Site icon Vistara News

Chemical leakage : ರಾಸಾಯನಿಕ ತುಂಬಿದ ಟ್ಯಾಂಕರ್‌ ಪಲ್ಟಿ, ಅನಿಲ ಸೋರಿಕೆಯಿಂದ ಹೆದ್ದಾರಿ ಸಂಚಾರ ಬಂದ್‌

Chemical leakage

#image_title

ಉಳ್ಳಾಲ: ಕೇರಳದ ಕೊಚ್ಚಿಯಿಂದ ಬೈಕಂಪಾಡಿ ಪೈಂಟ್ ತಯಾರಿಕಾ ಇಂಡಸ್ಟ್ರಿಗೆ ರಾಸಾಯನಿಕ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಪಲ್ಟಿಯಾಗಿದೆ. ಚಾಲಕ ಮಯೂರ್ (40) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅವರನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಹೆದ್ದಾರಿ ಮಧ್ಯೆಯೇ ವಾಹನ ಪಲ್ಟಿಯಾಗಿ ಅನಿಲ ಸೋರಿಕೆಯಾಗಿದ್ದರಿಂದ (Chemical leakage) ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನಡು ರಸ್ತೆಯಲ್ಲೇ ಉರುಳಿದ್ದ ರಾಸಾಯನಿಕ ಟ್ಯಾಂಕರಿನಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿ ಪರಿಸರವಿಡೀ ದುರ್ವಾಸನೆ ಬೀರುತಿತ್ತು. ಲಾರಿ ಹಾಗೂ ಗ್ಯಾಸ್ ಹೊಂದಿದ್ದ ಟ್ಯಾಂಕರ್ 10 ಗಂಟೆಗೆ ಉರುಳಿದ್ದು ತೆರವು ಕಾರ್ಯಾಚರಣೆ ತಡರಾತ್ರಿ 1 ಗಂಟೆಯವರೆಗೆ ನಡೆಯಿತು. ಅಗ್ನಿ ಶಾಮಕ ದಳ, ಎಸಿಪಿ ಧನ್ಯಾ ಎನ್. ನಾಯಕ್, ದಕ್ಷಿಣ ಸಂಚಾರಿ ಠಾಣೆಯ ರಮೇಶ್ ಹಾನಾಪುರ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಯಸ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

ವಿದ್ಯುತ್‌ ದೀಪ ಆರಿಸಿ ಕಾರ್ಯಾಚರಣೆ

ಸ್ಥಳಕ್ಕಾಗಮಿಸಿದ ಬೈಕಂಪಾಡಿ ಬಿಎಎಸ್ ಎಫ್ ಸುರಕ್ಷಾ ತಂಡ ಸಮೀಪದ ವಾಣಿಜ್ಯ ಮಳಿಗೆಗಳ ವಿದ್ಯುತ್ ದೀಪಗಳನ್ನು ಆರಿಸಲು ಸೂಚನೆ ನೀಡಿತು. ರಾ.ಹೆ.66 ರ ಎರಡೂ ಕಡೆಗಳಲ್ಲಿ ವಾಹನಗಳು ಸಂಚರಿಸದಂತೆ ಸಂಚಾರಿ ಠಾಣಾ ಪೊಲೀಸರು ತಡೆಹಿಡಿದಿದ್ದರು.

ಬಿಎಎಸ್‌ಎಫ್‌ನಿಂದ ಬಂದ ಬೃಹತ್ ಗಾತ್ರದ ಕ್ರೇನ್ ಸಹಿತ ಎರಡು ಸಣ್ಣ ಕ್ರೇನ್‌ಗಳನ್ನು ಬಳಸಿಕೊಂಡು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ಮೊದಲಿಗೆ ಲಾರಿಯನ್ನು ಮೇಲಕ್ಕೆತ್ತಿ, ಆನಂತರ ಟ್ಯಾಂಕರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ, ಇನ್ನೊಂದು ಲಾರಿಗೆ ಲೋಡ್ ಮಾಡಿ ತಕ್ಷಣ ಕಳುಹಿಸಲಾಯಿತು.

ರಾಸಾಯನಿಕ ಹೊಂದಿರುವ ಟ್ಯಾಂಕ್ ಹಲವು ಪದರಗಳು ಹಾಗೂ ಸುತ್ತಲೂ ಕಬ್ಬಿಣದ ಸುರಕ್ಷಾ ಕವಚ ಇರುವುದರಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿದೆ. ಸಾಬೂನಿಗೆ ಹಾಕುವ ರಾಸಾಯನಿಕ ಆಗುವುದರಿಂದ ಅಷ್ಟೊಂದು ಪರಿಣಾಮಲೊಕಾರಿಯಾಗಿರುವುದಿಲ್ಲ ಎಂದು ಬಿಎಎಸ್ ಎಫ್ ಸುರಕ್ಷಾ ಅಧಿಕಾರಿ ತಿಳಿಸಿದ್ದಾರೆ. ಯಶಸ್ವಿ ತೆರವು ಕಾರ್ಯಾಚರಣೆ ನಂತರ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು. ಉಳ್ಳಾಲ ಶಾಸಕ ಯು.ಟಿ ಖಾದರ್ ಅವರು ಬೆಂಗಳೂರು ಭೇಟಿಯಲ್ಲಿದ್ದರೂ ಆಪ್ತಸಹಾಯಕ ಪ್ರವೀಣ್ ಅವರನ್ನು ಸ್ಥಳಕ್ಕೆ ಕಳುಹಿಸಿ ತೆರವು ಕಾರ್ಯಾಚರಣೆ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡರು.

ಇದನ್ನೂ ಓದಿ : Road accident : ಮದ್ಯ ಸಾಗಿಸುತ್ತಿದ್ದ ಲಾರಿ ಅದಿರು ಸಾಗಾಟದ ಲಾರಿ ಡಿಕ್ಕಿ; ಚಾಲಕ ಸ್ಥಳದಲ್ಲೇ ಮೃತ್ಯುವಶ

Exit mobile version