Site icon Vistara News

ರಾಜ್ಯದ ಹಲವೆಡೆ ಆರ್‌ಟಿಒ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

lokayukta

ಬೆಂಗಳೂರು: ರಾಜ್ಯದ ಐದು ಕಡೆ ಆರ್‌ಟಿಒ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ತಂಡಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿವೆ. ಬಳ್ಳಾರಿ, ವಿಜಯಪುರ, ವಿಜಯನಗರ, ಚಿಕ್ಕೋಡಿ ಹಾಗೂ ಬೀದರ್‌ಗಳಲ್ಲಿ ದಾಳಿ ನಡೆದಿವೆ.

ಬಳ್ಳಾರಿ: NH63‌ ರಸ್ತೆಯ ಗೋಡೆಹಾಳ್‌ನಲ್ಲಿ ಹಗರಿ ನದಿಯ ಸೇತುವೆ ಬಳಿ ಇರುವ ಆರ್‌ಟಿಓ‌ ಚೆಕ್‌ಪೋಸ್ಟ್ ಮೇಲೆ ಎಸ್ಪಿ ಪುರುಷೋತ್ತಮ ನೇತೃತ್ವದ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸಿದೆ. ಡಿವೈಎಸ್ಪಿ ರಾಮರಾವ್ ಸೇರಿದಂತೆ 10 ಜನರ ತಂಡ ದಾಳಿ ಮಾಡಿದೆ. ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಈ ಚೆಕ್‌ಪೋಸ್ಟ್ ಬಳ್ಳಾರಿಯಿಂದ 12 ಕಿ.ಮೀ ದೂರದಲ್ಲಿದೆ. ಗಣಿಗಾರಿಕೆ ಸಂದರ್ಭದಲ್ಲಿ ಇಲ್ಲಿ ಗಣಿ, ಆರ್‌ಟಿಒ ಸೇರಿದಂತೆ ಮೂರು ಇಲಾಖೆ ತಂಡಗಳು ಇಲ್ಲಿದ್ದವು. ಈಗ ಕೇವಲ ಆರ್‌ಟಿಒ‌ ಮಾತ್ರ ಇದೆ. ಗಡಿಭಾಗದಿಂದ ನಿತ್ಯ ನೂರಾರು ವಾಹನಗಳು ಬಳ್ಳಾರಿಗೆ ಬರುತ್ತಿದ್ದು, ದಾಖಲೆಗಳನ್ನು ಸರಿಯಾಗಿ‌ ಚೆಕ್ ಮಾಡದೆ ಬಿಡುತ್ತಿದ್ದಾರೆ ಹಾಗೂ ವಸೂಲಿ ಮಾಡುತ್ತಿದ್ದಾರೆಂಬ ಆರೋಪವಿತ್ತು.

ವಿಜಯಪುರ: ಮಹಾರಾಷ್ಟ್ರ ಗಡಿಯಲ್ಲಿರುವ ಧೂಳಖೇಡ RTO ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಅನಿತಾ ನೇತೃತ್ವದಲ್ಲಿ ದಾಳಿ ನಡೆದಿದೆ. 3ರಿಂದ 4 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, 7-8 ಹೋಮ್ ಗಾರ್ಡ್‌ಗಳ ವಿಚಾರಣೆ ನಡೆಸಿ ಅಗತ್ಯ ದಾಖಲೆ ಕಲೆ ಹಾಲಾಗುತ್ತಿದೆ.

ಚಿಕ್ಕೋಡಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿರುವ, ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್‌ಪೋಸ್ಟ್‌ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ದಿನಕ್ಕೆ ಸಾವಿರಾರು ಲಾರಿಗಳು ಕುಗನೊಳ್ಳಿ ಬಳಸಿಯೇ ಮಹಾರಾಷ್ಟ್ರ ಮತ್ತ ಕರ್ನಾಟಕ ಪ್ರವೇಶ ಮಾಡುತ್ತವೆ. ಲಾರಿ ಚಾಲಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ದಾಳಿ ನಡೆದಿದೆ.

ಇದನ್ನೂ ಓದಿ | Lokayukta Raid | ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಂದ ಇಬ್ಬರು ಅಧಿಕಾರಿಗಳ ಬಂಧನ

ಬೀದರ್: ಬೀದರ್‌ನ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಆರ್‌ಟಿಓ ಚೆಕ್‌ಪೋಸ್ಟ್‌ಗೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಪಿ ಕರ್ನೂಲ್ ನೇತೃತ್ವದಲ್ಲಿ ದಾಳಿ ನಡೆದಿದೆ. ಚೆಕ್‌ಪೋಸ್ಟ್‌ನಲ್ಲಿ ವಾಹನಗಳಿಂದ ಹಣ ವಸೂಲಿ ದೂರು ಬಂದ ಹಿನ್ನೆಲೆ ದಾಳಿ ನಡೆದಿದೆ.

ವಿಜಯನಗರ: ವಿಜಯನಗರದ ಹೊಸಪೇಟೆಯ ಹೊರವಲಯದಲ್ಲಿರುವ ಶನೇಶ್ವರ ದೇವಾಲಯದ ಬಳಿ ಇರುವ ಚೆಕ್‌ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಡಿವೈಎಸ್‌ಪಿ ಅಯ್ಯನಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ಭಾರಿ ವಾಹನಗಳು ಸೇರಿದಂತೆ ಇತರೆ ವಾಹನ ಚಾಲಕರ ಬಳಿ ಹಣ ವಸೂಲಿ ಮಾಡಿದ ಆರೋಪ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

Exit mobile version