Site icon Vistara News

Rain News | ಸೇತುವೆ ಮೇಲಿಂದ ಬಿದ್ದ ಲಾರಿ: ನದಿಯಲ್ಲಿ ಸಿಲುಕಿದ್ದ ಮಾಲೀಕನ ರಕ್ಷಣೆ, ಚಾಲಕ ಕಣ್ಮರೆ

Rain News

ಬಳ್ಳಾರಿ: ಭತ್ತ ತುಂಬಿದ ಲಾರಿಯೊಂದು ಸಿರುಗುಪ್ಪ ತಾಲೂಕಿನ ರಾರಾವಿ ಸೇತುವೆ ಮೇಲಿಂದ ನದಿಗೆ ಬಿದ್ದಿದೆ. ಲಾರಿಯಲ್ಲಿದ್ದ ಮಾಲೀಕ ಮಹ್ಮದ್ ಹುಸೇನ್ ಅವರನ್ನು ಜಿಲ್ಲಾ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಕ್ಲೀನರ್ ಹುಸೇನ್‌ಗಾಗಿ (Rain News) ಕಾರ್ಯಾಚರಣೆ ನಡೆಯುತ್ತಿದೆ.

ಲಾರಿಯಲ್ಲಿ ಸಿಲುಕಿದವರು ಕರ್ನೂಲ್ ಜಿಲ್ಲೆಯ ಕೊಟ್ಟೂರು ಗ್ರಾಮದವರು ಎಂದು‌ ಹೇಳಲಾಗುತ್ತಿದೆ. ರಾತ್ರಿಯಿಡಿ ನದಿಯಲ್ಲಿ ಸಿಲುಕಿ ಗಿಡದ ಆಸರೆ ಪಡೆದಿದ್ದ ಲಾರಿಯ ಮಾಲೀಕ ಮಹ್ಮದ್ ಹುಸೇನ್ (65) ಅವರನ್ನು ಬುಧವಾರ (ಆ.3) ಬೆಳಗ್ಗೆ ಅಗ್ನಿ ಶಾಮಕ ಸಿಬ್ಬಂದಿ ರಕ್ಷಿಸಿದರು.

ಇದೀಗ ಡಿಸಿ ಪವನ್ ಕುಮಾರ್ ಮಾಲಪಾಟಿ, ಎಸ್ಪಿ‌ ಸೈದುಲಾ ಅಡಾವತ್, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ತಿಮ್ಮಾರೆಡ್ಡಿಯವರ ನಿರ್ದೇಶನದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ‌‌. ಅಧಿಕಾರಿಗಳು ಮಧ್ಯರಾತ್ರಿಯೇ ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ | Rain news | ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ರೈತ ಶವವಾಗಿ ಪತ್ತೆ

ಭತ್ತದ ತೌಡು ಲಾರಿ ಪಲ್ಟಿ
ಸಿರುಗುಪ್ಪ ಮತ್ತು ಆಂಧ್ರಪ್ರದೇಶದ ಆದೋನಿಗೆ ಸಂಪರ್ಕ ಕಲ್ಪಿಸುವ ರಾರಾವಿ ಸೇತುವೆ ಇದಾಗಿದೆ. ಮಂಗಳವಾರ (ಆ.3) ರಾತ್ರಿ ಆದೋನಿ ಕಡೆಯಿಂದ ಬರುತ್ತಿದ್ದ, ಭತ್ತದ ತೌಡು ತುಂಬಿದ ಲಾರಿ ಸೇತುವೆ ಮೇಲೆ ಹಾದು ಹೋದಾಗ ನದಿಯ ನೀರಿನ ರಭಸಕ್ಕೆ ಲಾರಿ ಪಲ್ಟಿ ಹೊಡೆದಿದೆ‌.

ರಕ್ಷಣೆಗೆ ಹೋದವರು ನದಿಯಲ್ಲಿ ಸಿಲುಕಿದರು
ವಿಷಯ ತಿಳಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಆಧಿಕಾರಿಗಳು, ತಹಸೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ, ಲಾರಿಯಲ್ಲಿದ್ದವರನ್ನು ರಕ್ಷಣೆಗೆ ಎಂದು ಹೋಗಿದ್ದರು. ಅಗ್ನಿ ಶಾಮಕ ಸಿಬ್ಬಂದಿ ಮತ್ತು ಮತ್ತೊಬ್ಬರು ನದಿಯಲ್ಲಿ ಸಿಲುಕಿದ್ದು ಆತಂಕಕ್ಕೆ ಕಾರಣವಾಗಿತ್ತು. ಕೂಡಲೇ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಂದು ಸಿಬ್ಬಂದಿ ಮತ್ತು ರಕ್ಷಣೆಗೆ ಹೋದವರನ್ನು ರಕ್ಷಿಸಿದರು.

ಇದನ್ನೂ ಓದಿ | Rain news | ವೇದಾವತಿ ನದಿಯಲ್ಲಿ ಸಿಲುಕಿದ್ದ 24 ಮಂದಿ ರಕ್ಷಣೆ

Exit mobile version