ಕೊಡಗು: ತಲೆ ತಿರುಗಿ (Low Bp) ಮರದಿಂದ ಬಿದ್ದು ಗಂಭೀರ ಗಾಯಗೊಂಡು ಪೊಲೀಸ್ ಸಿಬ್ಬಂದಿ (Accident news) ಮೃತಪಟ್ಟಿರುವ ಘಟನೆ ಕಾನ್ ಬೈಲ್ ಗ್ರಾಮದ ತೋಟದಲ್ಲಿ ನಡೆದಿದೆ. ಲೋಕೇಶ್ ಮೃತ ದುರ್ದೈವಿ.
ಲೋಕೇಶ್ ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಗನ್ ಮ್ಯಾನ್ ಆಗಿದ್ದರು. ಸದ್ಯ ಮೃತದೇಹವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಆಸ್ಪತ್ರೆಗೆ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ ಬೋಪಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ಲೋಕೇಶ್ ಸಾವಿಗೆ ಕಂಬನಿ ಮೀಡಿದ ಅಪ್ಪಚ್ಚು ರಂಜನ್, 10 ವರ್ಷಗಳಿಂದ ನನಗೆ ಗನ್ ಮ್ಯಾನ್ ಆಗಿದ್ದರು. ಎಲ್ಲ ಕೆಲಸದಲ್ಲೂ ಮುಂದೆ ಇರುತ್ತಿದ್ದರು. ಪ್ರಕೃತಿ ವಿಕೋಪದ ಸಮಯದಲ್ಲೂ ಧೈರ್ಯದಿಂದ ಮುನ್ನುಗುತ್ತಿದ್ದರು. ಸಣ್ಣ ವಯಸಿನಲ್ಲಿ ಹೀಗೆ ಆಗಿದ್ದು, ಬಹಳ ನೋವು ತಂದಿದೆ.
ಲೋಕೇಶ್ ಮಾವಿನ ಮರದಲ್ಲಿ ಕಸಿ ಮಾಡಲು ಹೋಗಿದ್ದರು. ಈ ವೇಳೆ ಲೋ ಬಿಪಿ ಯಾಗಿ ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್‌ಗೆ ಬಿದ್ದಿದ್ದಾರೆ ಎಂದು ಘಟನೆಯನ್ನು ವಿವರಿಸಿದರು. ಮಡಿಕೇರಿ ಆಸ್ಪತ್ರೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸ್ನೇಹಿತರು ಭೇಟಿ ನೀಡುತ್ತಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ