ದಾವಣಗೆರೆ: ಕೆಎಸ್‌ಡಿಎಲ್ ಹಗರಣಕ್ಕೆ ಸಂಬಂಧಿಸಿ ಪ್ರಧಾನ ಆರೋಪಿಯಾಗಿ ಗುರುತಿಸಲ್ಪಟ್ಟ ಬಳಿಕ ತಲೆಮರೆಸಿಕೊಂಡಿದ್ದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ದೊರೆಯುತ್ತಿದ್ದಂತೆಯೇ ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿದ್ದಾರೆ! ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಭಾರಿ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಅವರಿಗೆ ಕೋರ್ಟ್ ಜಾಮೀನು ನೀಡಿತ್ತು. ಇದಾಗಿ ಕೆಲವೇ ಗಂಟೆಗಳಲ್ಲಿ ಮಾಡಾಳು ಅವರು ದಾವಣಗೆರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮಧ್ಯಂತರ ಜಾಮೀನು ಸಿಕ್ಕ ತಕ್ಷಣವೇ ಮಾಡಾಳು ಅವರು ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮ ಸಮೀಪದ ಕನಕಗಿರಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದರು. ಇದು ಮಾಡಾಳು ಅವರ ಮನೆ ದೇವರ ದೇವಸ್ಥಾನವಾಗಿದೆ.
ದೇವಸ್ಥಾನದಿಂದ ಮುಂದೆ ಅವರು ತಮ್ಮ ಊರಾದ ಚನ್ನೇಶಪುರ ಗ್ರಾಮಕ್ಕೆ ತೆರಳಿದರು. ಈ ವೇಳೆ ಅವರ ಅಪಾಯ ಸಂಖ್ಯೆಯ ಬೆಂಬಲಿಗರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಮಾಡಾಳು ಅವರು ತಮ್ಮ ಮನೆಗೆ ತೆರಳಿ ಅಲ್ಲಿ ಅಭಿಮಾನಿಗಳ ಜತೆಗೆ ಸಂವಾದ ನಡೆಸುವ ಸಾಧ್ಯತೆಗಳಿವೆ.
ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆಯಾದರೂ ಅವರು ಜಾಮೀನು ಸಿಕ್ಕ ಬಳಿಕ 48 ಗಂಟೆಗಳಲ್ಲಿ ಲೋಕಾಯುಕ್ತ ತನಿಖಾಧಿಕಾರಿ ಮುಂದೆ ಹಾಜರಾಗಬೇಕಾಗಿದೆ.
ಮಾಡಾಳ್ ಅವರು ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದು, ಈಗ ಪ್ರತ್ಯಕ್ಷರಾಗಿರುವುದರಿಂದ ಇದುವರೆಗೆ ಎಲ್ಲಿದ್ದರು ಎಂಬ ಕುತೂಹಲ ಎಲ್ಲ ಕಡೆ ಇದೆ. ಪೊಲೀಸರು ಇಷ್ಟು ಹುಡುಕಾಟ ನಡೆಸಿದರೂ ಸಿಗದಷ್ಟು ಗೌಪ್ಯವಾಗಿ ಅವರು ಅಡಗಿದ್ದೆಲ್ಲಿ ಎನ್ನುವುದು ಕುತೂಹಲದ ಕಾರಣ. ಅವರು ದಾವಣಗೆರೆಯ ಆಸುಪಾಸಿನಲ್ಲೇ ಎಲ್ಲೋ ಇದ್ದಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ : Lokayukta Raid : ಮಾಡಾಳ್‌ಗೆ ಮಧ್ಯಂತರ ಜಾಮೀನು ಸಿಕ್ಕರೂ 48 ಗಂಟೆಯೊಳಗೆ ಲೋಕಾಯುಕ್ತ ಮುಂದೆ ಹಾಜರಿ ಕಡ್ಡಾಯ