ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಮಹಾಭಾರತ (Mahabharata) ಶುರುವಾಗಿದೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಶಕುನಿ ಎಂದು ಕರೆದರೆ, ಅದಕ್ಕೆ ಪ್ರತ್ಯುತ್ತರಿಸಿದ ಸಿಎಂ, ದುರ್ಯೋಧನ ಯಾರೆಂದು ನನಗೆ ಗೊತ್ತಿದೆ ಎಂದಿದ್ದಾರೆ. ಸುರ್ಜೇವಾಲಾ ಹೇಳಿಕೆಗೆ ಬಿಜೆಪಿ ಗರಂ ಆಗಿದೆ.
ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಹೊಸ ಮೀಸಲಾತಿ ನೀತಿಯ ವಿರುದ್ಧ ಅಭಿಪ್ರಾಯ ಹೇಳಲು ಆಯೋಜಿಸಿದ ಕಾಂಗ್ರೆಸ್ ಪಕ್ಷದ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ʻʻಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕದ ಶಕುನಿ ಆಗಿದ್ದಾರೆ. ಮಹಾಭಾರತದಲ್ಲಿ ಶಕುನಿಯಂತೆ, ಕರ್ನಾಟಕದಲ್ಲಿ ಬೊಮ್ಮಾಯಿ ಶಕುನಿ. ಕರ್ನಾಟಕದ ಪಾಂಡವರನ್ನು ಶಕುನಿ ಉದ್ಧಾರ ಆಗಲು ಬಿಡುವುದಿಲ್ಲʼʼ ಎಂದು ಹೇಳಿದರು.
ʻʻಯಾವುದೇ ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ 90 ದಿನದಲ್ಲಿ ಮೂರು ನಿರ್ಧಾರ ಮಾಡಿದ್ದನ್ನು ನಾನು ಎಂದೂ ನೋಡಿಲ್ಲʼʼ ಎಂದು ಹೇಳಿದ ಸುರ್ಜೇವಾಲ, ಬೊಮ್ಮಾಯಿ ಅವರದ್ದು 420 ಸರ್ಕಾರ ಎಂದು ಹೀಗಳೆದರು.
ದುರ್ಯೋಧನ ಯಾರೆಂದು ಗೊತ್ತು!
ಸುರ್ಜೇವಾಲ ಅವರ ಹೇಳಿಕೆಗೆ ತಣ್ಣಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ʻʻನನಗೆ ಅವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಕರ್ನಾಟಕದ ಜನತೆ ನನ್ನನ್ನು ಕಾಮನ್ ಮ್ಯಾನ್ ಅಂತಾ ಹೇಳಿದಾರೆ. ನಾನು ಕಾಮನ್ ಆಗಿಯೇ ಇರುತ್ತೇನೆ. ಯಾರು ಶಕುನಿ ಯಾರು ದುರ್ಯೋಧನ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ಜಾಸ್ತಿ ಮಾತನಾಡಲ್ಲʼʼ ಎಂದು ಹೇಳಿದರು. ಸಿಎಂ ಅವರು ಕಾಂಗ್ರೆಸಿಗರನ್ನು ದುರ್ಯೋಧನನಿಗೆ ಹೋಲಿಸಿದಂತೆ ಕಂಡುಬಂತು.
ಬೊಮ್ಮಾಯಿ ಒಬ್ಬ ಶಕುನಿ ಎಂಬ ಸುರ್ಜೇವಾಲ ಆರೋಪವನ್ನು ಖಂಡಿಸಿದ ಸಚಿವ ಆರ್. ಅಶೋಕ್ ಅವರು, ಇದು ಮುಖ್ಯಮಂತ್ರಿ ಪದವಿಗೆ ಹಾಗೂ ನಾಡಿನ ಜನತೆಗೆ ಮಾಡಿದ ಅಪಮಾನ. ಕೂಡಲೇ ಅವರು ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ವಿರುದ್ಧ ಅರುಣ್ ಸಿಂಗ್ ಆಕ್ರೋಶ
ಬೊಮ್ಮಾಯಿಯವರನ್ನು ಶಕುನಿ ಎಂದೂ, ರಾಜ್ಯ ಸರ್ಕಾರವನ್ನು 420 ಸರ್ಕಾರ ಎಂದರು ವ್ಯಾಖ್ಯಾನಿಸಿದ ಸುರ್ಜೇವಾಲ ಹೇಳಿಕೆಯನ್ನು ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಖಂಡಿಸಿದ್ದಾರೆ.
ಬೊಮ್ಮಾಯಿ ರಾಜ್ಯದ ಕಾಮನ್ ಮ್ಯಾನ್ ಸಿಎಂ. ಅವರಿಗೆ ಅವಮಾನ ಮಾಡಿದ್ರೆ ರಾಜ್ಯಕ್ಕೆ ಅವಮಾನವಾದಂತೆ. ಕಾಂಗ್ರೆಸ್ ಕಾಲದಲ್ಲಿ, ಸಿದ್ದರಾಮಯ್ಯ ಕಾಲದಲ್ಲೇ ಹಲವು ಹಗರಣ ನಡೆದಿದೆ ಎಂದರು. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಸಿಎಂ ಬಗ್ಗೆ ಈ ರೀತಿ ಮಾತಾಡುವುದು ಸರಿಯಲ್ಲ. ರಾಜ್ಯದ ಜನರೇ ಇವರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಅವರು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದ ಬಳಿಕ ಮಾತನಾಡಿದರು.
ಇದನ್ನೂ ಓದಿದೆ: Reservation fight : ಯಾವ ಸ್ವಾಮೀಜಿಗಳಿಗೂ ಒತ್ತಡ ಹಾಕಿಲ್ಲ, ಪ್ರಮಾಣ ಮಾಡುತ್ತೇನೆ ಎಂದ ಸಿಎಂ, ಡಿಕೆಶಿಗೆ ತಿರುಗೇಟು