ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ಹೊಸಕೋಟೆ ನಗರದ ಪಾರ್ವತಿಪುರದಲ್ಲಿ ಶಾಲಾ ಶಿಕ್ಷಕ ಹಾಗೂ ಮಗನ ಕಿರುಕುಳಕ್ಕೆ (Torture) ವಿದ್ಯಾರ್ಥಿನಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾರಾ (16) ಎಂಬಾಕೆ ಫ್ಯಾನಿಗೆ ನೇಣು ಬಿಗಿದು ಮೃತಪಟ್ಟಿದ್ದಾಳೆ.
ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಸಾರಾ ಜೂ. 20ರಂದು ಶಾಲೆ ಮುಗಿಸಿ ಮನೆಗೆ ವಾಪಸ್ ಆದವಳು ಮಂಕಾಗಿದ್ದಳು. ಏನೋ ಕಳೆದುಕೊಂಡವಳಂತೆ ಇದ್ದ ಮಗಳನ್ನೂ ಪೋಷಕರು ಗಮನಿಸಿದ್ದರು. ಇತ್ತ ನೆಪಕ್ಕೆ ಊಟ ಮುಗಿಸಿದ ಸಾರಾ, ಡ್ರೆಸ್ ಚೇಂಜ್ ಮಾಡುವುದಾಗಿ ಹೇಳಿ ರೂಮಿಗೆ ಹೋದವಳು ಗಂಟೆಯಾದರೂ ಹೊರಗೆ ಬಂದಿಲ್ಲ. ಎಷ್ಟೇ ಬಾಗಿಲು ಬಡಿದರೂ ಹೊರಗೆ ಬಾರದೆ ಇದ್ದಾಗ ಅನುಮಾನಗೊಂಡು ಬಾಗಿಲು ಹೊಡೆದು ನೋಡಿದಾಗ, ಸಾರಾ ವೇಲ್‌ನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಳು. ಕೂಡಲೇ ಆಕೆಯನ್ನು ಪೋಷಕರು ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿದ್ದರು. ಆದರೆ ಅದಾಗಲೇ ಸಾರಾ ಮೃತಪಟ್ಟಿದಾಗಿ ವೈದ್ಯರು ಖಚಿತ ಪಡಿಸಿದ್ದರು.
ಶಾಲೆಯಲ್ಲಿ ಶಿಕ್ಷಕರ ಕಿರುಕುಳ
ಆ ಸಮಯದಲ್ಲಿ ಮಗಳ ಸಾವಿಗೆ ಕಾರಣವೇನು ಎಂದು ತಿಳಿಯದ ಕಾರಣಕ್ಕೆ ಸಾರಾ ಪೋಷಕರು ಸುಮ್ಮನಾಗಿದ್ದರು. ಈ ನಡುವೆ ಸಂಬಂಧಿಕರ ಮಗಳೊಂದಿಗೆ ಸಾರಾ ಬಗ್ಗೆ ವಿಚಾರಿಸಿದಾಗ, ಶಾಲೆಯ ಶಿಕ್ಷಕರಾದ ನಳಿನ ಹಾಗೂ ಖಮರ್ ತಾಜ್ ಎಂಬುವವರು ಚಿಕ್ಕಪುಟ್ಟ ವಿಷಯಕ್ಕೂ ಎಲ್ಲರ ಮುಂದೆ ಸಾರಾಗೆ ಬೈಯುವುದು, ಹೀಯಾಳಿಸುವುದು ಮಾಡುತ್ತಿದ್ದರು. ಸಾರಾ ಆತ್ಮಹತ್ಯೆಗೂ ಮುನ್ನ ಶಾಲೆಯಲ್ಲಿ ನೂರು ಸಲ ಬಸಕಿಯನ್ನು ಹೊಡೆಸಿದ್ದರು ಎನ್ನಲಾಗಿದೆ. ಈ ಘಟನೆಯಿಂದಲೂ ಸಾರಾ ಮನನೊಂದಿದ್ದಳು.
ಇತ್ತ ಎಲ್ಲರ ಮುಂದೆ ಶಿಕ್ಷಕಿ ನಳಿನ ಸಾರಾಗೆ ನಿನ್ನ ಮುಖ ನಾನು ನೋಡುವುದಿಲ್ಲ. ಕೊನೆ ಬೆಂಚಿಗೆ ಹೋಗಿ ಕುಳಿತುಕೊ ಎಂದು ಹೇಳುತ್ತಿದ್ದರು ಎನ್ನಲಾಗಿದೆ. ಸಾರಾ ಆತ್ಮಹತ್ಯೆ ಮಾಡಿಕೊಂಡ ದಿನವೇ ನಳಿನ ಮತ್ತು ಖಮರ್ ತಾಜ್ ಪ್ರತ್ಯೇಕ ಕೊಠಡಿಗೆ ಕರೆಯಿಸಿದ್ದರು. ಅರ್ಧ ಗಂಟೆ ನಂತರ ಹೊರಗೆ ಬರುವಾಗ ಸಾರಾ ಕಣ್ಣೀರು ಹಾಕಿಕೊಂಡು ಬಂದಿದ್ದಾಳೆ. ಮಾನಸಿಕವಾಗಿ ನೊಂದಿದ್ದ ಸಾರಾ ಸ್ನೇಹಿತರ ಜತೆಗೆ ನಾನು ಇನ್ನೂ ಬದುಕುವುದಿಲ್ಲ, ಸಾಯುತ್ತೇನೆ ಎಂದು ಹೇಳಿದ್ದಳು. ಈ ಬಗ್ಗೆ ದೂರಿನಲ್ಲಿ ಪೋಷಕರು ಉಲ್ಲೇಖಿಸಿದ್ದಾರೆ.
ಶಿಕ್ಷಕ ಖಮರ್ ತಾಜ್‌ನ ಮಗನ ಪ್ರೇಮ ಪುರಾಣ
ಶಿಕ್ಷಕ ಖಮರ್ ತಾಜ್‌ನ ಮಗ ಹಮಿನ್ ಎಂಬಾತ ಸಾರಾ ಹಿಂದೆ ಬಿದ್ದಿದ್ದ. ಸುಮಾರು ದಿನಗಳಿಂದ ನನ್ನನ್ನು ಪ್ರೀತಿಸು ಎಂದು ಹಿಂಬಾಲಿಸುತ್ತಿದ್ದ. ಅಲ್ಲದೆ ಹಮಿನ್ ಅವನ ಸ್ನೇಹಿತರೊಂದಿಗೆ ಸಾರಾಳನ್ನು ಪ್ರೀತಿಸುತ್ತಿದ್ದೆನೆ, ಮದುವೆಯೂ ಆಗುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಈ ವಿಷಯವು ಶಿಕ್ಷಕ ಖಮರ್ ತಾಜ್ ಕಿವಿಗೆ ಬಿದ್ದಿದೆ. ಹೀಗಾಗಿ ಜೂ. 17ರಂದು ನಳಿನ ಮತ್ತು ಖಮರ್ ತಾಜ್ ಸೇರಿ ಸಾರಾಳನ್ನು ಶಾಲೆಯ ಟೆರಸ್ ಮೇಲೆ ಕರೆದುಕೊಂಡು ಹೋಗಿದ್ದಾರೆ. ಸಾರಾಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಪೋಷಕರು ಆರೋಪಿಸಿದ್ದಾರೆ.
ಇದನ್ನೂ ಓದಿ: Medical Negligence : ವೈದ್ಯರ ನಿರ್ಲಕ್ಷ್ಯಕ್ಕೆ 4 ತಿಂಗಳ ಮಗು ಬಲಿ? ಆಕ್ಸಿಜನ್ ಹಾಕಿದ 10 ನಿಮಿಷಕ್ಕೆ ಮೃತ್ಯು!
ಇತ್ತ ಹಮಿನ್ ಕೂಡ ಸಾರಾಗೆ ಬೆದರಿಕೆ ಹಾಕಿ ನೀನು ಹೀಗೆ ಮಾಡಿದರೆ ನಮ್ಮ ಅಣ್ಣನನ್ನು ಕರೆಸಿ ತಕ್ಕಪಾಠ ಕಲಿಸುತ್ತೇನೆ ಬ್ಲ್ಯಾಕ್ ಮಾಡುತ್ತಿದ್ದ. ಈ ಮೂವರು ಸೇರಿ ಮಗಳಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಇತ್ತ ನಳಿನ ಸಾರಾ ಸಂಬಂಧಿಗೆ ಕರೆ ಮಾಡಿ ನನ್ನ ಬಗ್ಗೆ ಏನಾದರೂ ಸಾರಾ ವಿಷಯ ಹೇಳಿದ್ದಳಾ, ಚೀಟಿ ಬರೆದಿದ್ದಳಾ ಎಂದು ಕೇಳಿದ್ದಾರಂತೆ. ವಿಷಯ ತಿಳಿಯುತ್ತಿದ್ದಂತೆ ಶಿಕ್ಷಕ ಖಮರ್ ತಾಜ್ ಶಾಲೆಗೆ ರಜೆ ಹಾಕಿ ನಾಪತ್ತೆ ಆಗಿದ್ದಾನೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ