ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಹಾಗೂ ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ, ಮಹಿಳೆಯೊಬ್ಬರ ಜತೆಗೆ ವಾಗ್ವಾದ ನಡೆಸಿದ್ದು ಹಾಗೂ ನಂತರ ನೀಡಿದ ಹೇಳಿಕೆ ಇದೀಗ ಪ್ರತಿಪಕ್ಷ ಕಾಂಗ್ರೆಸ್‌ಗೆ ಆಹಾರವಾಗಿದೆ. ಮಹಿಳಾ ಕಾಂಗ್ರೆಸ್ ವತಿಯಿಂದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಲಾಗಿದೆ.
ಇದೇ ವೇಳೆ ಲಿಂಬಾವಳಿ ಪ್ರಕರಣದಲ್ಲಿ ಬಿಜೆಪಿಗೆ ಮುಜುಗರ ಉಂಟಾಗಿದ್ದು, ಕೇಂದ್ರದ ವರಿಷ್ಠರು ವರದಿ ಕೇಳಿದ್ದಾರೆ ಎನ್ನಲಾಗಿದೆ.
ಘಟನೆಯನ್ನು ಖಂಡಿಸಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ಜಮಾವಣೆಗೊಂಡಿದ್ದ ಕೈ ಕಾರ್ಯಕರ್ತರು, ಅರವಿಂದ ಲಿಂಬಾವಳಿ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿದರು. ಅಲ್ಲದೇ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಇದಾದ ಬಳಿಕ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಲಿಂಬಾವಳಿ ವಿರುದ್ಧ ಪ್ರತಿಭಟನೆ ಮುಂದುವರಿಸಿ, ಅರವಿಂದ ಲಿಂಬಾವಳಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀಗೌಡ, ಲಿಂಬಾವಳಿ ಅವರಿಗೆ ಮಹಿಳೆಯರನ್ನು ರೇಪ್ ಮಾಡುವುದಕ್ಕೆ ಆಗುತ್ತದೆಯೋ ಇಲ್ಲವೋ, ಆದರೆ ಮಹಿಳೆಯರಿಗಿಂತ ಲಿಂಬಾವಳಿ ವಿಚಾರದಲ್ಲಿ ಮಹನೀಯರು ಎಚ್ಚರಿಕೆಯಿಂದ ಇರಬೇಕು. ಲಿಂಬಾವಳಿ ಒಬ್ಬ ಕಾಮುಕ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | ನಾನೇನು ಅವಳಿಗೆ ಅತ್ಯಾಚಾರ ಮಾಡಿದ್ದೀನ?: ಶಾಸಕ ಲಿಂಬಾವಳಿ ಮತ್ತೊಂದು ಎಡವಟ್ಟು
ಕಾಂಗ್ರೆಸ್ ಭವನದದಲ್ಲಿ ಪ್ರತಿಭಟನೆ ಶುರು ಮಾಡಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗೆ ನುಗ್ಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕೈ ಕಾರ್ಯಕರ್ತೆಯರಿಗೂ ಮಾತಿನ ಚಕಮಕಿ ಶುರುವಾಯಿತು. ಪರಿಸ್ಥಿತಿ ತಿಳಿಗೊಳಿಸಲು ಪ್ರತಿಭಟನಾಕಾರನ್ನು ಪೊಲೀಸರು ವಶಕ್ಕೆ ಪಡೆದರು.
ಮಹಿಳಾ ಕಾಂಗ್ರೆಸ್ ಭಿನ್ನಮತ !
ಪ್ರತಿಭಟನೆ ಪ್ರಾರಂಭಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೋಲ್ಡ್ ವಾರ್ ಶುರುವಾಗಿತ್ತು. ಮೊದಲಿಗೆ ಪ್ರತಿಭಟನೆ ಮಾಡಿದ ಮನೋಹರ ಮೇಲೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದರು. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ಪ್ರಾರಂಭದಲ್ಲಿ, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀಗೌಡ ಹಾಗೂ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಒಳಜಗಳ ಬೀದಿಗೆ ಬಿದ್ದಿತ್ತು.
ಇವರಿಬ್ಬರ ಭಿನ್ನಾಭಿಪ್ರಾಯದಿಂದಾಗಿ ಪ್ರತಿಭಟನೆ ಸ್ವಲ ತಡವಾಗಿ ಪ್ರಾರಂಭ ಆಯಿತು. ರಾಜ್ಯಾಧ್ಯಕ್ಷೆ ಒಂದು ಬಣ, ಜಿಲ್ಲಾಧ್ಯಕ್ಷೆಯ ಮತ್ತೊಂದು ಬಣ ಪ್ರತ್ಯೇಕ ಪ್ರತಿಭಟನೆ ನಡೆಸಲು ಮುಂದಾಗಿತ್ತು. ಮಾಧ್ಯಮಗಳ ಕ್ಯಾಮರಾಗಳಲ್ಲಿ ದೃಶ್ಯಗಳು ಸೆರೆ ಆಗುತ್ತಿದ್ದಂತೆ ಎಚ್ಚೆತ್ತ ಕಾರ್ಯಕರ್ತರು ಮುಜುಗರ ತಪ್ಪಿಸಿಕೊಳ್ಳಲು ಒಂದಾಗಿ ಪ್ರತಿಭಟನೆ ನಡೆಸಿದರು.
ವರದಿ ಕೇಳಿದ ಬಿಜೆಪಿ ವರಿಷ್ಠರು
ಅರವಿಂದ ಲಿಂಬಾವಳಿ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಾನು ಊರಿನಲ್ಲಿ ಇರಲಿಲ್ಲ, ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.
ಆದರೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಭೆ ಸೇರಿದ್ದ ಅನೇಕ ನಾಯಕರು ಈ ಕುರಿತು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಚುನಾವಣೆ ಹೊತ್ತಿನಲ್ಲಿ ಈ ರೀತಿ ಪ್ರತಿಪಕ್ಷಗಳಿಗೆ ಆಹಾರ ಒದಗಿಸುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವರಿಷ್ಠರಿಗೂ ಈ ಕುರಿತು ಮಾಹಿತಿಗಳು ಲಭಿಸಿದ್ದು, ರಾಜ್ಯ ಘಟಕದಿಂದ ಸಂಪೂರ್ಣ ವರದಿ ಕೇಳಿದ್ದಾರೆ. ರಾಜ್ಯ ಘಟಕದ ವರದಿಯನ್ನಾಧರಿಸಿ ಮುಂದಿನ ಕ್ರಮವನ್ನು ಸೂಚಿಸಬಹುದು ಎನ್ನಲಾಗಿದ್ದು, ಇದೇ ಕಾರಣಕ್ಕೆ ರಾಜ್ಯ ಘಟಕದಿಂದ ಇಲ್ಲಿವರೆಗೆ ಯಾವುದೇ ನೋಟಿಸ್ ಆಗಲಿ ನೀಡಿಲ್ಲ, ಕ್ರಮವನ್ನಾಗಲಿ ಕೈಗೊಂಡಿಲ್ಲ. ಈಗ ಕ್ರಮ ಕೈಗೊಳ್ಳುವ ಜತೆಗೆ, ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದವರೆಗೂ ಚರ್ಚೆಗಳು ಪಕ್ಷದ ವಲಯದಲ್ಲಿ ನಡೆಯುತ್ತಿವೆ ಎಂದು ಮೂಲಗಳೂ ತಿಳಿಸಿವೆ.
ಇದನ್ನೂ ಓದಿ | ವಿಸ್ತಾರ TOP 10 NEWS | ಚೀನಾ ಕಂಪನಿಗಳಿಗೆ ED ಆಘಾತದಿಂದ ಲಿಂಬಾವಳಿ ಆವಾಜ್‌ವರೆಗಿನ ಪ್ರಮುಖ ಸುದ್ದಿಗಳಿವು