ಬೆಂಗಳೂರು: ಹಿಟ್ ಆ್ಯಂಡ್ ರನ್ (Hit And Run law) ಅಪಘಾತ ಪ್ರಕರಣದಲ್ಲಿ ಹೊಸ ತಿದ್ದುಪಡಿ ಕೈ ಬಿಡುವಂತೆ ಆಗ್ರಹಿಸಿ ಜನವರಿ 17 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ (Lorry strike) ಕರೆ ನೀಡಲಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕಾನೂನು ತಿದ್ದುಪಡಿ ಮಾಡಲು ಹೊರಟಿರುವ ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 7 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದ ರಸ್ತೆ ಸಂಚಾರಿ ಕಾನೂನು ತಿದ್ದುಪಡಿ ವಿರೋಧಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘ ಜನವರಿ 17 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಲಾರಿ ಮುಷ್ಕರದಿಂದ ರಾಜ್ಯದಲ್ಲಿ ಅಗತ್ಯವಸ್ತುಗಳ ಸಾಗಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬೆಂಗಳೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ನವೀನ್ ರೆಡ್ಡಿ, ತಮಿಳುನಾಡು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೆಲ್ಲಾ ರಾಜಮಣಿ, ತಮಿಳುನಾಡು ಸಂಘದ ಡಿ. ಅಕ್ಬರ್, ಕೇರಳ ಸಂಘದ ಶಾಜು, ಆಂಧ್ರಪ್ರದೇಶದ ಬಾಷಾ ಬಾನ್ ಮತ್ತು ಮಹಾರಾಷ್ಟ್ರ ಸಂಘದ ಅಧ್ಯಕ್ಷ ಶಂಕರ ದಾದಾ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಕೇಂದ್ರ ಸರ್ಕಾರ ಲಾರಿ ಮಾಲೀಕರ ವಿಚಾರದಲ್ಲಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಹಿಟ್ ಆ್ಯಂಡ್ ರನ್ ಪ್ರಕರಣವನ್ನು ತನಗೆ ಬೇಕಾದಂತೆ ತಿರುಚುತ್ತಿದೆ. ಅಪಘಾತ ಎಂಬ ಶಬ್ಧವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾರೋ ನಿರ್ಲಕ್ಷ್ಯದಿಂದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದರೂ ಲಾರೀ ಮಾಲೀಕರನ್ನು ದೂಷಿಸಲಾಗುತ್ತಿದೆ. ನಿರ್ಲಕ್ಷ್ಯ ಚಾಲನೆಗೆ ಇರುವ ಹಾಲಿ ನಿಯಮಗಳನ್ನು ಸರಿಯಾಗಿ ಜಾರಿಗೆ ತಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಕುರಿತಂತೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ. ರಾಷ್ಟ್ರಪತಿಯವರ ಅಂಕಿತ ದೊರತರೆ ಕಾನೂನು ಸ್ವರೂಪ ಪಡೆಯಲಿದೆ. ಹೀಗಾಗಿ ಸರ್ಕಾರ ಈ ಕಾನೂನು ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Karnataka weather : ರಾಜ್ಯದಲ್ಲಿ ಮಂಕಾದ ಮಳೆ; ಜೋರಾಗಿ ಬೀಸಲಿದೆ ಥಂಡಿ ಗಾಳಿ
ಯಾವುದಾದರೂ ಅಪಘಾತವಾದರೆ ಚಾಲಕರ ಮೇಲೆ ಹಲ್ಲೆ ನಡೆಯುತ್ತದೆ. ಹಿಂದಿನ ಚಕ್ರಕ್ಕೆ ಬೈಕ್ ಸಿಕ್ಕರೆ ಕೂಡಲೇ ಭಾರಿ ವಾಹನ ನಿಲ್ಲಿಸುವುದು ಸುಲಭವಿಲ್ಲ. ಒಂದು ವೇಳೆ ಲಾರಿ ನಿಲ್ಲಿಸಿ ಬಂದರೆ ಅಲ್ಲಿರುವ ಜನರು ಚಾಲಕನ ಮೇಲೆ ಹಲ್ಲೆ ಮಾಡುತ್ತಾರೆ. ಆತ್ಮರಕ್ಷಣೆಗಾಗಿ ಲಾರಿ ಚಾಲಕರು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹೋಗುತ್ತಾರೆ. ಆದರೆ ಇಂತಹ ಘಟನೆಗಳಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ಎಂದು ದಾಖಲು ಮಾಡುವುದು ಎಷ್ಟು ಸರಿ ಎಂದು ಮಾಲೀಕರು ಪ್ರಶ್ನಿಸಿದ್ದಾರೆ.
ಅಸೋಸಿಯೇಷನ್‌ನಲ್ಲಿ ಸುಮಾರು 6 ಲಕ್ಷ ಮಾಲೀಕರು, ರಾಜ್ಯದಲ್ಲಿ ಸುಮಾರು 15 ಲಕ್ಷ ಲಾರಿ ಚಾಲಕರಿದ್ದಾರೆ. ನೆರೆಯ ಮಹಾರಾಷ್ಟ್ರದಲ್ಲಿ ಕೂಡ ಲಾರಿ ಮುಷ್ಕರ ನಡೆಯುತ್ತಿದೆ. ಪರಿಣಾಮವಾಗಿ ಕೆಲವೆಡೆ ಇಂಧನ ಕೊರತೆ ಭೀತಿ ಎದುರಾಗಿತ್ತು. ಹೊಸ ನಿಯಮದಿಂದಾಗಿ ಟ್ರಕ್ ಚಾಲಕರು ಅನಗತ್ಯ ಕಿರುಕುಳವನ್ನು ಎದುರಿಸಬೇಕಾಗಬಹುದು ಎಂದು ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಕೂಡ ಹೇಳಿದ್ದು, ಕಾನೂನನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಶೇ 70 ರಷ್ಟು ಸರಕು ಸಾಗಾಣೆ ರಸ್ತೆ ಸಾರಿಗೆಯನ್ನು ಅವಲಂಬಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ ಮೂರು ರೂಪಾಯಿ ಟೋಲ್ ಶುಲ್ಕ ಸಂಗ್ರಹ ಮಾಡುತ್ತಿದ್ದರೂ ಸಹ ರಸ್ತೆ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನವರಿ 3 ರಂದು ನಡೆದ ಸಂಘದ ಸಭೆಯಲ್ಲಿ ಪ್ರತಿಭಟನೆ ನಡಸಲು ತೀರ್ಮಾನಿಸಲಾಗಿತ್ತು. ಇದೀಗ ಅನಿರ್ದಿಷ್ಟ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ನಮ್ಮ ಮುಷ್ಕರದಿಂದ ಆಂಬ್ಯಲೆನ್ಸ್, ಔಷಧಿ, ಆಸ್ಪತ್ರೆ, ಅಗತ್ಯ ವಸ್ತುಗಳ ವಾಹನಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ