Site icon Vistara News

Lokayukta Raid: ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತ ದಾಳಿ; ಭ್ರಷ್ಟರ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ

#image_title

ಬೆಂಗಳೂರು: ರಾಜ್ಯಾದ್ಯಂತ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು (Lokayukta raid) ದಾಳಿ ನಡೆಸಿದ್ದು, ಭ್ರಷ್ಟರಿಗೆ ಬೆವರಿಳಿಸಿದ್ದಾರೆ. ಅಕ್ರಮ ಆಸ್ತಿ ಗಳಿಗೆ ಸೇರಿ ಲಂಚ ಪಡೆಯುವ ಆರೋಪ ಹೊತ್ತಿರುವ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಎರಡು ದಿನದ ಹಿಂದಷ್ಟೆ ವರ್ಗಾವಣೆಗೊಂಡಿರುವ ಕೋಲಾರದ ಬಂಗಾರಪೇಟೆ ತಾಲೂಕಿನ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಇಒ) ಎನ್.ವೆಂಕಟೇಶಪ್ಪ ಮನೆ ಮೇಲೆ ದಾಳಿ ನಡೆಸಿದಾಗ, ಹೈಡ್ರಾಮಾವನ್ನೇ ಸೃಷ್ಟಿಸಿದ್ದರು.

ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ವೆಂಕಟೇಶಪ್ಪ

ಲೋಕಾಯಕ್ತ ದಾಳಿಗೆ ವಿರೋಧ ವ್ಯಕ್ತಪಡಿಸಿದ ವೆಂಕಟೇಶಪ್ಪ, ದಾಖಲೆಗಳ ಪರಿಶೀಲನೆ ವೇಳೆ ಓಡಿ ಬಂದವರೇ ಮನೆ ಮುಂಭಾಗ ಬಿದ್ದು, ಉರುಳಾಡಿದ್ದಾರೆ. ಬಳಿಕ ತಲೆತಿರುಗಿ ಬಿದ್ದವರಂತೆ ವರ್ತಿಸಿ ಹೈ ಡ್ರಾಮಾ ಮಾಡಿದರು. ಕುಟುಂಬಸ್ಥರು ಹೃದಯ ಕಾಯಿಲೆ ಇದೆ ಎಂದು ಇಓ ವೆಂಕಟೇಶಪ್ಪವರನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾಸಿದರು.

ಬಂಗಾರಪೇಟೆ ಪಟ್ಟಣ, ಮುಳಬಾಗಿಲು ತಾಲೂಕಿನ ತಿಪ್ಪದೊಡ್ಡಿ ಬಳಿ ವೆಂಕಟೇಶಪ್ಪಗೆ ಸೇರಿದ ಮನೆಗಳ ಮೇಲೂ ಏಕಕಾಲಕ್ಕೆ ದಾಳಿ ಮಾಡಲಾಯಿತು. ಕಳೆದ ಎಂಟು ವರ್ಷಗಳಿಂದ ಬಂಗಾರಪೇಟೆ ತಾಲೂಕು ಪಂಚಾಯ್ತಿ ಇಓ ಆಗಿ ವೆಂಕಟೇಶಪ್ಪ ಕೆಲಸ ಮಾಡುತ್ತಿದ್ದರು. ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರದ ಬಾಗೇಪಲ್ಲಿಗೆ ವರ್ಗಾವಣೆಗೊಂಡಿದ್ದರು. ಲೋಕಾಯುಕ್ತ ಎಸ್‌ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಿ, ದಾಖಲಾತಿಗಳ ಪರಿಶೀಲನೆ ನಡೆಸಲಾಯಿತು.

ಉಪ ತಹಸೀಲ್ದಾರ್‌, ನಿವೃತ್ತ ಡಿಸಿಎಫ್‌ ಮನೆ ಮೇಲೆ ರೈಡ್‌

ಬೀದರ್‌ನ ಬಸವಕಲ್ಯಾಣ ತಾಲೂಕಿನ ಮುಡಬಿಯಲ್ಲಿ ಉಪ ತಹಸೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ವಿಜಯಕುಮಾರ್ ಸ್ವಾಮಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜತೆಗೆ ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಸುರೇಶ್ ಮೇದಾ ಎಂಬುವವರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಎ.ಆರ್.ಕರ್ಲೂನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಎನ್. ಎಂ‌. ಓಲೇಕಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ವಿಜಯಕುಮಾರ್‌ ಸ್ವಾಮಿ

ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ನಿವೃತ್ತ ಡಿಸಿಎಫ್ ನಾಗರಾಜ್ ಹಾಗೂ‌ ಹೊಳಲ್ಕೆರೆ ತಹಸೀಲ್ದಾರ್ ನಾಗರಾಜ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಯಿತು.

ಜೆಸ್ಕಾಂ ಇಇ ಅಧಿಕಾರ ಮೇಲೆ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಇಇ ಅಧಿಕಾರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಬೆಳಗ್ಗೆ ‌ದಾಳಿ‌‌ ಮಾಡಿದ್ದಾರೆ. ಬಳ್ಳಾರಿ ನಗರದ ಜಿಎಸ್ಕಾಂ ಇಇ ಹುಸೇನ್ ಸಾಬ್ ರವರ ಕೆಇಬಿ ಕಚೇರಿ, ರಾಘವೇಂದ್ರ ಕಾಲೋನಿಯ ನಿವಾಸ ಹಾಗೂ ಹುಟ್ಟೂರು ತಾಲೂಕಿನ‌ ಶಿಡಿಗಿನಮೊಳ‌ ಗ್ರಾಮದಲ್ಲಿ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ನಾಲ್ಕು ತಂಡ ವಿಭಾಗವಾಗಿ ಏಕಕಾಲಕ್ಕೆ ದಾಳಿ‌ ನಡೆಸಿದ್ದಾರೆ. ಕೆಇಬಿ ಕಚೇರಿ ಹಾಗೂ ಅವರ ನಿವಾಸದಲ್ಲಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

ಜಿಎಸ್ಕಾಂ ಇಇ ಹುಸೇನ್ ಸಾಬ್

ಚಿತ್ರದುರ್ಗದ ಎರಡು ತಾಲೂಕುಗಳಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಹಿರಿಯೂರು ತಾಲೂಕಿನ ಬೋಚಾಪುರ ಗ್ರಾಮದ ಎಇಇ ಹನುಮಂತ ರಾಯ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈತ ಬೆಂಗಳೂರಿನ ಬಿಬಿಎಂಪಿ ಎಇಇ ಆಗಿ ಕೆಲಸ ಮಾಡುತ್ತಿದ್ದು, ಇವರ ಒಡೆತನದ ಬೋಚಾಪುರ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Lokayukta Raid: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಎಡಿಟಿಪಿ ಮನೆಯಲ್ಲಿತ್ತು 1.44 ಕೋಟಿ ರೂ.; ಬೆಂಗಳೂರಲ್ಲೇ ಇದೆ 12 ಫ್ಲ್ಯಾಟ್‌

ಹೊಳಲ್ಕೆರೆ ತಹಸೀಲ್ದಾರ್ ನಾಗರಾಜ್ ವಸತಿ ಗೃಹದ ಮೇಲೂ ಲೋಕ ದಾಳಿ ನಡೆಸಿದ್ದು, ಮನೆಯಲ್ಲಿನ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಶಿವಮೊಗ್ಗ ತಾಲೂಕಿನಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ್ದ ನಾಗರಾಜ್ ಒಂದು ತಿಂಗಳ ಹಿಂದಷ್ಟೇ ಹೊಳಲ್ಕೆರೆಗೆ ವರ್ಗಾವಣೆ ಆಗಿದ್ದರು. ಎರಡು ಕಡೆ ಲೋಕಾಯುಕ್ತ ಎಸ್‌ಪಿ ವಾಸುದೇವ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

Exit mobile version