ಹೈದ್ರಾಬಾದ್: ಟಿಆರ್‌ಎಸ್ ಶಾಸಕರ ಖರೀದಿ ಯತ್ನ (MLA poaching case) ಪ್ರಕರಣದ ತನಿಖೆ ನಡೆಸುತ್ತಿರುವ ತೆಲಂಗಾಣದ ವಿಶೇಷ ತನಿಖಾ ತಂಡ(ಎಸ್ಐಟಿ)ವು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh), ತುಷಾರ್ ವೆಲ್ಲಪಳ್ಳಿ ಮತ್ತು ಜಗ್ಗು ಸ್ವಾಮಿ ವಿರುದ್ದ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಈ ಮೂವರಿಗೆ ಎಸ್ಐಟಿ ಸಮನ್ಸ್ ನೀಡಿತ್ತು. ಆದರೆ, ಗೈರು ಹಾಜರಾದ್ದರಿಂದ ಈಗ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ.
ವಿಚಾರಣೆಗೆ ಬೇಕಾಗಿರುವ ವ್ಯಕ್ತಿಗಳು ದೇಶವನ್ನು ಬಿಟ್ಟು ತೊರೆಯಬಾರದು ಅಥವಾ ತಲೆಮರೆಸಿಕೊಳ್ಳಬಾರದು ಎಂಬ ಕಾರಣಕ್ಕೆ ಕಾನೂನು ಜಾರಿ ಸಂಸ್ಥೆಗಳು ಲುಕ್ ಔಟ್ ನೋಟಿಸ್ ಹೊರಡಿಸುತ್ತವೆ. ಟಿಆರ್‌ಎಸ್ ಪಕ್ಷದ ಶಾಸಕರ ಖರೀದಿಗೆ ಈ ಮೂವರು ಮುಂದಾಗಿದ್ದರು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಅಸ್ಥಿರಗೊಳಿಸುವ ಅಪರಾಧ ಉದ್ದೇಶವನ್ನು ಹೊಂದಿದ್ದರು ಎಂದು ಲುಕ್‌ಔಟ್ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಶಾಸಕರ ಖರೀದಿ ಯತ್ನ ಪ್ರಕರಣ ಸಂಬಂಧ ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿಯು ಬಿ. ಎಲ್ ಸಂತೋಷ್, ವೆಲ್ಲಪಳ್ಳಿ ಮತ್ತು ಜಗ್ಗು ಸ್ವಾಮಿ ಅವರಿಗೆ ನೋಟಿಸ್ ನೀಡಿತ್ತು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿಯ ಕಚೇರಿಗೆ ಈ ನೋಟಿಸ್ ನೀಡಲಾಗಿತ್ತು. ಒಂದೊಮ್ಮೆ ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ಸಾಧ್ಯತೆಯೂ ಇರುತ್ತದೆ ಎಂದು ತನಿಖಾಧಿಕಾರಿಯಾಗಿರುವ ಬಿ. ಗಂಗಾಧರ್ ಅವರು ಎಚ್ಚರಿಸಿದ್ದರು.
ಇದನ್ನೂ ಓದಿ | B L Santosh | ಬಿ.ಎಲ್. ಸಂತೋಷ್‌ಗೆ ತೆಲಂಗಾಣ ಎಸ್‌ಐಟಿ ಸಮನ್ಸ್, ಏನಿದು ಪ್ರಕರಣ?