ಬೆಂಗಳೂರು: ರಾಜಧಾನಿಯ ಹನ್ನೊಂದು ಕಡೆ ಸೇರಿದಂತೆ ರಾಜ್ಯದ ಸುಮಾರು 90 ಕಡೆಗಳಲ್ಲಿ ನಾನಾ ಕಡೆ ಲೋಕಾಯುಕ್ತ ಅಧಿಕಾರಿಗಳು ಮುಂಜಾನೆ ದಾಳಿ (Lokayukta Raid) ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಿಗೆ ಏಕಕಾಲಕ್ಕೆ ಮಿಂಚಿನ ದಾಳಿ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಒಟ್ಟು ಹನ್ನೊಂದು ಕಡೆ ದಾಳಿ ನಡೆಸಲಾಗಿದೆ. ಬಿಬಿಎಂಪಿಯ ಆರ್‌ಆರ್ ನಗರ ವಲಯದ ಹೆಗ್ಗನಹಳ್ಳಿ ವಾರ್ಡ್‌ನ ಅಸಿಸ್ಟೆಂಟ್ ರೆವಿನ್ಯೂ ಅಫೀಸರ್ ಚಂದ್ರಪ್ಪ ಬೀರಜ್ಜನವರ್ ಅವರ ಕೆಆರ್ ಪುರದ ನಿವಾಸ ಹಾಗೂ ಚಂದ್ರಪ್ಪಗೆ ಸೇರಿದ ಮೂರು ಕಡೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಶೋಧ ಆರಂಭಿಸಿದ್ದಾರೆ.
ಕಾರ್ಮಿಕ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಶ್ರೀನಿವಾಸ್ ಅವರ ಬೆಂಗಳೂರು ಹಾಗೂ ಕೊಳ್ಳೆಗಾಲದ ಮನೆ ಮೇಲೆ ದಾಳಿ ನಡೆದಿದೆ. ಶ್ರೀನಿವಾಸ್‌ಗೆ ಸಂಬಂಧಿಸಿದ ಮೂರು ಕಡೆ ಪರಿಶೀಲನೆ ನಡೆಯುತ್ತಿದೆ. ಇಬ್ಬರು ಎಸ್ಪಿಗಳಾದ ವಂಶಿ ಕೃಷ್ಣ ಹಾಗೂ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಕಲಬುರಗಿ: ಕಲಬುರಗಿಯಲ್ಲಿ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದ್ದು, ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಅವರ ಮಾಕಾ ಲೇಔಟ್‌ನಲ್ಲಿರುವ ಮನೆ ಮೇಲೆ ರೇಡ್ ನಡೆದಿದೆ. ದೇವದುರ್ಗದ KBJNL ಇಇ ತಿಪ್ಪಣ್ಣ ಅನ್ನದಾನಿ ಅವರ ಭಾಗ್ಯವಂತಿ ನಗರದ ಮನೆ ಮೇಲೂ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ಎಸ್.ಎಸ್.ಕರ್ನೂಲ್ ನೇತೃತ್ವದಲ್ಲಿ ಅಧಿಕಾರಿಗಳ ಬೇಟೆ ನಡೆದಿದೆ.
ರಾಯಚೂರು: ರಾಯಚೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದ್ದು, ನಿರ್ಮಿತಿ ಕೇಂದ್ರದ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಲಾಗಿದೆ. ಶರಣಬಸವ ಪಟ್ಟೇದ್ ಅವರ ಗಂಗಾಪರಮೇಶ್ವರಿ ಕಾಲೋನಿಯಲ್ಲಿನ ಮನೆ ಸೇರಿ 4 ಕಡೆ ದಾಳಿಯಾಗಿದೆ. ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಏಕಕಾಲಕ್ಕೆ ನಾಲ್ಕು ಕಡೆ ಮನೆ, ಕಚೇರಿ, ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದೆ. ಲಿಂಗಸುಗೂರಿನಲ್ಲಿನ ಜಮೀನು ಸೇರಿ ಆಸ್ತಿಗಳ ಪರೀಕ್ಷೆಯನ್ನು ಎಸ್ಪಿ ಡಾ. ರಾಮ್. ಎಲ್. ಅರಸಿದ್ದಿ ನೇತೃತ್ವದ ತಂಡ ನಡೆಸಿದೆ.
ಚಿತ್ರದುರ್ಗ: ಇಬ್ಬರು ಅಧಿಕಾರಿಗಳಿಗೆ ಲೋಕಾಯುಕ್ತ ತಂಡ ಶಾಕ್ ನೀಡಿದೆ. ಅರಣ್ಯ ಇಲಾಖೆ ACF ನಾಗೇಂದ್ರ ನಾಯ್ಕ್ ಅವರ ಹಿರಿಯೂರು ಪಟ್ಟಣದ ಚಂದ್ರಲೆಔಟ್‌ನಲ್ಲಿರುವ ಮನೆಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರ ತವಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಹಾವೇರಿ: ಇಬ್ಬರು ಆರ್‌ಎಫ್‌ಓಗಳ ಮನೆ ಸೇರಿದಂತೆ 9 ಕಡೆ ಲೋಕಾ ದಾಳಿ ನಡೆದಿದೆ. ಆರ್‌ಎಫ್‌ಓ ಪರಮೇಶ್ವರ ಪೇಲನವರ, ಮಹಾಂತೇಶ ನ್ಯಾಮತಿಗೆ ಸೇರಿದ 9 ಕಡೆ ದಾಳಿ ನಡೆಸಲಾಗಿದೆ. ಹಾವೇರಿ, ಕುರಬಗೊಂಡ ಗ್ರಾಮದಲ್ಲಿ ಪರಮೇಶ್ವರ ಪೇಲನವರಗೆ ಸೇರಿದ ಮೂರು ಮನೆ ಸೇರಿದಂತೆ 6 ಕಡೆ, ನ್ಯಾಮತಿಗೆ ಸೇರಿದ ಮನೆ ಸೇರಿದಂತೆ ಹಾವೇರಿಯ ಶಿವಾಜಿನಗರ, ವರದಾನೇಶ್ವರಿ ನಗರ, ಕುರುಬಗೊಂಡ ಗ್ರಾಮದ ಮನೆ, ಫಾಮ್೯ ಹೌಸ್‌ಗಳ ಮೇಲೆ ದಾಳಿ ಪರಿಶೀಲನೆ ನಡೆದಿದೆ.
ಹಾಸನ: ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ನಾರಾಯಣ ಎಚ್.ಇ. ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಬೊಮ್ಮನಾಯಕನಹಳ್ಳಿ ಮನೆ ಹಾಗೂ ಗೊರೂರಿನ ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: High Court : ಲೋಕಾಯುಕ್ತಕ್ಕೆ ದಾಳಿ ಮಾಡಲು ಮಾತ್ರ ಆಸಕ್ತಿ, ಅಂತಿಮ ವರದಿ ಸಲ್ಲಿಸಲು ಯಾಕೆ ವಿಳಂಬ?; ಹೈಕೋರ್ಟ್ ಗರಂ