ತುಮಕೂರು: ಜೈಲಿನಲ್ಲಿರುವ ತಂದೆಯನ್ನು ನೋಡಲು ಬಂದಿದ್ದ ಮಗನ ಬಳಿ ಮಧುಗಿರಿ ಸಬ್ ಜೈಲ್ ಸೂಪರಿಟೆಂಡೆಂಟ್ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ (Lokayukta raid) ಬಿದ್ದಿದ್ದಾರೆ. ಜೈಲ್ ಸೂಪರಿಟೆಂಡೆಂಟ್ ದೇವೇಂದ್ರ.ಆರ್.ಕೋಣಿ ಲೋಕಾಯುಕ್ತ ಬಲೆಗೆ ಬಿದ್ದವರು.
ಆರೋಪಿ ಇಂತಿಯಾಜ್ ಐದು ದಿನಗಳ ಹಿಂದೆ ಶಿರಾ ಪೊಲೀಸ್ ಠಾಣೆಯಿಂದ 307 ಕೇಸ್ ಅಡಿ ಜೈಲಿಗೆ ಬಂದಿದ್ದ. ಇಂತಿಯಾಜ್ ನೋಡಲು ಮಗ ಅರ್ಬಾಜ್ ನಿತ್ಯ ಜೈಲಿಗೆ ಬರುತ್ತಿದ್ದ. ಹೀಗೆ ಪ್ರತಿದಿನ ಜೈಲಿಗೆ ಬರುವಾಗ ಅರ್ಬಾಜ್ ಬಳಿ ಜೈಲ್ ಸೂಪರಿಟೆಂಡೆಂಟ್ ದೇವೇಂದ್ರ. ಆರ್.ಕೋಣಿ ಹಣ ಪಡೆಯುತ್ತಿದ್ದರು.
ದೇವೇಂದ್ರ ಇದುವರೆಗೂ ಹತ್ತು ಸಾವಿರದವರೆಗೂ ಪಡೆದಿದ್ದು, ಉಳಿದ ಐದು ಸಾವಿರ ರೂ. ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರು ಬಂದ ಹಿನ್ನೆಲೆ ತುಮಕೂರು ಲೋಕಾಯುಕ್ತ ಡಿವೈಎಸ್‌ಪಿಗಳಾದ ಮಂಜುನಾಥ್, ಹರೀಶ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಲಂಚ ಪಡೆಯುವಾಗಲೇ ಸಿಕ್ಕಿ ಬಿದ್ದಿದ್ದು, ಸದ್ಯ ಜೈಲ್ ಸೂಪರಿಂಟೆಂಡೆಂಟ್ ದೇವೆಂದ್ರ ಆರ್ ಕೋಣಿಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪಹಣಿ ನಿಮಯ ಬದಲಿಸಲು ಲಂಚ!
ಇತ್ತ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಬೀಳಗಿ ತಹಸೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಮೀನು ಪಹಣಿಯಲ್ಲಿನ ನಿಯಮ ಬದಲಿಸಲು ಬೀಳಗಿ ಶಿರಸ್ತೆದಾರ ಮಹಾಂತೇಶ್ ಹುರಕಡ್ಲಿ ಎಂಬ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹತ್ತು ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸೀಮಿಕೇರಿ ಗ್ರಾಮದ ಮಂಜುನಾಥ ದಳವಾಯಿ ಎಂಬುವವರ ಜಮೀನು ಪಹಣಿ ನಿಮಯ ಬದಲಿಸಬೇಕಿತ್ತು. ಇದಕ್ಕಾಗಿ ಮಹಾಂತೇಶ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮಂಜುನಾಥ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಮಂಗಳವಾರ ಲಂಚ ಪಡೆಯುವಾಗ ದಾಳಿ ನಡೆಸಿದ್ದಾರೆ.
ಬಿಲ್ ಬಿಡುಗಡೆಗೂ ಬೇಕು ಲಂಚ
ಬಿಬಿಎಂಪಿ ಸೀವೇಜ್ ವಾಟರ್ ಮ್ಯಾನೇಜ್ ಮೆಂಟ್ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಿವಣ್ಣ ಎಂಬಾತ ಲೋಕಾಯುಕ್ತ ಬಲೆಗೆ ಬಿದ್ದವರು. ಬಿಬಿಎಂಪಿ ಚಾಮರಾಜಪೇಟೆಯ ಸೀವೇಜ್ ವಾಟರ್ ಮ್ಯಾನೇಜ್ ಮೆಂಟ್ ಎಇಇ ಆಗಿರುವ ಶಿವಣ್ಣ ಕಾಮಗಾರಿಯ ಪೆಂಡಿಂಗ್ ಬಿಲ್ ಬಿಡುಗಡೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. 50,000 ರೂ. ಲಂಚ ಬೇಡಿಕೆ ಇಟ್ಟಿದ್ದ ಎಇಇ ಶಿವಣ್ಣ, 10,000 ಲಂಚ ರೂ. ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ