ವಿಜಯನಗರ: ಸಚಿವ ಆನಂದ್ ಸಿಂಗ್ ತಮ್ಮ ಮನೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾರೆ ಎಂದು ಕುಟುಂಬವೊಂದು ಆರೋಪಿಸಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣ ದಿನೇದಿನೆ ಗಂಭೀರ ಸ್ವರೂಪವನ್ನು ಪಡೆಯುತ್ತಿದ್ದು, ಬುಧವಾರ ಸಚಿವರು ಮತ್ತವರ ಬೆಂಬಲಿಗರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈಗ ದೂರುದಾರನ ವಿರುದ್ಧ ಮಡಿವಾಳ ಸಮಾಜದವರು ಪ್ರತಿಭಟನೆ ನಡೆಸಿದ್ದಾರೆ.
ಸಮಾಜದ ಜಾಗ ಅತಿಕ್ರಮಣ ಆರೋಪ
ಹೊಸಪೇಟೆಯ 6ನೇ ವಾರ್ಡ್‌ನ ಸುಣ್ಣದ ಬಟ್ಟಿ ಪ್ರದೇಶದ ನಿವಾಸಿ ಡಿ.ಪೋಲಪ್ಪ ಅವರು ಮಡಿವಾಳ ಸಮಾಜದ ಜಾಗವನ್ನು ಅತಿಕ್ರಮಿಸಿ ಮನೆ ನಿರ್ಮಾಣ ಮಾಡಿದ್ದಾರೆ. ಈ ಪ್ರಕರಣವನ್ನು ಬಗೆಹರಿಸಲು ಬಂದಿದ್ದ ಸಚಿವ ಆನಂದ್‌ಸಿಂಗ್ ವಿರುದ್ಧ ದೌರ್ಜನ್ಯ ಆರೋಪ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ.
ನಾವೇ ಮನವಿ ಮಾಡಿದ್ದೆವು
ನಮ್ಮ ಸಮಾಜದ ಜಾಗವನ್ನು ಪೋಲಪ್ಪ ಅತಿಕ್ರಮಣ ಮಾಡಿದ್ದು, ಬಗೆಹರಿಸಿಕೊಡಬೇಕೆಂದು ನಾವು ಮಾಡಿದ ಮನವಿ ಮೇರೆಗೆ ಸಚಿವ ಆನಂದ್ ಸಿಂಗ್ ಅವರು ಇತ್ಯರ್ಥಪಡಿಸಲು ಮುಂದಾಗಿದ್ದರು. ಆದರೆ, ಅವರ ವಿರುದ್ಧವೇ ಪೋಲಪ್ಪ ನಿರಾಧಾರ ಆರೋಪ ಮಾಡಿದ್ದಾರೆ ಎಂದು ಮಡಿವಾಳ ಸಮಾಜದವರು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಜಾಗ ಬಿಟ್ಟುಕೊಡಲಿ
ಈಗ ಪೋಲಪ್ಪ ಮನೆ ನಿರ್ಮಾಣ ಮಾಡಿಕೊಂಡಿರುವ ಜಾಗ ಮಡಿವಾಳ ಸಮಾಜದ್ದಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ನಮ್ಮ ಸಮಾಜದ ಜಾಗವನ್ನು ಬಿಟ್ಟುಕೊಡಬೇಕು. ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಹೊಸಪೇಟೆಯ ಅಂಬೇಡ್ಕರ್ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ಸಮಾಜದ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ | ನಾನು ಯಾರಿಗೂ ಜೀವ ಬೆದರಿಕೆ ಹಾಕಿಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟನೆ