ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ನಿನ್ನೆ ಬಂಧನಕ್ಕೊಳಗಾಗಿರುವ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಸೋಮವಾರ ತಡರಾತ್ರಿಯವರೆಗೂ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ರಾತ್ರಿ 12 ಘಂಟೆಯ ವರೆಗೆ ಲೋಕಾಯುಕ್ತ ಅಧಿಕಾರಿಗಳು ಮಾಡಾಳುಗೆ ಪ್ರಶ್ನೆಗಳ ಸುರಿಮಳೆ ಮಾಡಿದ್ದು, ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಶಾಸಕ ವಿರೂಪಾಕ್ಷಪ್ಪ ತಡಕಾಡಿದ್ದಾರೆ. ಲಂಚ ಪ್ರಕರಣದ ಬಗ್ಗೆ ತನಿಖಾಧಿಕಾರಿಗಳಿಂದ ವಿಚಾರಣೆ ನಡೆದಿದೆ. 8 ಕೋಟಿ ರೂಪಾಯಿ ಹಣ ಎಲ್ಲಿಂದ ಬಂತು, ಅದರ ಮೂಲ ಯಾವುದು, ಯಾರು ಎಲ್ಲಿಗೆ ತಲುಪಿಸುತ್ತಿದ್ದರು ಎಂಬ ಬಗ್ಗೆ ತೀವ್ರ ತನಿಖೆ ನಡೆದಿದೆ.
ವಿಚಾರಣೆ ಮುಗಿಸಿ ತನಿಖಾಧಿಕಾರಿಗಳು ಹೊರಟ ಬಳಿಕ ಲೋಕಾಯುಕ್ತ ಕಚೇರಿಯಲ್ಲೇ ಮಾಡಾಳು ರಾತ್ರಿ ಉಳಿದುಕೊಂಡಿದ್ದು, ಅವರ ರಾತ್ರಿ ವಾಸ್ತವ್ಯಕ್ಕೆ ಪ್ರತ್ಯೇಕ ಮಂಚ, ಹಾಸಿಗೆ, ದಿಂಬು, ಊಟ, ನೀರು ವ್ಯವಸ್ಥೆ ಮಾಡಲಾಗಿದೆ. ತಮ್ಮ ಆಪ್ತರ ಮೂಲಕ ಇವನ್ನು ಲೋಕಾ ಕಚೇರಿಗೆ ಮಾಡಾಳ್ ತರಿಸಿಕೊಂಡಿದ್ದಾರೆ.
ಲಂಚ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ರದ್ದು ಆಗುತ್ತಿದ್ದಂತೆ ಅಲರ್ಟ್ ಆಗಿದ್ದ ಲೋಕಾಯುಕ್ತ ಪೊಲೀಸರು, ಮಾಡಾಳು ಬೆಂಗಳೂರಿಗೆ ಬರುವ ವೇಳೆ ತುಮಕೂರಿನ ಕ್ಯಾತ್ಸಂದ್ರದ ಬಳಿಯೇ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಜಾಮೀನು ರದ್ದಾದರೆ ಮಾಡಾಳ್ ತಪ್ಪಿಸಿಕೊಳ್ಳದಂತೆ ನಿಗಾ ವಹಿಸಲು ಪ್ರತ್ಯೇಕ ಐದು ತಂಡಗಳನ್ನು ರಚನೆ ಮಾಡಲಾಗಿತ್ತು. ಎಸ್‌ಪಿ ಕೆ.ವಿ ಅಶೋಕ್ ನೇತೃತ್ವದಲ್ಲಿ 5 ವಿಶೇಷ ತಂಡಗಳನ್ನು ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ರಚಿಸಿದ್ದರು.
ಇದನ್ನೂ ಓದಿ: Lokayukta Raid: ನಾನು ಮಾಡಾಳು ಮನೆಯಲ್ಲೇ ಇದ್ದೆ; ನಾನೊಬ್ಬ ಸಜ್ಜನ ರಾಜಕಾರಣಿ: ಮಾಡಾಳು ವಿರೂಪಾಕ್ಷಪ್ಪ ಸಮರ್ಥನೆ