Site icon Vistara News

Love Marriage | ಹಂಪಿಯ ಆಟೋ ಚಾಲಕನ ಒಳ್ಳೆಯತನಕ್ಕೆ ಒಲಿದ ವಿದೇಶಿ ಕನ್ಯೆ: ಇಬ್ಬರೂ ನಡೆದರು ಸಪ್ತಪದಿ

love marriage ವಿದೇಶಿ ದೇಶಿ ಮದುವೆ

ವಿಜಯನಗರ: ದೇಶ ನೋಡಲು ಬಂದ ವಿದೇಶಿ ಚೆಲುವೆಯೊಬ್ಬಳು ಹಂಪಿಯ ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತಿದ್ದಳು. ಅವರಿಬ್ಬರ ನಾಲ್ಕೈದು ವರ್ಷದ ಪ್ರೀತಿಗೆ ಶುಕ್ರವಾರ (ನವೆಂಬರ್‌ ೨೫) ಮದುವೆಯ ಎಂಬ ಮುದ್ರೆ ಬಿದ್ದಿದೆ. ಈ ಮೂಲಕ ಹಂಪಿಯ ಯುವಕ ವಿದೇಶಿ ಕನ್ಯೆಯನ್ನು (Love Marriage) ವರಿಸಿದ್ದಾರೆ.

Love Marriage

ಬೆಲ್ಜಿಯಂ ದೇಶದ ಕೆಮಿಲ್ ಎಂಬಾಕೆಯನ್ನು ಅನಂತರಾಜು ಎಂಬುವವರು ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ಧೂರಿ ವಿವಾಹ ಮಾಡಿಕೊಂಡರು. ಭಾರತೀಯ ಸಂಪ್ರದಾಯದಂತೆ ಶುಕ್ರವಾರ ಬೆಳಗಿನ 9.25ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ.

Love Marriage

ದೇಶಿ-ವಿದೇಶಿ ಜೋಡಿಯ ವಿವಾಹಕ್ಕೆ ಅಡ್ಡಿಯಾಗಿದ್ದ ಕೊರೊನಾ
ಈ ದೇಶಿ-ವಿದೇಶಿ ಜೋಡಿಯ ಮದುವೆ 2 ವರ್ಷದ ಹಿಂದೆಯೇ ಆಗಬೇಕಿತ್ತಂತೆ. ಆದರೆ ಕೊರೊನಾದಿಂದಾಗಿ ಪ್ರೇಮ ವಿವಾಹವನ್ನು ಮುಂದೂಡಬೇಕಾಯಿತು. ಕೆಮಿಲ್‌ ತಂದೆ ಜೀಪ್‌ ಫಿಲಿಪ್ಪೆಯವರು ಮಗಳ ಮದುವೆಯನ್ನು ಬೆಲ್ಜಿಯಂನಲ್ಲಿ ಅದ್ಧೂರಿಯಾಗಿ ಮಾಡಬೇಕೆಂದು ಅಂದುಕೊಂಡಿದ್ದರಂತೆ. ಆದರೆ ಹಿಂದು ಸಂಪ್ರದಾಯದಂತೆ ಹಂಪಿಯಲ್ಲಿಯೇ ಮದುವೆಗೆ ನಿರ್ಧರಿಸಿ ಗುರುವಾರ ಸಂಜೆ ನಿಶ್ಚಿತಾರ್ಥ ನೆರವೇರಿಸಿಕೊಂಡು, ಶುಕ್ರವಾರ ಬೆಳಗ್ಗೆ ಅದ್ಧೂರಿ ಮದುವೆ ಮಾಡಿಸಿದ್ದಾರೆ.

ಅನಂತರಾಜು ಹಂಪಿ ಜನತಾ ಪ್ಲಾನ್‌ನ ರೇಣುಕಮ್ಮ ದಿ. ಅಂಜಿನಪ್ಪ ಅವರ ಸುಪುತ್ರನಾಗಿದ್ದು, ಆಟೋ ಚಾಲಕನಾಗಿ ಜತೆಗೆ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಹಂಪಿ ವೀಕ್ಷಣೆಗೆ ಬಂದಿದ್ದ ಕೆಮಿಲ್ ಕುಟುಂಬದವರು, ಅನಂತರಾಜು ಪ್ರಾಮಾಣಿಕತೆಗೆ ಮನ ಸೋತಿದ್ದರು. ಈ ಮಧ್ಯೆ ಕೆಮಿಲ್‌, ಅನಂತರಾಜು ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದಿದ್ದಾರೆ.

Love Marriage

ರೇಷ್ಮೆ ಸೀರೆಯುಟ್ಟು ಮಿಂಚಿದ ವಿದೇಶಿಯರು
ಹಿಂದು ಸಂಪ್ರದಾಯದಂತೆ ಮದುವೆಯಾದ ಈ ಜೋಡಿಯ ಕುಟುಂಬಸ್ಥರು ದೇಸಿ ಉಡುಪಿನಲ್ಲಿ ಗಮನ ಸೆಳೆದರು. ಮಹಿಳೆಯರೆಲ್ಲ ಸೀರೆಯುಟ್ಟು, ಕೈತುಂಬ ಬಳೆ ತೊಟ್ಟು, ಹಣೆಗೆ ಕುಂಕುಮ ಇಟ್ಟು ಮಿರಮಿರ ಮಿಂಚಿದ್ದರೆ, ಗಂಡ್ಮಕ್ಕಳು ಪಂಚೆ ಶರ್ಟ್‌ ತೊಟ್ಟು ಸಂಭ್ರಮಿಸಿದರು.

ಇದನ್ನೂ ಓದಿ | Vaishnavi Gowda | ನಿಶ್ಚಿತಾರ್ಥ ಮುರಿದುಕೊಂಡ ನಟಿ ವೈಷ್ಣವಿ ಗೌಡ : ನಟಿ ಹೇಳಿದ್ದೇನು?

Exit mobile version