ಬೆಂಗಳೂರು: ಬಿಎಂಟಿಸಿ ಚಾಲಕ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ತೆರೆಬಿದ್ದಿದೆ. ಮರಣೋತ್ತರ ಪರೀಕ್ಷೆ ವೇಳೆ ಸಹಜ ಸಾವು ಎಂಬ ಅಂಶ ಬೆಳಕಿಗೆ ಬಂದಿದ್ದೇವೆ. ಮಹಿಳೆಯೊಬ್ಬರು ಪ್ರೀತಿ (Love Tragedy) ನಿರಾಕರಿಸಿದ್ದಕ್ಕೆ ಬಿಎಂಟಿಸಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಜನವರಿ 30ರಂದು ಚನ್ನಪಟ್ಟಣ ಮೂಲದ ಬಿಎಂಟಿಸಿ ಚಾಲಕ ಪುಟ್ಟೇಗೌಡ ಎಂಬವರು ಕೆಲಸಕ್ಕೆಂದು ಹೊರಟವರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಪುಟ್ಟೇಗೌಡ ಅವರ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದರು. ಹಣೆ ಮೇಲೆ ಗಾಯವಿದೆ, ಸಾವಿನ ಹಿಂದೆ ಯುವತಿಯ ಕೈವಾಡವಿದೆ ಎಂದು ಆರೋಪಿಸಿದ್ದರು. ಯುವತಿ ಜತೆ ಲಾಡ್ಜ್‌ಗೆ ಹೋಗಿದ್ದು, ಬಳಿಕ ಅವರನ್ನು ಬಿಟ್ಟು ಯುವತಿ ಹೊರಹೋಗಿದ್ದಾರೆ ಎಂದು ಸಾವಿನ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡ ಕೆಂಗೇರಿ ಪೊಲೀಸರು, ಬಿಎಂಟಿಸಿ ಚಾಲಕನ ಸಾವಿನ ರಹಸ್ಯವನ್ನು ಭೇದಿಸಿದ್ದಾರೆ. ಪುಟ್ಟಗೌಡನೊಂದಿಗೆ ಲಾಡ್ಜ್‌ಗೆ ಬಂದಿದ್ದ ಮಹಿಳೆಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಪ್ರೇಮ್ ಕಹಾನಿ ತೆರೆದುಕೊಂಡಿದೆ. ಪುಟ್ಟೇ ಗೌಡ ಆರು ತಿಂಗಳ ಹಿಂದೆಯಷ್ಟೇ ಪರಿಚಿತಳಾದ ಪಕ್ಕದೂರಿನ ಮಹಿಳೆಯ ಜತೆ ಅತಿಯಾದ ಸಲುಗೆ ಹೊಂದಿದ್ದ.
ಮಹಿಳೆಯೊಂದಿಗೆ ಓಡಾಡುವುದು ಹೆಚ್ಚಾಗಿತ್ತು. ಭಗ್ನ ಪ್ರೇಮಿಯಾಗಿದ್ದ ಪುಟ್ಟೇ ಗೌಡ ಇತ್ತೀಚೆಗೆ ಮಹಿಳೆಯನ್ನು ತನ್ನ ಜತೆಯಲ್ಲಿಯೇ ಇರುವಂತೆ ಒತ್ತಾಯ ಮಾಡುತ್ತಿದ್ದನಂತೆ. ಆದರೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳಿರುವ ನಾನು ನಿನ್ನ ಜತೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾಳೆ.
ಈ ಮಧ್ಯೆ ಜನವರಿ 30 ರಂದು ಕೆಲಸಕ್ಕೆ ಎಂದು ಹೋದವನು ನೇರವಾಗಿ ಮಹಿಳೆಯನ್ನು ಭೇಟಿ ಮಾಡಿ ಅಲ್ಲಿಂದ ಕೆಂಗೇರಿ ಲಾಡ್ಜ್‌ಗೆ ಕರೆದೊಯ್ದಿದ್ದಾನೆ. ಒಂದು ಗಂಟೆಗೂ ಹೆಚ್ಚು ಸಮಯ ಒಟ್ಟಿಗೆ ಕಾಲ ಕಳೆದ ಬಳಿಕ ಇಲ್ಲಿಂದ ಹೊರಡೋಣ ಎಂದಿದ್ದಾಳೆ. ಆಗ ಮತ್ತೆ ಜತೆಯಲ್ಲೇ ಇರುವಂತೆ ಕ್ಯಾತೆ ತೆಗೆದು ಜಗಳ ಮಾಡಿದ್ದಾನೆ. ಈ ವೇಳೆ ಈತನ ಹುಚ್ಚಾಟ ಸಹಿಸಲು ಆಗದೆ ಮಹಿಳೆ ಬಾತ್ ರೂಮಿಗೆ ಹೋಗಿ ಬರುವುದಾಗಿ ಹೇಳಿದ್ದಾಳೆ. ಪುಟ್ಟೇಗೌಡನಿಂದ ತಪ್ಪಿಸಿಕೊಳ್ಳಲು ರೂಮಿನಿಂದ ಹೊರ ಬಂದು ಡೋರ್ ಲಾಕ್ ಮಾಡಿಕೊಂಡು ಬಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಇದರಿಂದ ನೊಂದು ಪುಟ್ಟೇಗೌಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Kantara Movie: ಒಟಿಟಿಯಲ್ಲಿ ಬರಲಿದೆ ಕಾಂತಾರ ಇಂಗ್ಲಿಷ್ ಆವೃತ್ತಿ: ರಿಷಬ್ ಶೆಟ್ಟಿ
ಸದ್ಯ, ಮಹಿಳೆಯಿಂದ ಪೊಲೀಸರು 161 ಹೇಳಿಕೆ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಐದು ತಿಂಗಳ ಹಿಂದೆಯಷ್ಟೇ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದವನು, ವಿವಾಹಿತೆಯ ಹಿಂದೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.