Site icon Vistara News

Lokayukta raid : ಸಚಿವರ ಕೊಠಡಿಯಲ್ಲೇ ಲಂಚ ಸ್ವೀಕರಿಸಿದಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ರಾ?: ಬೊಮ್ಮಾಯಿ ಪ್ರಶ್ನೆ

Bommai

ಚಿತ್ರದುರ್ಗ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿದ್ದ ಸಚಿವರೊಬ್ಬರು ತಮ್ಮ ಕಚೇರಿಯಲ್ಲೇ ಎರಡು ಲಕ್ಷ ರೂ. ಲಂಚ ಸ್ವೀಕರಿಸಿದ್ದರು. ಆಗ ಸಿದ್ದರಾಮಯ್ಯ ಅವರು ರಾಜೀನಾಮೆ (Lokayukta raid) ಕೊಟ್ಟಿದ್ದರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶನಿವಾರ ಕಾಂಗ್ರೆಸ್‌ ನಾಯಕರು ಸಿಎಂ ರಾಜೀನಾಮೆ ಒತ್ತಾಯಿಸಿ ದೊಡ್ಡ ಮಟ್ಟದ ಪ್ರತಿಭಟನೆ ಮತ್ತು ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಸಂಬಂಧ ಅವರು ಪ್ರತಿಕ್ರಿಯೆ ನೀಡಿದರು. ಅವರು ಶನಿವಾರ ಮುರುಘಾ ಮಠದ ಆವರಣದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜತೆ ಮಾತನಾಡಿದರು.

ʻʻಅಂದು ಸಿದ್ದರಾಮಯ್ಯ ಅವರೇನೂ ರಾಜೀನಾಮೆ ನೀಡಿಲ್ಲ. ಒಂದು ವೇಳೆ ಆಗ ಲೋಕಾಯುಕ್ತ ಇದ್ದಿದ್ದರೆ ಸಚಿವರ ಬಂಧನವಾಗುತ್ತಿತ್ತು. ಇಂಥ ಪ್ರಕರಣ ಮುಚ್ಚಿ ಹಾಕುವ ಸಲುವಾಗಿ ಲೋಕಾಯುಕ್ತವನ್ನು ಅತ್ಯಂತ ದುರ್ಬಲಗೊಳಿಸಲಾಗಿತ್ತುʼʼ ಎಂದರು. ʻಪ್ರತಿಭಟನೆ ಮಾಡುವವರಿಗೆ ಬೇರೇನೂ ಕೆಲಸವಿಲ್ಲʼ ಎಂದು ಹೇಳಿದರು.

ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಸರ್ಕಾರ ಬಹಳ ಸ್ಪಷ್ಟವಾಗಿದೆ. ಯಾರೇ ಇರಲಿ, ಇಂಥ ಪ್ರಕರಣದಲ್ಲಿ ಮುಕ್ತ ಅವಕಾಶ ಲೋಕಾಯುಕ್ತಕ್ಕೆ ನೀಡಿದ್ದೇವೆ. ಕಾನೂನು ತನ್ನ ಕೆಲಸ ಮಾಡುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುವರು ಎಂದರು.

ಪಕ್ಷಾತೀತವಾಗಿ ಭ್ರಷ್ಟಾಚಾರ ನಿಗ್ರಹ

ʻʻಈ ಪ್ರಕರಣದಲ್ಲಿ ತನಿಖೆ ನಿಷ್ಪಕ್ಷಪಾತವಾಗಿ ಮಾಡುತ್ತಿದ್ದೇವೆ. ಪಕ್ಷಾತೀತವಾಗಿ ಭ್ರಷ್ಟಾಚಾರ ನಿಗ್ರಹ ಮಾಡುತ್ತಿದ್ದೇವೆ. ನಮಗೆ 59 ಪ್ರಕರಣ ಮುಚ್ಚಿಹಾಕಿರುವ ಕಾಂಗ್ರೆಸ್ ತನ್ನ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ. ಅವು ಕೂಡ ಮುಂದೆ ಬರಲಿದೆ. ಭ್ರಷ್ಟಾಚಾರದಲ್ಲಿ ಮುಳುಗಿಹೋಗಿರುವ ಕಾಂಗ್ರೆಸ್ ತನ್ನ ಪಾಪ ತೊಳೆದುಕೊಳ್ಳಲು ರಾಜೀನಾಮೆ ಬೇಡಿಕೆ ಸಲ್ಲಿಸುತ್ತಿದೆ. ತಮ್ಮ ಎಲೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡಿಕೊಳ್ಳಲಿ. ಎಷ್ಟು ಸಾರಿ ಅವರು ರಾಜೀನಾಮೆ ನೀಡಬೇಕಿತ್ತುʼʼ ಎಂದರು.

ಕಾಂಗ್ರೆಸ್ ನವರ ಕೀಳುಮಟ್ಟದ ರಾಜಕಾರಣ

ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಲೆಗಡುಕರ ಸರ್ಕಾರ ಕಿತ್ತು ಒಗೆಯಬೇಕೆಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅತಿ ಹೆಚ್ಚು ಕೊಲೆಗಳಾಗಿದ್ದು, ಸಿದ್ದರಾಮಯ್ಯ ಕಾಲದಲ್ಲಿ, ಧರ್ಮ, ಜಾತಿಯ ಹೆಸರಿನಲ್ಲಿ ಎಷ್ಟು ಕೊಲೆಗಳಾದವು. ಪಿಎಫ್ಐ, ಎಸ್.ಡಿ.ಪಿ ಐ ಕೊಲೆ ಪ್ರಕರಣ ಗಳನ್ನು ಹಿಂಪಡೆದಿದ್ದರೆ. ಅವರಿಗೆ ಯಾವ ನೈತಿಕತೆ ಇದೆ. ಎಲ್ಲಾ ರಂಗದಲ್ಲಿ ಅತ್ಯಂತ ಕೀಳು ಮಟ್ಟದ ರಾಜಕಾರಣವನ್ನು ಕಾಂಗ್ರೆಸ್ ಮಾಡಿದೆ. ಎಷ್ಟು ಸರಣಿ ಕೊಲೆಗಳಾಗಿವೆ ಎಂದರು.

ಇದನ್ನೂ ಓದಿ : Lokayukta raid : ರಾಜೀನಾಮೆ ಆಗ್ರಹ; ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್‌ ನಾಯಕರ ಬಂಧನ

Exit mobile version