ಆನೇಕಲ್: ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಕಾರಣಕ್ಕಾಗಿ ಆಕೆಯ ಮನೆಯವರು ಪೊಲೀಸರ ಮೂಲಕ ಕಿರುಕುಳ ನೀಡುತ್ತಿದ್ದಾರೆ (Love problem) ಎಂಬ ಬೇಸರದಿಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಾತ್ರವಲ್ಲ, ಆತ್ಮಹತ್ಯೆಗೆ ಯತ್ನಿಸುವ ವಿಡಿಯೊವನ್ನು ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾನೆ.
ಕಾಡುಗೋಡಿ ಪೊಲೀಸರು ನೀಡುತ್ತಿರುವ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆತ ಅದರಲ್ಲಿ ಹೇಳಿದ್ದಾನೆ. ಸುರೇಶ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಸರ್ಜಾಪುರ ಸಮೀಪದ ಮುಗಳೂರಿನ ಭೋವಿಪಾಳ್ಯ ನಿವಾಸಿಯಾಗಿರುವ ಸುರೇಶ್ ವೃತ್ತಿಯಲ್ಲಿ ಚಾಲಕ.
ಇತ್ತೀಚೆಗಷ್ಟೇ ಸರ್ಜಾಪುರದ ಬಾಡಿಗೆ ಮನೆಗೆ ಬಂದಿದ್ದ ಈತ ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಜೋಗಿ ಕಾಲೋನಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರು ಬೈಕ್‌ನಲ್ಲಿ ಓಡಾಡುವುದು ಎಲ್ಲ ನಡೆದಿತ್ತು.
ಅವರಿಬ್ಬರ ಪ್ರೀತಿಯ ವಿಚಾರವನ್ನು ತಿಳಿದ ಹುಡುಗಿ ಮನೆಯವರು ಕಾಡುಗೋಡಿ ಪೊಲೀಸರ ಮೂಲಕ ಆಕೆಯ ಪ್ರೀತಿಯಿಂದ ದೂರ ಸರಿಯುವಂತೆ ಒತ್ತಡ ಹಾಕುತ್ತಿದ್ದರು. ಸುರೇಶ್‌ಗೆ ಕಳೆದ ಒಂದು ವಾರದಿಂದ ಕಾಡುಗೋಡಿ ಪೊಲೀಸರಿಂದ ಕರೆ ಬರುತ್ತಿತ್ತು. ಪೊಲೀಸರು ಆ ಹುಡುಗಿಯನ್ನು ಬಿಟ್ಟುಬಿಡು ಇಲ್ಲದಿದ್ದರೆ ನಿನ್ನ ಮೇಲೆ ರೇಪ್ ಸೇರಿದಂತೆ ಇನ್ನಿತರ ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವಕ ಹೇಳಿದ್ದಾನೆ.
ಪೊಲೀಸರು ಠಾಣೆಗೆ ಬರುವಂತೆ ನಿರಂತರ ಪೋನ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದ್ದು, ಪೋನ್ ಕರೆಗಳಿಂದ ಗಾಬರಿಗೊಂಡಿದ್ದ ಸುರೇಶ್ ಸರ್ಜಾಪುರದ ಮನೆಯ ಸಮೀಪ ವಿಡಿಐೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕಾಡುಗೋಡಿ ಪೊಲೀಸರು, ಯುವತಿಯ ತಂದೆ-ತಾಯಿ ಹಾಗೂ ಮತ್ತೊಂದು ಯುವತಿಯ ಹೆಸರು ಉಲ್ಲೇಖ ಮಾಡಲಾಗಿದ್ದು, ನನ್ನ ಸಾವಿಗೆ ಇವರೇ ಕಾರಣ ಎಂದು ವಿಡಿಯೊದಲ್ಲಿ ಹೇಳಿದ್ದಾನೆ ಯುವಕ.
ಇಲಿ ಪಾಷಾಣ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನ
ಯುವಕ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದುಕೊಂಡು, ಕೈಕೊಯ್ದುಕೊಂಡು, ಇಲಿ ಪಾಷಾಣ ಸೇವಿಸಿ ಆತ್ಮಹತಗ್ಯೆಗೆ ಯತ್ನಿಸಿದ ವಿಡಿಯೊವನ್ನು ಇನ್‌ಸ್ಟಾದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅಸ್ವಸ್ಥಗೊಂಡು ಬಿದ್ದಿದ್ದ ಸುರೇಶ್‌ನನ್ನು ಸ್ಥಳೀಯರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುರೇಶ್ ಸದ್ಯ ಸರ್ಜಾಪುರದ ಬಾಲಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಇದನ್ನೂ ಓದಿ : ಹೆದ್ದಾರಿಗೆ ನೀಡಿದ ಜಮೀನಿಗೆ ಸಿಗದ ಪರಿಹಾರ; ಮಾಲೂರು ತಾಲೂಕು ಕಚೇರಿ ಎದುರು ರೈತ ಆತ್ಮಹತ್ಯೆಗೆ ಯತ್ನ