ಹುಬ್ಬಳ್ಳಿ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಜನರ ಪ್ರೀತಿಗೆ ಪಾತ್ರವಾಗಿದ್ದ (Love for animals) ಕೋತಿಯೊಂದು ಮೃತಪಟ್ಟಿದ್ದು, ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಈ ಕೋರಿ ಗ್ರಾಮದ ಜನರೊಂದಿಗೆ ಉತ್ತಮ ಒಡನಾಟ ಹೊಂದಿತ್ತು. ಯಾರಾದರೂ ಕರೆದು ಹಣ್ಣು, ರೊಟ್ಟಿ, ತಿನಿಸು ಕೊಟ್ಟರೆ ತಿನ್ನುತ್ತಿತ್ತು. ಯಾರಿಗೂ ತೊಂದರೆ ಕೊಡದೆ ಗ್ರಾಮದಲ್ಲಿ ಜನರ ಜತೆ ಒಂದಾಗಿ ಬಾಳುತ್ತಿತ್ತು. ಮಡಕಿಹೊನ್ನಳ್ಳಿ ಗ್ರಾಮದ ಮಕ್ಕಳೊಂದಿಗೆ ಆಟವಾಡುತ್ತಾ ಎಲ್ಲರೊಂದಿಗೂ ಆತ್ಮೀಯವಾಗಿ ವರ್ತಿಸುತ್ತಿತ್ತು.
ಜನರು ಕೂಡ ಹನುಮ ಎಂದು ಕರೆಯುತ್ತಾ ಪ್ರೀತಿಯಿಂದ ನೋಡುತ್ತಿದ್ದರು. ಗ್ರಾಮದ ದೇವಸ್ಥಾನಗಳ ಸುತ್ತಮುತ್ತ ಓಡಾಡಿಕೊಂಡಿದ್ದ ಮಂಗ ಬಹಳ ಶಾಂತ ಸ್ವಭಾವದ್ದಾಗಿತ್ತು. ಆದರೆ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಹನುಮ ಊಟ, ನೀರು ಬಿಟ್ಟು ಒಂದೆಡೆ ಕುಳಿತುಕೊಳ್ಳುತ್ತಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲಿದ ಗ್ರಾಮದ ಜನರ ಪ್ರೀತಿಯ ಹನುಮ ಇಹ ಲೋಕ ತ್ಯಜಿಸಿದೆ.
ಹನುಮನ ಅಗಲಿಕೆಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಮಕ್ಕಳು ಮಂಗನ ಮೃತದೇಹವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಹೂಮಾಲೆ ಹಾಕಿ, ಅಗರಬತ್ತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ. ಅಗಲಿದ ಹನುಮನ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ನಂತರ ಊರ ಹೊರಗಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಇದನ್ನೂ ಓದಿ : Valentines day 2023 : ಉಡುಪಿಯಲ್ಲಿ ಗೋವುಗಳನ್ನು ಅಪ್ಪಿಕೊಂಡು, ಮುದ್ದಿಸಿ, ಪೂಜಿಸಿ ಪ್ರೇಮಿಗಳ ದಿನ ಆಚರಣೆ