Site icon Vistara News

ತವರಿಗೆ ಕಾಲಿಟ್ಟ ಸಚಿವರು; ಸೇಬಿನ ಹಾರ-ಜೈಕಾರ, ಹೋಳಿಗೆ ಊಟ-ನೂಕುನುಗ್ಗಲು!

DK Shivakumar And RB Thimmapur

#image_title

ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಇಂದು ತಮ್ಮ ಸ್ವಕ್ಷೇತ್ರವಾದ ಕನಕಪುರಕ್ಕೆ ಭೇಟಿಕೊಟ್ಟಿದ್ದಾರೆ. ಕನಕಪುರದ ಕಲ್ಲಹಳ್ಳಿ ತಾಲೂಕಿಗೆ ಕಾಲಿಟ್ಟ ಅವರಿಗೆ, ಸ್ಥಳೀಯರು ಭರ್ಜರಿ ವೆಲ್​​ಕಮ್​ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್​ ಅವರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿದ್ದಾರೆ. ಅಭಿಮಾನಿಗಳೆಲ್ಲ ಸೇರಿ, ಬೃಹತ್ ಗಾತ್ರದ ಸೇಬಿನ ಹಾರ ಹಾಕಿ, ಜೈಕಾರ ಕೂಗಿದ್ದಾರೆ. ಈ ವೇಳೆ ಸೇಬಿನ ಹಾರದಲ್ಲಿರುವ ಒಂದು ಸೇಬನ್ನೂ ಕೂಡ ಡಿಕೆಶಿ ತಿಂದಿದ್ದಾರೆ.

ಗೆಲ್ಲಿಸಿಕೊಟ್ಟ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಇಂದು ಕನಕಪುರದ ವಿವಿಧ ಹೋಬಳಿಗಳಲ್ಲಿ ಡಿಕೆ ಬ್ರದರ್ಸ್​ ಸಭೆ ಹಮ್ಮಿಕೊಂಡಿದ್ದಾರೆ. ಅಷ್ಟೇ ಅಲ್ಲ , ಅವರು ಕಲ್ಲಹಳ್ಳಿ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಕಲ್ಲಹಳ್ಳಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್​, ‘ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೀರಿ. ಫಲಿತಾಂಶ ಬಂದ ಮೇಲೆ ಹಲವು ಮುಖಂಡರು, ಕಾರ್ಯಕರ್ತರು ನನ್ನ ಭೇಟಿಗೆ ಬಂದರು. ಆದರೆ ಅವರಿಗೆ ಸಮಯಕೊಡಲು, ಧನ್ಯವಾದ ಹೇಳಲು ಸಾಧ್ಯವಾಗಲಿಲ್ಲ. ನಾನಿಂದು ಉಪಮುಖ್ಯಮಂತ್ರಿಯೇ ಆಗಿರಬಹುದು. ಆದರೆ ನಾನೂ ನಿಮ್ಮಲ್ಲಿ ಒಬ್ಬ. ಬಹಳ ಚಿಕ್ಕವಯಸ್ಸಿನಲ್ಲಿ ನನಗೆ ಅಧಿಕಾರ ಕೊಟ್ಟಿರಿ. ನೀವು ಗೆಲ್ಲಿಸಿದಾಗ ನನಗಿನ್ನೂ ಮದುವೆಯೂ ಆಗಿರಲಿಲ್ಲ’ ಎಂದು ಡಿ.ಕೆ.ಶಿವಕುಮಾರ್ ಹಳೇ ದಿನಗಳನ್ನು ನೆನಪಿಸಿಕೊಂಡರು.

‘ನಾನು ಕನಕಪುರದಲ್ಲಿ ಅಭಿವೃದ್ಧಿ ಮಾಡಬೇಕು. ಮೊದಲೆಲ್ಲ ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಮಾಡಿದ್ದೇವೆ. ಸಮ್ಮಿಶ್ರ ಸರ್ಕಾರ ಇದ್ದಾಗ ಇಲ್ಲಿಗೆ ಮೆಡಿಕಲ್ ಕಾಲೇಜು ಮಂಜೂರು ಆಗಿತ್ತು. ಅದನ್ನು ಬಳಿಕ ಯಡಿಯೂರಪ್ಪ ಸರ್ಕಾರ ವಾಪಸ್ ತೆಗೆದುಕೊಂಡಿತು. ಇದೀಗ ಮುಖ್ಯಮಂತ್ರಿಗೆ ಮತ್ತೆ ಅದರ ದಾಖಲೆಗಳನ್ನು ಕೊಟ್ಟು, ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು. ಹಾಗೇ, ‘ನಿಮ್ಮ ಎಲ್ಲರ ಜೇಬಿಗೂ ನಾವು ದುಡ್ಡು ಹಾಕೋಕೆ ಆಗೋದಿಲ್ಲ, ಆದರೆ ಖಂಡಿತ ನಿಮ್ಮ ಕಷ್ಟಕ್ಕೆ ಆಗುತ್ತೇವೆ. ಇನ್ಮುಂದೆ ವಾರಕ್ಕೆ ಒಂದು ದಿನ ಈ ಜಿಲ್ಲೆಗೆ ಸೀಮಿತವಾಗಿರುತ್ತದೆ. ನಾನು ಎಲ್ಲರ ಕಷ್ಟವನ್ನೂ ಆಲಿಸುತ್ತೇನೆ. ನೀವೇನು ಆಸೆ ಇಟ್ಟುಕೊಂಡಿದ್ದೀರೋ ಅದು ಆಗೇ ಆಗುತ್ತದೆ, ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತಿಗೆ ಬೆಲೆ ಕೊಡಬೇಕಾಗಿತ್ತು’ ಎಂದು ಹೇಳಿದರು. ಈ ಮೂಲಕ ಮುಂದೆ ಸಿಎಂ ಆಗ್ತೇನೆಂದು ಪರೋಕ್ಷವಾಗಿ ತಿಳಿಸಿದರು.

ಸಚಿವ ಆರ್​.ಬಿ ತಿಮ್ಮಾಪುರ ಸ್ವಕ್ಷೇತ್ರಕ್ಕೆ

ಇನ್ನು ಅಬಕಾರಿ ಸಚಿವರಾದ ಆರ್​​.ಬಿ.ತಿಮ್ಮಾಪುರ ಅವರು ತಮ್ಮ ಸ್ವಕ್ಷೇತ್ರವಾದ ಮುಧೋಳಕ್ಕೆ ಆಗಮಿಸಿದ್ದಾರೆ. ಸಚಿವರಾಗಿ ಕ್ಷೇತ್ರಕ್ಕೆ ಕಾಲಿಡುತ್ತಿರುವ ಅವರ ಸ್ವಾಗತಕ್ಕೆ ಅಭಿಮಾನಿಗಳು, ಬೆಂಬಲಿಗರು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಅವರು ಮಂಡ್ಯಕ್ಕೆ ಬರುತ್ತಿದ್ದಂತೆ ಸೇಬಿನಹಾರ ಹಾಕಲಾಯಿತು. ಸುಮಾರು 8-10 ಸಾವಿರ ಜನರಿಗೆ ಆಗುವಷ್ಟು ಹೋಳಿಗೆ ಊಟ ರೆಡಿ ಮಾಡಲಾಗಿತ್ತು. ಅದೂ ಕೂಡ ಗೆಣಸಿನ ಹೋಳಿಗೆಯಾಗಿತ್ತು. ತಿಮ್ಮಾಪುರ ಅವರು ಸಚಿವರಾಗಿದ್ದನ್ನು ಊರ ಜನ ಹಬ್ಬದಂತೆ ಸಂಭ್ರಮಿಸಿದ್ದಾರೆ.

ಚೆಲುವರಾಯ ಸ್ವಾಮಿಗೆ ಅದ್ಧೂರಿ ಸ್ವಾಗತ
ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಗೆ ಆಗಮಿಸಿದ್ದಾರೆ. ಮದ್ದೂರು ತಾಲೂಕಿನ ಗಡಿಭಾಗದ ಗ್ರಾಮ ನಿಡಘಟ್ಟದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಚಲುವರಾಯಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬಾಳೆ ಕಂಬ, ಹೂವಿನ ಅಲಂಕಾರ ಮಾಡಲಾಗಿತ್ತು. ಕಲಾತಂಡಗಳೂ ಇದ್ದವು. ಕಾಂಗ್ರೆಸ್​ ನಾಯಕರು, ಕಾರ್ಯಕರ್ತರು ಪುಷ್ಪಮಳೆಗರೆಯುತ್ತ ಅವರನ್ನು ಕರೆದುಕೊಂಡು ಬಂದರು.

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಇಂದು ಶಿವಮೊಗ್ಗಕ್ಕೆ ಭೇಟಿಕೊಟ್ಟಿದ್ದಾರೆ. ಜಿಲ್ಲಾ ಕಾಂಗ್ರೆಸ್​ ಸಮಿತಿಯಿಂದ, ಲಗನಾ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಧು ಬಂಗಾರಪ್ಪ ಅವರಿಗೆ ಹಾರಹಾಕಲು ಅಭಿಮಾನಿಗಳು, ಬೆಂಬಲಿಗರ ಮಧ್ಯೆ ನೂಕುನುಗ್ಗಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಗೌಡ ಇತರರು ಇದ್ದರು. ಈ ವೇಳೆ ಮಾತನಾಡಿದ ಮಧು ಬಂಗಾರಪ್ಪ ತಮ್ಮ ತಂದೆ ಬಂಗಾರಪ್ಪನವರನ್ನು ಸ್ಮರಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲ ಚುನಾವಣೆಗಳ ಜವಾಬ್ದಾರಿ ಹೊರುತ್ತೇನೆ. ಇಲ್ಲಿನ ಅಭಿವೃದ್ಧಿ ಮಾಡುವುದಾಗಿ ಭರವಸೆ ಕೊಟ್ಟರು.

ಮಧು ಬಂಗಾರಪ್ಪ ಮತ್ತು ಚಲುವರಾಯಸ್ವಾಮಿ
Exit mobile version