ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ, ಮಹಾರಾಷ್ಟ್ರದ ಜತ್ತ ತಾಲೂಕು ನೀರಾವರಿ ಸಂಘರ್ಷ ಸಮಿತಿಯ ನೀರಿನ ಹೋರಾಟವೂ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 42 ಹಳ್ಳಿಗಳ ಜನರೆಲ್ಲ ಒಗ್ಗಟ್ಟಾಗಿ ನೀರಿಗಾಗಿ ಹೋರಾಟ ನಡೆಸಲು ಪ್ರಾರಂಭಿಸಿದ್ದಾರೆ. ‘ನಮಗೆ ನೀರು ಕೊಡಿ, ಇಲ್ಲ ಅಂದ್ರೆ ಕರ್ನಾಟಕಕ್ಕೆ ಹೋಗುತ್ತೇವೆ’ ಎಂದು ಒಕ್ಕೋರಲಿನಿಂದ ಆಗ್ರಹಿಸುತ್ತಿದ್ದಾರೆ.
ಈ ಜತ್ತ ತಾಲೂಕಿನ 42 ಗ್ರಾಮಗಳಲ್ಲಿ ಕಳೆದ 6 ದಶಕಗಳಿಂದಲೂ ನೀರಿನ ಸಮಸ್ಯೆ ಇದೆ. ಜತ್ತ ತಾಲೂಕು ನೀರಾವರಿ ಸಂಘರ್ಷ ಸಮಿತಿ ನೀರಿಗಾಗಿ ಹೋರಾಟ ಮಾಡಿಕೊಂಡೇ ಬರುತ್ತಿದೆ. ಈಗ ಗಡಿ ವಿವಾದ ಭುಗಿಲೆದ್ದ ಬೆನ್ನಲ್ಲೇ ಈ ಸಮಿತಿ ನೇತೃತ್ವದಲ್ಲಿ, ಜತ್ತ ತಾಲೂಕಿನ ಉಮದಿ ಗ್ರಾಮದಲ್ಲಿ ಸಭೆ ನಡೆದಿತ್ತು. 42 ಹಳ್ಳಿಗಳ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಎಂಟು ದಿನಗಳಲ್ಲಿ ನೀರು ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
‘ಇನ್ನು ಎಂಟು ದಿನಗಳ ಒಳಗೆ ಮಹಾರಾಷ್ಟ್ರ ಸಿಎಂ, ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಜತ್ತ ತಾಲೂಕಿಗೆ ಬರಬೇಕು. ಇಲ್ಲಿನ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು. 8 ದಿನಗಳ ಒಳಗೆ ನೀರಿನ ಕೊರತೆ ನೀಗಿಸದೆ ಇದ್ದರೆ, ಮಹಾರಾಷ್ಟ್ರ ಸರ್ಕಾರದ ಪ್ರಮುಖರು ಇಲ್ಲಿಗೆ ಬರದೆ ಇದ್ದರೆ, ನಾವು ಇಲ್ಲಿಗೆ ಕರ್ನಾಟಕ ಮುಖ್ಯಮಂತ್ರಿಯನ್ನು ಆಹ್ವಾನಿಸುತ್ತೇವೆ. ಜತ್ತ ತಾಲೂಕನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಒತ್ತಡ ಹೇರುತ್ತೇವೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಗಡಿಯಲ್ಲಿರುವ ಹಳ್ಳಿಗಳು ತಮಗೆ ಬೇಕು ಎಂದು ಮಹಾರಾಷ್ಟ್ರ ಹೇಳುತ್ತಿದೆ. ಅದಕ್ಕೆ ತಿರುಗೇಟು ಎಂಬಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು’ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಜತ್ತ ತಾಲೂಕಿನಲ್ಲಿ ನೀರಿನ ಹೋರಾಟವೂ ಶುರುವಾಗಿದೆ.
ಇದನ್ನೂ ಓದಿ: Border dispute | ಪ್ರತಿಭಟನೆ ಭಯ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುವ 300ಕ್ಕೂ ಬಸ್‌ಗಳು ತಾತ್ಕಾಲಿಕ ಸ್ಥಗಿತ