ಕಾರವಾರ: ಹಿಂದು ಹೆಣ್ಣು ಮಕ್ಕಳ ಭವಿಷ್ಯ ಹಾಳು ಮಾಡಲು ಹಾಗೂ ಮತಾಂತರ ಉದ್ದೇಶದಿಂದ ಲವ್ ಜಿಹಾದ್ ನಡೆಸಲಾಗುತ್ತಿದೆ. ತಮ್ಮ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಲು ಮಾಡುತ್ತಿರುವುದೇ ಲವ್ ಜಿಹಾದ್. ಜಿಹಾದ್ ಎಂದರೆ ಇಸ್ಲಾಂನಲ್ಲಿ ಕಾಫೀರರ ವಿರುದ್ಧ ಯುದ್ಧವಾಗಿದೆ. ಅವರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಳ್ಳುವವರ ಮೇಲೆ ಯುದ್ಧ ನಡೆಸುವುದು ಜಿಹಾದ್ ಆಗಿದೆ. ಆದರೆ, ಆರಗ ಜ್ಞಾನೇಂದ್ರ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಲವ್ ಜಿಹಾದ್‌ಗೆ ನಿಖರ ವ್ಯಾಖ್ಯಾನವಿಲ್ಲ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ಜಿಹಾದ್‌ನಲ್ಲಿ ಆರ್ಥಿಕ ಜಿಹಾದ್ ಜತೆಗೆ ಲವ್ ಜಿಹಾದ್ (Love jihad) ಕೂಡ ನಡೆಸಲಾಗುತ್ತಿದೆ. ದುರುದ್ದೇಶದಿಂದ ತಮ್ಮ ಸಂಖ್ಯೆ ಹೆಚ್ಚಳಕ್ಕೆ ಹಾಗೂ ಮೋಸದಿಂದ ಮತಾಂತರ ಮಾಡಲು ನಡೆಸುವ ಪ್ರೀತಿಯ ಕಪಟ ನಾಟಕ ಲವ್ ಜಿಹಾದ್ ಆಗಿದೆ. ಯಾವ ಹಿನ್ನೆಲೆಯಲ್ಲಿ ಆರಗ ಜ್ಞಾನೇಂದ್ರ ಹೇಳಿದ್ದಾರೆಯೋ ಗೊತ್ತಿಲ್ಲ. ಅವರಿಗೆ ಲವ್ ಜಿಹಾದ್ ವ್ಯಾಖ್ಯಾನದ ಬಗ್ಗೆ ಯಾವುದೇ ಸಂಶಯವಿದ್ದರೂ ಖಂಡಿತಾ ನಾವು ಹೇಳುತ್ತೇವೆ ಎಂದು ತಿಳಿಸಿದರು.
ಒಂದು ಸಮುದಾಯದ ಹೆಣ್ಣು ಮಕ್ಕಳ ಕಣ್ಣು ಕೂಡ ಕಾಣಬಾರದು. ಆದರೆ, ಉಳಿದವರ ಹೆಣ್ಣು ಮಕ್ಕಳ ಮೇಲೆ ಅವರು ಕಣ್ಣು ಹಾಕಬಹುದು ಎನ್ನುವುದು ಲವ್ ಜಿಹಾದ್‌ನ ದುರುದ್ದೇಶವಾಗಿದೆ. ಇದು ಸಹಿಸಲು ಕೂಡ ಸಾಧ್ಯವಾಗದ ವಿಚಾರ ಎಂದು ಕಿಡಿಕಾರಿದರು.
ಇದನ್ನೂ ಓದಿ | Rama Mandir : ರಾಮ ನಗರದಲ್ಲಿ ರಾಮ ಮಂದಿರ ಕಟ್ಟಿಯೇ ಸಿದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
ಲವ್ ಜಿಹಾದ್‌ಗೆ ನಾವು ಬೇಕಾದರೆ ಸಾಕ್ಷ್ಯ ಕೊಡುತ್ತೇವೆ: ಗುರುಪ್ರಸಾದಗೌಡ
ವಿಜಯಪುರ: ದೇಶ ಹಾಗೂ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೂ ಲವ್ ಜಿಹಾದ್‌ಗೆ ಪ್ರತ್ಯೇಕ ವ್ಯಾಖ್ಯಾನ ನೀಡಲಾಗಲ್ಲ ಎಂದರೆ ಏನರ್ಥ ಎಂದು ಹಿಂದು ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕಾರ ಗುರುಪ್ರಸಾದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲವ್ ಜಿಹಾದ್‌ಗೆ ನಿಖರ ವ್ಯಾಖ್ಯಾನವಿಲ್ಲ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿ, ಇವತ್ತು ಜಗತ್ತಿನಲ್ಲಿ ಅನೇಕ ಕ್ರೈಸ್ತ ರಾಷ್ಟ್ರಗಳಿವೆ, ಮುಸ್ಲಿಂ ರಾಷ್ಟ್ರಗಳಿವೆ, ಬೌದ್ಧ ರಾಷ್ಟ್ರಗಳಿವೆ. ಆದರೆ, ಇಡೀ ಜಗತ್ತಿನಲ್ಲಿ ಹಿಂದುಗಳಿಗೆ ತನ್ನದೇ ಆದ ಒಂದು ಪ್ರತ್ಯೇಕ ರಾಷ್ಟ್ರ ಇಲ್ಲ. ಇವತ್ತು ಹಿಂದುಗಳ ಮೇಲೆ ಈ ದೇಶದಲ್ಲಿ ಅನ್ಯಾಯವಾದರೆ, ಅತ್ಯಾಚಾರವಾದರೆ ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ರಾಯಚೂರಿನಲ್ಲಿ ಭಾರತಿ, ಸುಹಾಸಿನಿ, ಮಂಗಳೂರಿನಲ್ಲಿ ಆಶಾ, ಉಡುಪಿಗೆ ಹೋದರೆ ಶಿಲ್ಪಾ ದೇವಾಡಿಗ ಆಯ್ತು…ಅಥವಾ ಕೊಡಗಿಗೆ ಹೋದರೆ ದೀಪ್ತಿ ಪ್ರಕರಣ… ಹೀಗೆ ಎಷ್ಟು ಉದಾಹರಣೆಯನ್ನು ಕೊಡಬೇಕು? ಅಂಕಿ-ಅಂಶಗಳ ಪ್ರಕಾರ ಸುಮಾರು ೨೧ ಸಾವಿರ ಮಹಿಳೆಯರು, ಸ್ತ್ರೀಯರು, ಹುಡುಗಿಯರು ಕರ್ನಾಟಕ ರಾಜ್ಯದಲ್ಲಿ ಮಿಸ್ಸಿಂಗ್ ಆಗಿದ್ದಾರೆ. ಇವರೆಲ್ಲ ಎಲ್ಲಿ ಹೋದರು ಎಂದು ಪ್ರಶ್ನಿಸಿದರು.
ಇವತ್ತು ಲವ್ ಜಿಹಾದ್ ವ್ಯಾಖ್ಯಾನದ ಬಗ್ಗೆ ಚರ್ಚೆ ಆಗುತ್ತಿದೆ ಅಥವಾ ಲವ್ ಜಿಹಾದ್ ಘಟನೆಗಳ ಬಗ್ಗೆ ಚರ್ಚೆ ಆಗುತ್ತಿದೆ. ನಾವು ಬೇಕಾದರೆ ಸಾಕ್ಷ್ಯ ಕೊಡುತ್ತೇವೆ, ಎಷ್ಟು ಆಧಾರ ಕೊಡಬೇಕು? ಲವ್ ಜಿಹಾದಿಗೆ ಬಲಿಯಾದಂತಹ ಮಹಿಳೆಯರು, ಸ್ತ್ರೀಯರು ಬಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಮ್ಮ ಮೇಲೆ ದೌರ್ಜನ್ಯ ಆಗಿದೆ, ಮತಾಂತರ ಮಾಡಲು ಪ್ರಯತ್ನ ಆಗಿದೆ ಎಂದು ಬಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ೫ ರಾಜ್ಯಗಳು ಈ ಸಮಸ್ಯೆಯನ್ನು ಎದುರಿಸುತ್ತಿವೆ. ರಾಜ್ಯಕ್ಕೆ ರಾಜ್ಯವೇ ಮತಾಂತರವಾಗುತ್ತಿದೆ. ಇದೇ ಪ್ರಕಾರವಾಗಿ ಮತಾಂತರಗಳು, ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದ್ದರೆ ಹಿಂದುಗಳ ಅಸ್ತಿತ್ವಕ್ಕೆ ಅಪಾಯ ಉಂಟಾಗುತ್ತದೆ. ಹೀಗಾಗಿ ನಾವು ಹಿಂದುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.