Site icon Vistara News

Lorry strike: ಬೆಂಗಳೂರಲ್ಲಿ ಮಾ. 17ರಿಂದ ಹಾಲು-ತರಕಾರಿ ಇಲ್ಲ? ಇದು ಲಾರಿ ಚಾಲಕರ ಮುಷ್ಕರ ಎಫೆಕ್ಟ್‌

APMC shift from Yeshwantpur to Dasanpur, Notice from the Government

APMC shift from Yeshwantpur to Dasanpur, Notice from the Government

ಬೆಂಗಳೂರು: ರಾಜಧಾನಿಯಲ್ಲಿ ಬೆಳಗ್ಗೆ- ಸಂಜೆ ಲಾರಿಗಳ ಪ್ರವೇಶವನ್ನು ನಿಷೇಧ (Entry ban) ಮಾಡಲಾಗಿದ್ದು, ಇದಕ್ಕೆ ಲಾರಿ ಮಾಲೀಕರಿಂದ (Lorry strike) ಭಾರಿ ವಿರೋಧ ಕೇಳಿ ಬಂದಿದೆ. ಬೆಳಗ್ಗೆ 7 ರಿಂದ 11 ಹಾಗೂ ಸಂಜೆ 4ರಿಂದ 9 ರವರೆಗೆ ನಗರ ಪ್ರವೇಶಿಸದಂತೆ ನಿರ್ಬಂಧ ಹಾಕಲಾಗಿದೆ. ಹೀಗಾಗಿ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ನಿತ್ಯ ಸಾವಿರಾರು ಲಾರಿಗಳು ಪೀಕ್‌ ಸಮಯದಲ್ಲಿ ನಗರ ಪ್ರವೇಶಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹೀಗಾಗಿ ಸಂಚಾರ ದಟ್ಟಣೆಯ ಸಮಯವಾದ ಬೆಳಗ್ಗೆ ಹಾಗೂ ಸಂಜೆ ಹೊತ್ತು ಲಾರಿ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಈ ಆದೇಶವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಫೆಡರೇಶನ್‌ ಹಾಗೂ ಏಜೆಂಟ್‌ಗಳ ಅಸೋಸಿಯೇಶನ್‌ ಅಧ್ಯಕ್ಷ ಷಣ್ಮುಗಪ್ಪ ಇದೇ ತಿಂಗಳ 17ರಿಂದ ಸರಕು ಸಾಗಾಣಿಕೆಯನ್ನು ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಮಾ.17ರ ಮಧ್ಯರಾತ್ರಿಯಿಂದಲೇ ಎಲ್ಲ ರೀತಿಯ ಸರಕು ಸಾಗಾಣಿಕೆ ವಾಹನಗಳ ನಗರ ಪ್ರವೇಶ ನಿಲ್ಲಿಸಿ ಪ್ರತಿಭಟಿಸುವುದಾಗಿ ಹೇಳಿದ್ದಾರೆ. ಸರಕು ತಂದ ವಾಹನಗಳನ್ನು ನಗರದ ಹೊಸೂರು, ದೇವನಹಳ್ಳಿ, ಔಟರ್ ರಿಂಗ್ ರೋಡ್, ಹೈದ್ರಾಬಾದ್ ರಸ್ತೆ ಸೇರಿ ಹೊರವಲಯದಲ್ಲಿ ನಿಲ್ಲಿಸುವ ಸ್ಥಿತಿಯಿದೆ. ಸಮರ್ಪಕ ಪಾರ್ಕಿಂಗ್, ಮೂಲಸೌಲಭ್ಯ ಇಲ್ಲದೆ ವಾಹನ ಚಾಲಕರು, ಕ್ಲೀನ‌ರ್‌ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮತ್ತೊಂದು ಕಡೆ ಉಳಿದ ಸಮಯದಲ್ಲಿ ನಗರದಲ್ಲಿ ವಾಹನಗಳಿದ್ದರೆ ಹೆಚ್ಚು ದಂಡ ವಿಧಿಸಲಾಗುತ್ತಿದೆ. ಪ್ರತಿನಿತ್ಯ ನಗರಕ್ಕೆ ಸುಮಾರು 600 ಮಧ್ಯಮ ಗಾತ್ರದ ವಾಹನಗಳು ಸರಕು ಹೊತ್ತು ತರುತ್ತವೆ. ಇವುಗಳನ್ನು ನಿರ್ಬಂಧಿಸಿರುವ ಕಾರಣ ಚಿಕ್ಕ ವಾಹನಗಳಲ್ಲಿ ಸರಕನ್ನು ತುಂಬಿ ನಾಲ್ಕೈದು ಬಾರಿ ನಗರಕ್ಕೆ ಕಳುಹಿಸಬೇಕಾಗಿದೆ.

ಈ ಕಾರಣದಿಂದಲೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಸಂಚಾರಿ ಪೊಲೀಸರು ತಕ್ಷಣ ಈ ನಿರ್ಧಾರ ಹಿಂಪಡೆಯದಿದ್ದರೆ ಧರಣಿ ನಡೆಸಲು ಸಜ್ಜಾಗುತ್ತೇವೆ. ಇದರಿಂದ ಹಣ್ಣು, ತರಕಾರಿ, ಔಷಧ ಸೇರಿ ಅಗತ್ಯ ವಸ್ತುಗಳ ಕೊರತೆ ಉಂಟಾದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: NHM Workers Protest: ಉಪವಾಸನಿರತ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರು ಅಸ್ವಸ್ಥ; ನಾ ಕೊಡೆ ನೀ ಬಿಡೆ ಪರಿಸ್ಥಿತಿ

ರೆಟ್ರೋ ರಿಫ್ಲೆಕ್ಟರ್‌ ಕಡ್ಡಾಯ ಹಿಂಪಡೆಯಿರಿ

ಇಲಾಖೆ ಕ್ಯೂಆರ್‌ ಕೋಡ್‌ ಆಧಾರಿತ ರೆಟ್ರೋ ರಿಫ್ಲೆಕ್ಟರ್‌ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕು. ಇದರ ವಿತರಣೆಯಲ್ಲಿ ಆರ್‌ಟಿಒ ಕಚೇರಿಗಳಲ್ಲಿ ವ್ಯಾಪಕ ಹಣ ಲೂಟಿ ಮಾಡಲಾಗುತ್ತಿದೆ. ಇತರೆ ರಾಜ್ಯಗಳಲ್ಲಿ ಒಂದು ಮೀಟರ್‌ ರೆಟ್ರೋ ರಿಫ್ಲೆಕ್ಟರ್‌ಗೆ 60-70 ರೂ. ಇದ್ದು, ನಮ್ಮ ರಾಜ್ಯದಲ್ಲಿ 120 ರೂಪಾಯಿಗೆ ಮಾರಲಾಗುತ್ತಿದೆ. ಇದು ವಿಪರೀತ ಹೊರೆಯಾಗಿದ್ದು, ಮಧ್ಯಮ ಗಾತ್ರದ ಲಾರಿಗಳಿಗೆ 6-7 ಸಾವಿರ ಖರ್ಚಾಗುತ್ತಿದೆ ಎಂದು ಲಾರಿ ಮಾಲೀಕರ ಸಂಘ ಆರೋಪ ಮಾಡಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version