ ಕಚೇರಿ ಕೋರ್ಟ್‌ಗಳಿಗೆ ಅಲೆದಾಡುತ್ತಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ಕಣ್ಣೀರು ಹಾಕಿದರು. ಈ ವೇಳೆ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಕಾಮಗಾರಿ ಬಿಲ್ ಪಾಸ್‌ಗೂ ಲಂಚ- ಲೋಕಾ ಬಲೆಗೆ ಬಿದ್ದ ಏತ ನೀರಾವರಿ ಅಧಿಕಾರಿಗಳು
ಧಾರವಾಡದ ಏತ ನೀರಾವರಿ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ. ಬಿಲ್ ಪಾಸ್ ಮಾಡಲು ಧಾರವಾಡದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಹಾಗೂ ಕಿರಿಯ ಎಂಜಿನಿಯರ್ ಪ್ರಕಾಶ್ ಹೊಸಮನಿ ಹಣಕ್ಕೆ ಬೇಡಿಕೆಯಿಟ್ಟಿದ್ದರು.
ಉತ್ತರ ಕನ್ನಡದ ಬಾಲಕೃಷ್ಣ ನಾಯ್ಕ ಎನ್ನುವ ಕಂಟ್ರಾಕ್ಟರ್ ಹಾವೇರಿಯ ಮೂರು ಕಡೆಗಳಲ್ಲಿ ರಸ್ತೆ ಕಾಮಗಾರಿ ಮಾಡಿದ್ದರು. ಕಾಮಗಾರಿ ಬಿಲ್ ಪಾಸ್ ಮಾಡಲು ಧಾರವಾಡದ ಈ ಇಬ್ಬರು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲು ಪೋನ್ ಪೇ ಮೂಲಕ 83 ಸಾವಿರ ರೂ ಪಡೆದು ನಂತರ ತಲಾ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಒಂದು ಲಕ್ಷ ರೂ. ಹಣ ಪಡೆಯುವಾಗಲೇ ಈ ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ. ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.