ಬೆಂಗಳೂರು: ಮುಂಜಾನೆಯೇ ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಮುಟ್ಟಿಸಿದ್ದಾರೆ. ದೂರುಗಳು ಬಂದ ಅಧಿಕಾರಿಗಳ ಮನೆಗೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ವಿಜಯಪುರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ ಮುಂತಾದೆಡೆ ದಾಳಿ ನಡೆಸಲಾಗಿದೆ.
ತಹಶೀಲ್ದಾರ್ ನಿವಾಸಕ್ಕೆ ದಾಳಿ
ಕೆ .ಆರ್ ಪುರಂ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ತಹಶೀಲ್ದಾರ್ ಅಜಿತ್ ರೈ ನಿವಾಸದ ಮೇಲೆ ಅಕ್ರಮ ಆಸ್ತಿ ಗಳಿಕೆಯ ಆರೋಪದ ಮೇಲೆ ದಾಳಿ ನಡೆದಿದ್ದು, ಬೆಂಗಳೂರಿನ ಒಟ್ಟು 10 ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲಿಸಲಾಗಿದೆ. ಕೆ.ಆರ್ ಪುರಂನಲ್ಲಿರುವ ಅವರ ಮನೆ ಸೇರಿದಂತೆ ನಗರದ ಹತ್ತು ಕಡೆ ಅಜಿತ್‌ಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆದಿದೆ. 20ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆದಿದೆ.
ಬಾಗಲಕೋಟೆಯಲ್ಲಿ ದಾಳಿ
ಬಾಗಲಕೋಟೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ತಂಡ ಇಬ್ಬರು ಕೃಷಿ ಅಧಿಕಾರಿಗಳ ಮನೆಗಳ ಮೇಲೆ ರೇಡ್ ನಡೆಸಿದೆ. ಬಾಗಲಕೋಟೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಮತ್ತೋರ್ವ ಅಧಿಕಾರಿ ಬೀಳಗಿ ಕೃಷಿ ಇಲಾಖೆ ಅಸಿಸ್ಟೆಂಟ್ ಡೈರೆಕ್ಟರ್ ಕೃಷ್ಣ ಶಿರೂರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ವಿದ್ಯಾಗಿರಿಯಲ್ಲಿರುವ ಇಬ್ಬರೂ ಕೃಷಿ ಅಧಿಕಾರಿಗಳ ಮನೆಗಳಿಗೆ ಲೋಕಾಯುಕ್ತ ಡಿವೈಎಸ್ಪಿಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದ ತಂಡಗಳಿಂದ ದಾಳಿಗಳು ನಡೆದಿವೆ. ಮನೆಗಳ ಜೊತೆಗೆ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ. ಬಾಗಲಕೋಟೆ, ಬೀಳಗಿ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ರೈಡ್
ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಅಬಕಾರಿ ಇನ್‌ಸ್ಪೆಕ್ಟರ್ ರಮೇಶ ವಿ. ಅವೆ ಮನೆಗಳ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಯಲಹಂಕ, ನಾಗರಭಾವಿ, ಗೌರಿಬಿದನೂರಿನಲ್ಲಿರುವ ಇವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ರಮೇಶ್‌ಗೆ ಸೇರಿದ ಮನೆಗಳಲ್ಲಿ ದಾಖಲೆಗಳಿಗೆ ಶೋಧ ಕಾರ್ಯ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆದಿದೆ.
ಯಾದಗಿರಿಯಲ್ಲಿ ದಾಳಿ
ಯಾದಗಿರಿ: ರಾಯಚೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಇಇ ಆಗಿರುವ ವಿಶ್ವನಾಥ ರೆಡ್ಡಿ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದೆ. ಯಾದಗಿರಿಯ ಗ್ರೀನ್ ಸಿಟಿಯಲ್ಲಿರುವ ವಿಶ್ವನಾಥ ರೆಡ್ಡಿ ಅವರ ಬೃಹತ್ ಬಂಗಲೆಯ ಮೇಲೆ ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನುಲ್, ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಇಸ್ಮಾಯಿಲ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ವಿಶ್ವನಾಥ ರೆಡ್ಡಿ ಮನೆಯಲ್ಲಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಆದಾಯ ಮೀರಿ ಆಸ್ತಿ ಸಂಪಾದನೆಯ ದೂರು ಅವರ ಮೇಲಿದೆ.
ವಿಜಯಪುರದಲ್ಲಿ ಕಾರ್ಯಾಚರಣೆ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಇಬ್ಬರ ಅಧಿಕಾರಿಗಳ ನಿವಾಸಗಳು ಸೇರಿದಂತೆ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಪಿಡಬ್ಲ್ಯುಡಿ ಇಲಾಖೆ ಜೆಇ ಭೀಮನಗೌಡ ಬಿರಾದಾರ ನಿವಾಸ ಹಾಗೂ ಸಂಬಂಧಿ ಶ್ರೀಕಾಂತ್ ಅಂಗಡಿ ನಿವಾಸದ ಮೇಲೆ ದಾಳಿ ನಡೆದಿದೆ, ಪಿಡಬ್ಲ್ಯುಡಿ ಇಲಾಖೆ ಬಸವನಬಾಗೇವಾಡಿ ವಿಭಾಗದಲ್ಲಿ ಪ್ರಭಾರಿ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿರುವ ಭೀಮನಗೌಡ ಬಿರಾದಾರ ಹಾಗೂ ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಸಿಸ್ಟೆಂಟ್ ಎಇಇ ಜೆ.ಪಿ ಶೆಟ್ಟಿ ನಿವಾಸ ಹಾಗೂ ತಾಳಿಕೋಟೆ ತಾಲೂಕಿನ ಸಾಸನೂರದ ಅವರ ಸಂಬಂಧಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ದಾಳಿ, ದಾಖಲೆ ಪರಿಶೀಲನೆ ನಡೆದಿದೆ. ನಾಲ್ಕು ಕಡೆಗಳಲ್ಲಿ 3 ಡಿವೈಎಸ್ಪಿ, 7 ಇನ್‌ಸ್ಪೆಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೆಳಗಾವಿಯಲ್ಲೂ ದಾಳಿ
ಬೆಳಗಾವಿ: ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಹೆಸ್ಕಾಂಂ ಕಾರ್ಯನಿರ್ವಾಹಕ ಇಂಜಿನಿಯರ್ ಶೇಖರ ಬಹುರೂಪಿ ಮನೆ ಮೇಲೆ ದಾಳಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಪ್ರವಾಹದ ಸಂದರ್ಭದಲ್ಲಿ ನಡೆದ ಅವ್ಯವಹಾರ ಸಂಬಂಧ, ಅಥಣಿಯಲ್ಲಿ ಕಾರ್ಯನಿರ್ವಹಿಸುವಾಗ 2019ರಲ್ಲಿ ಅಮಾನತುಗೊಂಡಿದ್ದರು. ಬೆಳಗಾವಿಯಲ್ಲಿರುವ ಶೇಖರ ಬಹುರೂಪಿ ಮನೆ ಸೇರಿ ವಿವಿಧೆಡೆ ದಾಳಿ ನಡೆಸಲಾಗಿದೆ.
ಚಿಕ್ಕಮಗಳೂರು ಕಾರ್ಯಾಚರಣೆ
ಚಿಕ್ಕಮಗಳೂರು: ಅಕ್ರಮ ಆಸ್ತಿ ಸಂಪಾದನೆಯ ದೂರಿನ ಮೇಲೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಗಂಗಾಧರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಏಕಕಾಲದಲ್ಲಿ ಮನೆ, ಪೆಟ್ರೋಲ್ ಬಂಕ್, ನಿರ್ಮಾಣ ಹಂತದ ರೆಸಾರ್ಟ್ ಮೇಲೆ ದಾಳಿ ನಡೆದಿದೆ. ಜಯನಗರ ಬಡಾವಣೆಯಲ್ಲಿರುವ ಮನೆ, ರಾಮನಹಳ್ಳಿಯಲ್ಲಿರುವ ಬಂಕ್, ಗಂಗಾಧರ್ ಕೆಲಸ ನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರದ ಕಚೇರಿ ಮೇಲೂ ದಾಳಿ ನಡೆದಿದೆ. ಏಕಕಾಲದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಕೊಡಗು ದಾಳಿ
ಕೊಡಗು: ಮಡಿಕೇರಿಯ ಹಾರ್ಟಿಕಲ್ಚರ್ ಇಲಾಖೆಯಲ್ಲಿ ಎಫ್.ಡಿ.ಎ ಆಗಿರುವ ಬಶೀರ್ ಮನೆ ಮೇಲೆ, ಕುಶಾಲನಗರದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತುಮಕೂರು ದಾಳಿ
ತುಮಕೂರು: ತುಮಕೂರಿನಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಲಾಗಿದೆ. ಕೃಷಿ ಇಲಾಖೆ ಜೆಡಿ ರವಿ ಮನೆ ಹಾಗೂ ಫಾರಂ ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಹಾಸನದಿಂದ ತುಮಕೂರಿಗೆ ವರ್ಗಾವಣೆಯಾಗಿದ್ದ ರವಿ ಅವರ ತುಮಕೂರಿನ ಶಂಕರಪುರದಲ್ಲಿ ಇರುವ ನಿವಾಸ, ಹಾಗೂ ರಾಮನಗರದ ಫಾರಂ ಹೌಸ್ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: Lokayukta Raid: ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೇಸ್ ವರ್ಕರ್