ದಾವಣಗೆರೆ: ನಮ್ಮ ತಾಲೂಕು ಚೆನ್ನಗಿರಿ. ಅಡಿಕೆ ನಾಡು ಚೆನ್ನಗಿರಿ ಅಂತಾರೆ. ನಮ್ಮ ಊರಿನಲ್ಲಿ ಸಾಮಾನ್ಯ ತೋಟದವರ ಮನೆಯಲ್ಲೂ ಸಹ ಐದರಿಂದ ಆರು ಕೋಟಿ ರೂ. ಇರ್ತದೆ. ನಮ್ದು 125 ಎಕರೆ ಅಡಿಕೆ ತೋಟ ಇದೆ. ಎರಡು ಕ್ರಷರ್‌ಗಳಿವೆ, ಅಡಿಕೆ ಮಂಡಿ ಇದೆ. ಪಾನ್ ಮಸಾಲಾ ಸೇರಿದಂತೆ ಬೇರೆ ಬೇರೆ ವ್ಯವಹಾರಗಳಿವೆ. ಲೋಕಾಯುಕ್ತದವರಿಗೆ (Lokayukta raid) ಸಿಕ್ಕಿದ ಹಣಕ್ಕೆ ಪೂರ್ತಿ ದಾಖಲೆಯನ್ನು ಕೊಟ್ಟು ವಾಪಸ್ ಪಡೆಯುತ್ತೇನೆ: ಹೀಗೆಂದು ಧೈರ್ಯವಾಗಿ ಹೇಳಿದ್ದಾರೆ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ.
ಲೋಕಾಯುಕ್ತ ವಶಪಡಿಸಿಕೊಂಡಿರುವ 8.12 ಕೋಟಿ ರೂ. ಹಣವೆಲ್ಲವೂ ತಮ್ಮ ಕುಟುಂಬದ್ದೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ವಿರೂಪಾಕ್ಷಪ್ಪ. ಆರು ದಿನದ ಹಿಂದೆ ಲೋಕಾಯುಕ್ತ ಅಧಿಕಾರಿಗಳು ಶಾಸಕರ ಕಚೇರಿಯಲ್ಲಿ ಅವರ ಪುತ್ರ ಪ್ರಶಾಂತ್ ಅವರು 40 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಆ ಬಳಿಕ ಅವರ ಕಚೇರಿ, ಸಂಜಯ ನಗರದಲ್ಲಿರುವ ವಿರೂಪಾಕ್ಷಪ್ಪ ಮಾಡಾಳ್ ಅವರ ಮನೆಯಲ್ಲಿ ಒಟ್ಟು 8.12 ಕೋಟಿ ರೂ. ಹಣ ಸಿಕ್ಕಿತ್ತು.
ʻʻಹೀಗೆ ಸಿಕ್ಕಿದ ಹಣ ನಮ್ಮ ಕುಟುಂಬದ್ದೇ. ಸೂಕ್ತ ದಾಖಲೆ ಒದಗಿಸಿ ಅದನ್ನು ಮತ್ತೆ ಲೋಕಾಯುಕ್ತದ ಕೈಯಿಂದ ವಾಪಸ್ ಪಡೆಯುತ್ತೇನೆʼʼ ಎಂದು ಮಾಡಾಳ್ ಹೇಳಿದರು.
ಇದೆಲ್ಲವೂ ರಾಜಕೀಯ ಷಡ್ಯಂತ್ರ
ಕಳೆದ ಬಾರಿ ಇನ್‌ಕಂ ಟ್ಯಾಕ್ಸ್ ರೇಡ್ ಆಗಿತ್ತು. ಹಿಂದೆಯೂ ಹೀಗೇ ಏನೇನೋ ಕುತಂತ್ರ ಮಾಡಲಾಗಿತ್ತು. ಈಗಲೂ ಇದೇ ರೀತಿ ಆಗಿದೆ. ರಾಜಕಾರಣದಲ್ಲಿ ಇದೆಲ್ಲ ಆಗುವುದು ಸಾಮಾನ್ಯ. ಇದೆಲ್ಲ ಒಂದು ಷಡ್ಯಂತ್ರ ಅಷ್ಟೆ ಎಂದು ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ʻʻನನ್ನ ಕಚೇರಿಯಲ್ಲಿ ಮಗ ಪ್ರಶಾಂತ್ ಕೂತಿದ್ದಾಗ ಯಾರೋ ಬಂದು ದುಡ್ಡು ಇಡ್ತಾನೆ. ಆಗಲೇ ಲೋಕಾಯುಕ್ತ ಪೊಲೀಸರು ಬಂದು ಅವನ ಕೈಯನ್ನು ದುಡ್ಡಿನ ಮೇಲೆ ಇಡಿಸ್ತಾರೆ. ದೂರು ನೀಡಿದ ಆ ಕಶ್ಯಪ್ ಯಾರು ಅನ್ನೋದೆ ನನಗೆ ಗೊತ್ತಿಲ್ಲʼʼ ಎಂದು ಹೇಳಿದರು ವಿರೂಪಾಕ್ಷಪ್ಪ.
ಸಿದ್ದರಾಮಯ್ಯನವರ ಬಗ್ಗೆ ಅಭಿಮಾನವಿದೆ
ಸಿದ್ದರಾಮಯ್ಯನವರ ಬಗ್ಗೆ ನನಗೆ ಅಭಿಮಾನವಿದೆ. ಸತ್ಯ ಏನು ಎನ್ನುವುದು ಸಿದ್ದರಾಮಯ್ಯ ಅವರಿಗೂ ಚೆನ್ನಾಗಿ ಗೊತ್ತಿದೆ. ನನ್ನನ್ನು ತಾಲೂಕಿನಲ್ಲಿ ಒಬ್ಬ ಸಜ್ಜನ ರಾಜಕಾರಣಿ ಅಂತ ಹೇಳುತ್ತಾರೆ ಎಂದು ಹೇಳಿದರು ಮಾಡಾಳು ವಿರೂಪಾಕ್ಷ.
ಇದನ್ನೂ ಓದಿ : Lokayukta Raid : ಮಧ್ಯಂತರ ಜಾಮೀನು ಸಿಕ್ಕಿದ ಬೆನ್ನಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷ!