ಬೆಂಗಳೂರು: ಲೋಕಾಯುಕ್ತ ಬಲೆಯಲ್ಲಿ ಸಿಲುಕಿ ಆರು ದಿನಗಳ ಕಾಲ ತಲೆಮರೆಸಿಕೊಂಡು ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಬಳಿಕ ಏಕಾಏಕಿ ಮೆರವಣಿಗೆ ಮೂಲಕ ಪ್ರತ್ಯಕ್ಷರಾಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ ಎಂದು ಹೇಳಲಾಗಿದೆ.
ಜಲ ಮಂಡಳಿ ಅಧಿಕಾರಿಯಾಗಿರುವ ಮಗ ಪ್ರಶಾಂತ್ 40 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಲ್ಲಿ ನಡೆಯುತ್ತಿರುವ ಲಂಚಾವತಾರದ ಹೊಸ ಹೊಸ ಕಥೆಗಳು ಹೊರಬಿದ್ದಿದ್ದವು.
ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿ ಕಾಂಗ್ರೆಸ್ ಕೈಗೆ ಅಸ್ತ್ರವಾಗಿ ಸಿಕ್ಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ ಎಂದು ಹೇಳಲಾಗಿದೆ. ಈ ಮಾಹಿತಿಯನ್ನು ಒಪ್ಪಿಕೊಂಡಿರುವ ಮಾಡಾಳ್ ವಿರೂಪಾಕ್ಷಪ್ಪ ಅವರೇ ಪಕ್ಷದ ನನ್ನ ಮೇಲೆ ಆಪಾದನೆ ಬಂದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವುದು ಸರಿಯಾಗಿದೆ, ನಾನು ಕೋರ್ಟ್‌ನಿಂದ ದೋಷಮುಕ್ತನಾಗಿ ಬಂದು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.
ಉಚ್ಚಾಟನೆ ಆಗಿಲ್ಲ ಎಂದ ಸಿ.ಟಿ. ರವಿ
ಈ ನಡುವೆ ಉಚ್ಚಾಟನೆ ವರದಿಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ʻಈ ಕ್ಷಣದವರೆಗೂ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಪ್ರಾಥಮಿಕ ತನಿಖಾ ವರದಿ ಬರುವವರೆಗೂ ಉಚ್ಛಾಟನೆ ಮಾಡುವ ವ್ಯವಸ್ಥೆ ಇಲ್ಲ. ಇಡೀ ದೇಶದಲ್ಲಿ ಎಲ್ಲೂ ಕೂಡಾ ಪಕ್ಷದಲ್ಲಿ ಆ ವ್ಯವಸ್ಥೆ ಇಲ್ಲ. ಪ್ರಾಥಮಿಕ ತನಿಖಾ ವರದಿ ಬಂದ ಬಳಿಕವೇ ಪಕ್ಷ ಕ್ರಮ ಕೈಗೊಳ್ಳುತ್ತದೆ. ಉಚ್ಛಾಟನೆ ಮಾಡಿದ್ದಾರೆ ಎಂಬುದು ಈವರೆಗೂ ನನ್ನ ಗಮನದಲ್ಲಿ ಇಲ್ಲʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ : Lokayukta raid : ಸಿಕ್ಕಿದ ಹಣವೆಲ್ಲಾ ನಂದೆ, ನಮ್ಮ ಊರಲ್ಲಿ ಸಾಮಾನ್ಯ ತೋಟದವರ ಮನೆಯಲ್ಲೂ 5-6 ಕೋಟಿ ರೂ. ಇರ್ತದೆ ಅಂದ್ರು ಮಾಡಾಳ್