Site icon Vistara News

Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ

Mahadayi Water Dispute

ಬೆಳಗಾವಿ: ಮಹದಾಯಿ ಜಲಾನಯನ ಪ್ರದೇಶಕ್ಕೆ (Mahadayi Water Dispute) ಕೇಂದ್ರದ ಪ್ರವಾಹ್ ತಂಡ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸತತ ಮಳೆಯ ನಡುವೆ ಮಹದಾಯಿಗೆ ಸೇರುವ ಕಾಲುವೆಗಳು, ನಾಲೆಗಳನ್ನು ಪ್ರವಾಹ್‌ ತಂಡ ವೀಕ್ಷಿಸಿ, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಹದಾಯಿ ಹೋರಾಟಗಾರರ ವಿರೋಧದ ನಡುವೆಯೂ ಬೆಳಗಾವಿಗೆ ಕೇಂದ್ರದ ತಂಡ ಆಗಮಿಸಿದೆ. ರಾಜ್ಯಕ್ಕೆ ಆಗಮಿಸಿದ ಕೇಂದ್ರದ ಮಹದಾಯಿ ಪ್ರವಾಹ್ ತಂಡಕ್ಕೆ ಬೆಳಗಾವಿಯ ಚೋರ್ಲಾ ಗಡಿಯಲ್ಲಿನಲ್ಲಿ ಅಧಿಕಾರಿಗಳು ಸ್ವಾಗತ ಕೋರಿದರು. ನೀರಾವರಿ ಇಲಾಖೆ ಅಧಿಕಾರಿಗಳು, ಸ್ಥಳೀಯ ಪೊಲೀಸರಿಂದ ಸ್ವಾಗತ ಕೋರಲಾಯಿತು. ಚೋರ್ಲ್ ಘಾಟ್ ಮತ್ತು ಹರತಾಳ ನಾಲಾ ವೀಕ್ಷಣೆ ಮಾಡಿದ ಅಧಿಕಾರಿಗಳು, ನಂತರ ಕಳಸಾ-ಬಂಡೂರಿ ನಾಲಾಗಳನ್ನು ವೀಕ್ಷಣೆ ಮಾಡಿದರು.

ಮಹದಾಯಿ ನದಿಯ ಹಲತ್ರಾ ನಾಲಾ ಮತ್ತು ಸೂರಲ್ ಕಾಲುವೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಿರಂತರ ಮಳೆ ಹಿನ್ನೆಲೆಯಲ್ಲಿ ಕೈಲಿ ಛತ್ರಿ ಹಿಡಿದು, ಗಮ್ ಶೂಗಳನ್ನು ಧರಿಸಿ ಅಧಿಕಾರಿಗಳು ನಾಲೆಗಳನ್ನು ವೀಕ್ಷಣೆ ಮಾಡಿದರು.

ಯಾವುದೇ ಪರವಾನಗಿ ಪಡೆಯದೇ ಕರ್ನಾಟಕ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಿದೆ ಎಂದು ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಆರೋಪಿಸಿದ್ದರು. ಸೆಂಟ್ರಲ್ ಟೀಂ ಭೇಟಿ ಬಳಿಕ ಕರ್ನಾಟಕದ ಬಣ್ಣ ಬಯಲಾಗಲಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೆ ಪ್ರವಾಹ್‌ ತಂಡವು ರಾಜ್ಯಕ್ಕೆ ಭೇಟಿ ನೀಡಿದೆ. ಕಣಕುಂಬಿಯಲ್ಲಿ ಸತತ ಮಳೆ ಹಿನ್ನೆಲೆಯಲ್ಲಿ ಜಿಗಣೆ ಕಾಟಕ್ಕೆ ಅಧಿಕಾರಿಗಳು ಹೈರಾಣಾಗಿದ್ದು ಕಂಡುಬಂತು. ಜಿಗಣೆಗಳ ಕಾಟದ ನಡುವೆಯೂ ಪ್ರತಿಯೊಂದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರು.

ಏನಿದು ಪ್ರವಾಹ್‌ ತಂಡ?

ಮಹದಾಯಿ ಜಲ ವಿವಾದದ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಅನುಷ್ಠಾನ ಸಂಬಂಧ ಮಹದಾಯಿ ಪ್ರವಾಹ್‌ (ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಶೀಲ ನದಿ ಪ್ರಾಧಿಕಾರ) ಅನ್ನು ಕಳೆದ ವರ್ಷ ಕೇಂದ್ರ ಸರ್ಕಾರ ರಚನೆ ಮಾಡಿತ್ತು. ಗೋವಾ-ಕರ್ನಾಟಕ ನಡುವೆ ಮಹದಾಯಿ ನೀರಿನ ಹಂಚಿಕೆ ವಿವಾದ ಇರುವ ಹಿನ್ನೆಲೆಯಲ್ಲಿ ಮಹದಾಯಿ ಜಲಾನಯನ ಪ್ರದೇಶದಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಲು ಪ್ರವಾಹ್‌ ತಂಡ ಆಗಮಿಸಿದೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಮಹದಾಯಿ ನದಿಯ ಉಪ ನದಿಗಳಾಗಿರುವ ಕಳಸಾ-ಬಂಡೂರಿಯ ಸುಮಾರು 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಲು ಕರ್ನಾಟಕ ಅನುಷ್ಠಾನ ಮಾಡಲು ಮುಂದಾಗಿರುವ ಕಳಸಾ-ಬಂಡೂರಿ ನಾಲಾ ಯೋಜನೆಗೆ ಗೋವಾ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಮಹದಾಯಿ ಜಲಾನಯನ ಪ್ರದೇಶದಲ್ಲಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಲು ಪ್ರವಾಹ್‌ ತಂಡ ಆಗಮಿಸಿದೆ.

ಇದನ್ನೂ ಓದಿ | ಪಿಎಂ ಆವಾಸ್‌ ಯೋಜನೆಯ 40 ಸಾವಿರ ರೂ. ಪಡೆದು 11 ಸ್ತ್ರೀಯರು ಗೆಳೆಯರೊಂದಿಗೆ ಪರಾರಿ; ಕಂಗಾಲಾದ ಪತಿಯರು!

ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮಹದಾಯಿ ಜಲಾನಯನ ಪ್ರದೇಶದ ಪರಿಶೀಲನೆ ನಡೆಯಲಿದೆ. ನದಿ ನೀರನ್ನು ತಿರುಗಿಸಲು ಕರ್ನಾಟಕಕ್ಕೆ ಅನುಮತಿ ನೀಡಿದರೆ ಉಂಟಾಗುವ ಪರಿಣಾಮಗಳನ್ನು ಪರಿಶೀಲಿಸಲು ಜಲಪಾತಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಎಲ್ಲ ಪ್ರದೇಶಗಳಿಗೆ ಪ್ರವಾಹ್‌ ತಂಡದ ಸದಸ್ಯರು ಭೇಟಿ ನೀಡಲಿದ್ದಾರೆ.

Exit mobile version