ವಿಜಯನಗರ: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಧರ್ಮ ಪತ್ನಿ ಎಂ.ಪಿ.ರುದ್ರಾಂಬಾ (M P Rudramba) (83) ಅವರು ವಯೋಸಹಜ ಕಾಯಿಲೆಯಿಂದ ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ಸೋಮವಾರ ನಿಧನರಾದರು. ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ರುದ್ರಾಂಬಾ ಅವರು ಮೂವರು ಪುತ್ರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪುತ್ರಿಯರಲ್ಲಿ ಲತಾ ಮಲ್ಲಿಕಾರ್ಜುನ ಅವರು ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿಯಾಗಿದ್ದಾರೆ. ಸುಮಾ ಹಾಗೂ ವೀಣಾ ಇನ್ನಿಬ್ಬರು ಪುತ್ರಿಯರು. ಅವರ ಪುತ್ರ, ಹರಪನಹಳ್ಳ ಕ್ಷೇತ್ರದ ಶಾಸಕರಾಗಿದ್ದ ಎಂ.ಪಿ.ರವೀಂದ್ರ ಕೆಲ ವರ್ಷದ ಹಿಂದೆಯೇ ತೀರಿಕೊಂಡಿದ್ದರು. ಎಂ.ಪಿ. ಪ್ರಕಾಶ್ ಅವರೂ ದಶಕಗಳ ಹಿಂದೆಯೇ ವಿಧಿವಶರಾಗಿದ್ದರು.
ಸಾಂಸ್ಕೃತಿಕ ಹಾಗೂ ಚಿಂತನ ಶೀಲ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಎಂ.ಪಿ. ಪ್ರಕಾಶ್ ಅವರನ್ನು ಮದುವೆಯಾಗಿದ್ದ ರುದ್ರಾಂಬಾ ಅವರು ಕೂಡ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇತ್ತೀಚಿಗೆ ಆರೋಗ್ಯದ ಕಾರಣದಿಂದ ಸಾರ್ವಜನಿಕ ಜೀವನದ ಒಡನಾಟ ಕಡಿಮೆಯಾಗಿತ್ತು.
ಇದನ್ನೂ ಓದಿ | Srinivasa Prasada Passes Away: ಕೊನೇ ಬಾರಿಗೆ ʼCoffee’ ಎಂದು ಬರೆದಿದ್ದ ಶ್ರೀನಿವಾಸ ಪ್ರಸಾದ್; ನಾಳೆ ಅಂತ್ಯಕ್ರಿಯೆ; ಗಣ್ಯರ ಸಂತಾಪ
ಹೂವಿನ ಹಡಗಲಿಯಲ್ಲಿ ಮಂಗಳವಾರ ಸಂಜೆ 4.30 ಕ್ಕೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ. ದಿ. ಎಂ.ಪಿ. ಪ್ರಕಾಶ್ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.
ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು.
— Siddaramaiah (@siddaramaiah) April 29, 2024
ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ… pic.twitter.com/zjxgqEZnT4
ಸಿಎಂ ಸಿದ್ದರಾಮಯ್ಯ ಸಂತಾಪ
ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.