Site icon Vistara News

Lokayukta raid : ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿದ್ದು 8.13 ಕೋಟಿ ಹಣ, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಂ. 1 ಆರೋಪಿ

Madalu virupakshappa and son prashanth

#image_title

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ (ಕೆಎಸ್‌ಡಿಎಲ್‌)ಕ್ಕೆ ಕಚ್ಚಾ ವಸ್ತು ಖರೀದಿ ಟೆಂಡರ್‌ಗೆ ಸಂಬಂಧಿಸಿ 40 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಜಲ ಮಂಡಳಿ ಮುಖ್ಯಾಧಿಕಾರಿ ಮಾಡಾಳ್‌ ಪ್ರಶಾಂತ್‌ ರೆಡ್‌ ಹ್ಯಾಂಡ್‌ ಆಗಿ ಲೋಕಾಯುಕ್ತರ ಬಲೆಗೆ (Lokayukta raid) ಬಿದ್ದಿದ್ದರೂ ಈ ಪ್ರಕರಣದಲ್ಲಿ ಪ್ರಧಾನ ಆರೋಪಿಯಾಗಿ ಗುರುತಿಸಲಾಗಿರುವುದು, ಅವರ ತಂದೆ, ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು. ಅವರನ್ನು ನಂಬರ್‌ ಒನ್‌ ಆರೋಪಿಯಾಗಿ ಗುರುತಿಸಿದ ಎಫ್‌ಐಆರ್‌ನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ನಡುವೆ ಲೋಕಾಯುಕ್ತ ದಾಳಿಯಲ್ಲಿ 8.13 ಕೋಟಿ ರೂ. ನಗದು ಮತ್ತು ಚಿನ್ನಾಭರಣ ಪತ್ತೆಯಾಗಿದೆ.

ಹೌದು, ಇದು ಮಾಡಾಳು ವಿರೂಪಾಕ್ಷಪ್ಪ ಅವರೇ ರೂಪಿಸಿಕೊಂಡ ಲಂಚದ ಜಾಲ ಎನ್ನುವುದನ್ನು ಪ್ರಾಥಮಿಕ ತನಿಖೆಯಲ್ಲೇ ಸ್ಪಷ್ಟಪಡಿಸಿಕೊಂಡಿರುವ ಲೋಕಾಯುಕ್ತ ಅವರನ್ನೇ ನಂಬರ್‌ ಒನ್‌ ಆರೋಪಿಯಾಗಿ ಗುರುತಿಸಿದೆ. ಬಿಜೆಪಿಯ ಕೆಲವು ನಾಯಕರು ಇದು ಮಾಡಾಳು ಪ್ರಶಾಂತ್‌ ಅವರ ವೈಯಕ್ತಿಕ ವ್ಯವಹಾರ. ಅವರು ಸರ್ಕಾರಿ ಅಧಿಕಾರಿ ಎಂದೆಲ್ಲ ಹೇಳಿದ್ದರು. ಇದರಲ್ಲಿ ಕೇವಲ ಪ್ರಶಾಂತ್‌ ಅವರನ್ನು ಮಾತ್ರ ಸಿಕ್ಕಿಸಿಹಾಕುವ ಪ್ರಯತ್ನವೊಂದು ಕಾಣುತ್ತಿತ್ತು. ಆದರೆ, ಲೋಕಾಯುಕ್ತರು ಮಾಡಾಳು ವಿರೂಪಾಕ್ಷಪ್ಪ ಅವರನ್ನೇ ಪ್ರಧಾನ ಆರೋಪಿಯಾಗಿ ನಮೂದಿಸಿದ್ದಾರೆ.

ಲೋಕಾಯುಕ್ತ ಐಜಿಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್‌, ಬೆಂಗಳೂರು ನಗರ ವಿಭಾಗದ ಎಸ್‌ಪಿ ಅಶೋಕ್‌ ಕೆ.ಎನ್‌, ಲೋಕಾಯುಕ್ತ ಡಿಎಸ್‌ಪಿ ಪ್ರಮೋದ್‌ ಕುಮಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಕುಮಾರಸ್ವಾಮಿ ಮತ್ತು ಅವರ ತಂಡ ನಡೆಸಿದ ದಾಳಿಯಲ್ಲಿ ಮಹತ್ವದ ಮಾಹಿತಿಗಳು, ಹಣ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಕೆಮಿಕ್ಸಿಲ್‌ ಕಾರ್ಪೊರೇಷನ್‌ನ ಪಾಲುದಾರರಾಗಿರುವ ಶ್ರೇಯಸ್‌ ಕಶ್ಯಪ್‌ ಅವರು ಈ ಪ್ರಕರಣದ ದೂರುದಾರರಾಗಿದ್ದಾರೆ.

ಆರೋಪಿಗಳು ಯಾರೆಲ್ಲ?

1. ಮಾಡಾಳು ವಿರೂಪಾಕ್ಷಪ್ಪ: ಇವರೇ ಮೂಲತಃ 81 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟವರು.
2. ಪ್ರಶಾಂತ್‌ ಮಾಡಾಳು, ಜಲಮಂಡಂಡಳಿಯ ಮುಖ್ಯಾಧಿಕಾರಿ ಮತ್ತು ಹಣಕಾಸು ಸಲಹೆಗಾರ
(ಪ್ರಶಾಂತ್‌ ಅವರು ತಮ್ಮ ತಂದೆ ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಟೆಂಡರ್‌ದಾರರಿಂದ ಲಂಚ ಕೇಳಿದವರು)
3. ಸುರೇಂದ್ರ, ಕೆಎಸ್‌ಡಿಎಲ್‌ ಕಚೇರಿಯ ಅಕೌಂಟೆಂಟ್‌ (32)
4. ಮಾಡಾಳು ಪ್ರಶಾಂತ್‌ ಅವರ ಸಂಬಂಧಿ ಸಿದ್ಧೇಶ್‌ (28)
5. ಅಲ್ಬರ್ಟ್‌ ನಿಕೋಲಾ (51), ಕರ್ನಾಟಕ ಅರೋಮಾಸ್‌ ಕಂಪನಿಯ ಫೀಲ್ಡ್‌ ವರ್ಕರ್‌
6. ಗಂಗಾಧರ್‌ (45), ಕರ್ನಾಟಕ ಅರೋಮಾಸ್‌ ಕಂಪನಿಯ ಫೀಲ್ಡ್‌ ವರ್ಕರ್‌

ಮಾಡಾಳು ವಿರೂಪಾಕ್ಷಪ್ಪ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದಾಗ ಮಾರ್ಚ್‌ 16ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಐದು ಕಡೆಗಳಲ್ಲಿ ಶೋಧ ಕಾರ್ಯಾಚರಣೆ

ಸಂಜಯ ನಗರದಲ್ಲಿರುವ ಮಾಡಾಳು ವಿರೂಪಾಕ್ಷಪ್ಪ ಮತ್ತು ಪ್ರಶಾಂತ್‌ ಮಾಡಾಳ್‌ ಮನೆ, ಕೆಎಸ್‌ಡಿಎಸ್‌ನ ಆಡಳಿತ ನಿರ್ದೇಶಕರಾಗಿರುವ ಡಾ. ಮಹೇಶ್‌ ಎಂ. ಅವರ ಬನಶಂಕರಿ ಮೊದಲ ಹಂತದಲ್ಲಿರುವ ಮನೆ, ಕೆಎಸ್‌ಡಿಎಲ್‌ ಕಚೇರಿ ಮತ್ತು ಮಾಡಾಳು ವಿರೂಪಾಕ್ಷಪ್ಪ ಅವರ ಚೆನ್ನಗಿರಿಯಲ್ಲಿರುವ ಮನೆಯಲ್ಲಿ ವಿಚಾರಣೆ ಮಾಡಲಾಗಿದೆ.

ವಶವಾದ ಒಟ್ಟು ಹಣ ಎಷ್ಟು?

ಪ್ರಶಾಂತ್‌ ಮಾಡಾಳ್‌ ಅವರ ಕ್ರೆಸೆಂಟ್‌ ರಸ್ತೆಯಲ್ಲಿರುವ ಕಚೇರಿಯಿಂದ 2.02 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಮಾಡಾಳ್‌ ವಿರೂಪಾಕ್ಷಪ್ಪ ಅವರ ಸಂಜಯ ನಗರದ ಮನೆಯಿಂದ ಆರು ಕೋಟಿ, 10 ಲಕ್ಷದ 30 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.

ಪ್ರಶಾಂತ್‌ ಮಾಡಾಳ್‌ ಮನೆಯಲ್ಲಿ ಡೈರಿ ಪತ್ತೆ

ಪ್ರಶಾಂತ್‌ ಮಾಡಾಳ್‌ ಅವರ ಮನೆಯಲ್ಲಿ ನಡೆದ ಲೋಕಾಯುಕ್ತ ದಾಳಿಯ ವೇಳೆ ಒಂದು ಡೈರಿ ಪತ್ತೆಯಾಗಿದ್ದು, ದರಲ್ಲಿ ಕೆಲವೊಂದು ಮಹತ್ವದ ಮಾಹಿತಿಗಳಿವೆ ಎನ್ನಲಾಗಿದೆ. ಡೈರಿಗಳಲ್ಲಿ ಕೆಲವು ಹೆಸರುಗಳು ಉಲ್ಲೇಖವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Lokayukta Raid: ಮಾಡಾಳು ಪ್ರಶಾಂತ್‌ ಬೆಡ್‌ ರೂಮಿನಲ್ಲಿತ್ತು ಕಂತೆ ಕಂತೆ ಹಣ; 8 ಗುಟ್ಕಾ ಬ್ಯಾಗ್‌ನಲ್ಲಿ ಹೊತ್ತು ಹೊರಟ ಲೋಕಾಯುಕ್ತ ಟೀಂ

Exit mobile version