Site icon Vistara News

Karnataka Election 2023: ಸೋಮಣ್ಣ ತಾಕತ್ತಿದ್ದರೆ ವರುಣದಲ್ಲಿ ಮಾತ್ರ ನಿಂತು ಗೆಲ್ಲಲಿ: ಎಂ. ರುದ್ರೇಶ್‌ ಸವಾಲು

#image_title

ಚಾಮರಾಜನಗರ: ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಈ ಬಾರಿ ವರುಣ ಜತೆಗೆ ಚಾಮರಾಜನಗರ ಕ್ಷೇತ್ರದಲ್ಲೂ ಟಿಕೆಟ್‌ ನೀಡಲಾಗಿದೆ. ಆದರೆ, ಚಾಮರಾಜನಗರದಲ್ಲಿ ಅವರಿಗೆ ನೂರೆಂಟು ಸವಾಲುಗಳು ಎದುರಾಗಿವೆ. ಪ್ರಮುಖವಾಗಿ ಟಿಕೆಟ್‌ (Karnataka Election 2023) ಕೈತಪ್ಪಿರುವ ಸ್ಥಳೀಯ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವುದು ದೊಡ್ಡ ಸವಾಲಾಗಿದೆ. ಏಕೆಂದರೆ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಯಾಗಿದ್ದ ಎಂ.ರುದ್ರೇಶ್‌, ಸಚಿವ ಸೋಮಣ್ಣ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಆಪ್ತರು ಹಾಗೂ ಕೆಆರ್‌ಐಡಿಎಲ್‌ ಅಧ್ಯಕ್ಷರೂ ಆಗಿರುವ ಎಂ. ರುದ್ರೇಶ್, ಈ ಬಾರಿ ತಮಗೆ ಟಿಕೆಟ್‌ ಸಿಗುವ ವಿಶ್ವಾಸದಲ್ಲಿದ್ದರು. ಆದರೆ, ಸಚಿವ ಸೋಮಣ್ಣ ಗೋವಿಂದರಾಜನಗರ ಕ್ಷೇತ್ರ ಬಿಟ್ಟು ಚಾಮರಾಜನಗರದಲ್ಲಿ ಸ್ಪರ್ಧೆಗೆ ಮುಂದಾಗಿರುವುದಕ್ಕೆ ರುದ್ರೇಶ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸೋಮಣ್ಣ ವರುಣದಲ್ಲಿ ಮಾತ್ರ ನಿಂತು ತಾಕತ್ತು ತೋರಿಸಬೇಕು, ಅವರನ್ನು ಲಿಂಗಾಯತ ಸೇರಿ ಯಾವ ಸಮುದಾಯವೂ ಇಲ್ಲಿ ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ.

ಪಕ್ಷೇತರನಾಗಿ ಸ್ಪರ್ಧಿಸುವಂತೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಗುರುವಾರ ಕಾರ್ಯಕರ್ತರ ಜತೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಕ್ಷೇತ್ರದಲ್ಲಿ ಸೋಮಣ್ಣ ಯಾವ ಪಕ್ಷ ಸಂಘಟನೆಯನ್ನು ಮಾಡಿಲ್ಲ. ನಾನು ಸಂಘಟನೆಗಾರ ಎಂದು ಬುರುಡೆ ಬಿಟ್ಟುಕೊಂಡು ಓಡಾಡುವುದಲ್ಲ, ಅವರು ಸ್ವಂತ ಶಕ್ತಿಯಿಂದ ಯಾವ ಕ್ಷೇತ್ರವನ್ನೂ ಗೆಲ್ಲಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ | Karnataka Election : ರಾಣೆಬೆನ್ನೂರು ಬಂಡಾಯ; MLC ಸ್ಥಾನಕ್ಕೆ ಆರ್‌ ಶಂಕರ್‌ ರಾಜೀನಾಮೆ, ಬಿಎಸ್‌ವೈ ಶಿಷ್ಯನೂ ಗುಡ್‌ಬೈ

ನಮ್ಮ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳ ಜತೆ ಸೋಮಣ್ಣ ಎಂದೂ ಸೌಜನ್ಯವಾಗಿ ಮಾತನಾಡಿಲ್ಲ. ನಾವು ಪಕ್ಷ ಸಂಘಟನೆ ಮಾಡಿದರೂ ನಮ್ಮನ್ನು ಹೊರಗಿನವರ ರೀತಿ ನೋಡಿದರು. ಸೋಮಣ್ಣ ಅವರಿಗೆ ಟಿಕೆಟ್ ಸಿಕ್ಕಿರುವುದು ಎಲ್ಲರಿಗೂ ನೋವು ತಂದಿದೆ. ಅವರ ವರ್ತನೆ ಬಗ್ಗೆ ಹೈಕಮಾಂಡ್‌ಗೆ ತಿಳಿಸುತ್ತೇವೆ‌. ಸೋಮಣ್ಣ ಪಕ್ಷ ಬಿಟ್ಟು ಹೋಗಲು ಸಿದ್ದರಾಗಿದ್ದರು. ಆದರೆ ಹೈ ಕಮಾಂಡ್ ಅವರಿಗೆ ಕಂಡಿಷನ್ ಹಾಕಿ ಟಿಕೆಟ್ ನೀಡಿದೆ. 2 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ನೋವಾಗಿದೆ ಎಂದು ಹೇಳಿದ್ದಾರೆ. ನೋವಾದರೆ ಯಾಕೆ ಸ್ಪರ್ಧಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಪಕ್ಷ ಕಟ್ಟಲು ಯಾವುದೇ ಸಹಕಾರ ನೀಡಲಿಲ್ಲ. ಅವರ ಸ್ವಂತ ತಾಲೂಕು ಕನಕಪುರದಲ್ಲಿ ಒಬ್ಬ ಗ್ರಾಮ ಪಂಚಾಯತ್ ಸದಸ್ಯನನ್ನು ಕೂಡ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಕರೆದಾಗಲೂ ಬರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿದ್ದಗಂಗಾ ಶ್ರೀಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ

ಸಿದ್ದಗಂಗಾ ಶ್ರೀಗಳ ಬಗ್ಗೆ ಸೋಮಣ್ಣ ಕೇವಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ರುದ್ರೇಶ್‌, ಆಡಿಯೊ ಕೂಡ ಇದೆ. ಕೆಲವೇ ದಿನದಲ್ಲಿ ಅದು ಹೊರಗೆ ಬರುತ್ತದೆ. ವೀರಾಪುರದಲ್ಲಿ ಅಭಿವೃದ್ಧಿ ಸಂದರ್ಭದಲ್ಲಿ 111 ಅಡಿ ಎತ್ತರದ ಸಿದ್ದಗಂಗಾ ಶ್ರೀಗಳ ಪ್ರತಿಮೆಗೆ ನಿರ್ಮಾಣದ ವೇಳೆ ಅಡೆತಡೆಗಳನ್ನು ತಂದರು. ಯಡಿಯೂರಪ್ಪ, ರುದ್ರೇಶ್‌ಗೆ ಹೆಸರು ಬರುತ್ತೆ ಎಂದು ಅದನ್ನು ಮಾಡಲು ಬಿಡಲಿಲ್ಲ. ಸೋಮಣ್ಣ ಅವರದ್ದು ಅಂತಹ ಮನಸ್ಥಿತಿ. ನನ್ನ ಪ್ರಕಾರ ವರುಣದಲ್ಲಿ ಮಾತ್ರ ಅವರು ನಾಮಪತ್ರ ಸಲ್ಲಿಸುತ್ತಾರೆ. ಎಲ್ಲ ಸಿದ್ಧತೆ ನಡೆದಿರುವುದರಿಂದ ಹೆಸರಿಗಷ್ಟೇ ಚಾಮರಾಜನಗರದಲ್ಲಿ ಚುನಾವಣೆಗೆ ನಿಂತಿದ್ದೇನೆ ಎಂದು ಬಿಂಬಿಸುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ | Karnataka Election 2023 : ಬಿಜೆಪಿ ಸೇರಿದ ಡಾ.ರಾಜನಂದಿನಿ; ಮಗಳು ಎದೆಗೇ ಚೂರಿ ಹಾಕಿದ್ದಾಳೆ ಎಂದ ಕಾಗೋಡು ತಿಮ್ಮಪ್ಪ

ವಿ.ಸೋಮಣ್ಣ ಪ್ಲಸ್‌-ಮೈನಸ್‌ ಅಂಶಗಳು

ಚಾಮರಾಜನಗರದಲ್ಲಿ ವಿ.ಸೋಮಣ್ಣ ಮೇಲೆ ಕೆಲ ಪಾಸಿಟಿವ್‌ ಅಂಶಗಳ ಜತೆಗೆ ನೆಗೆಟಿವ್‌ ಅಂಶಗಳು ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಮೊದಲಿಗೆ ಅವರಿಗೆ ನೆರವಾಗುವ ಧನಾತ್ಮಕ ಅಂಶಗಳೆಂದರೆ ಅವರು ಪ್ರಬಲ ಲಿಂಗಾಯತ ನಾಯಕ, ಉಸ್ತುವಾರಿ ಸಚಿವರಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳು, ತಮ್ಮದೇ ಆದ ಕಾರ್ಯಕರ್ತರು ಮತ್ತು ಬೆಂಬಲಿಗರ ಪಡೆ ಇರುವುದು, ಸ್ಥಳೀಯ ಕಾಂಗ್ರೆಸ್‌ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ದಲಿತ ಸಮುದಾಯದ ಅಸಮಾಧಾನ, ಸಂಘಟನಾ ಚತುರ ಎನಿಸಿಕೊಂಡಿರುವುದು.

ಇನ್ನು ಸೋಮಣ್ಣ ಮೇಲೆ ಪ್ರಭಾವ ಬೀರುವ ನಕಾರಾತ್ಮಕ ಅಂಶಗಳೆಂದರೆ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಪ್ರಭಾವ, ಬಿಎಸ್‌ವೈ, ವಿಜಯೇಂದ್ರ ಬೆಂಬಲಿಗರು ಕೈ ಕೊಟ್ಟರೆ ದೊಡ್ಡ ಮಟ್ಟದ ಹಿನ್ನಡೆ, ದಲಿತ ಸಮುದಾಯ ಮತ ಸೆಳೆಯದಿದ್ದರೆ ಹಿನ್ನಡೆ ಸಾಧ್ಯತೆ ಇದೆ. ಈ ಅಂಶಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ.

ವರುಣ, ಚಾಮರಾಜನಗರಕ್ಕೆ ಗುರುವಾರ ಸಚಿವ ವಿ.ಸೋಮಣ್ಣ ಎಂಟ್ರಿ

ಮೈಸೂರು: ಎರಡು ಕ್ಷೇತ್ರಗಳಲ್ಲಿ ಟಿಕೆಟ್‌ ಸಿಕ್ಕಿರುವ ಹಿನ್ನೆಲೆಯಲ್ಲಿ ವರುಣ, ಚಾಮರಾಜನಗರಕ್ಕೆ ಏಪ್ರಿಲ್‌ 13 ರಂದು ಸಚಿವ ವಿ.ಸೋಮಣ್ಣ ಭೇಟಿ ನೀಡಲಿದ್ದಾರೆ. ಒಂದೇ ದಿ‌ನ ಎರಡು ಕ್ಷೇತ್ರಗಳಲಿ ಸಂಚಾರ ಮಾಡಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮೊದಲಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಖಾಸಗಿ ಹೋಟೆಲ್‌ನಲ್ಲಿ ವರುಣ ಕ್ಷೇತ್ರದ ಮುಖಂಡರ ಸಭೆ ನಡೆಸಲಿದ್ದಾರೆ. ಮಲ್ಲಯ್ಯನಮೂಲೆ ಮಠ, ನಂಜನಗೂಡು ನಂಜುಂಡೇಶ್ವರ ದೇವಾಲಯ ಹಾಗೂ
ಸಂಸದ ವಿ.ಶ್ರೀನಿವಾಸ ಪ್ರಸಾದ್ ನಿವಾಸಕ್ಕೂ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಮತ್ತೆ ವರುಣ ಕ್ಷೇತ್ರದ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪರಿಶಿಷ್ಟ ಸಮುದಾಯದ ಮತ ಸೆಳೆಯುವ ನಿಟ್ಟಿನಲ್ಲಿ ಸಹಕಾರ ಕೋರಲಿದ್ದಾರೆ. ಸಂಜೆ ಚಾಮರಾಜನಗರಕ್ಕೆ ಭೇಟಿ ನೀಡಿ, ಪಕ್ಷದ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ | JDS Karnataka: ಜೆಡಿಎಸ್‌ಗೆ ಮರಳಲು ವೈಎಸ್‌ವಿ ದತ್ತ ಪ್ರಯತ್ನ: ದೇವೇಗೌಡರಿಂದಲೂ ಸಿಗಲಿಲ್ಲ ಭರವಸೆ

ಈ ಬಾರಿ ಚಾಮರಾಜನಗರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದರು. ಜತೆಗೆ ಜಿಲ್ಲಾ ಕೋರ್ ಕಮಿಟಿಯಿಂದ 8 ಜನರ ಹೆಸರನ್ನು ಕಳುಹಿಸಲಾಗಿತ್ತು. ಹೀಗಾಗಿ ಸದ್ಯ 8 ಜನರನ್ನು ಸಮಾಧಾನ ಪಡಿಸುವುದೇ ಸೋಮಣ್ಣಗೆ ಸವಾಲಾಗಿದೆ. ಚಾಮರಾಜನಗರದ ಟಿಕೆಟ್ ಆಕಾಂಕ್ಷಿಗಳ ಸಮಾಧಾನ ಪಡಿಸುವುದರ ಜತೆಗೆ ವರುಣದಲ್ಲೂ ಸ್ಪರ್ಧೆ ಮಾಡುವ ಸವಾಲು ಇದೆ. ಇರುವ ಕಡಿಮೆ ಸಮಯದಲ್ಲಿ ಎಲ್ಲವನ್ನೂ ಸೋಮಣ್ಣ ಹೇಗೆ ನಿಭಾಯಿಸುತ್ತಾರೆ ಎನ್ನುವುದೇ ಕುತೂಹಲವಾಗಿದೆ.

Exit mobile version