Site icon Vistara News

KPTCL ಪರೀಕ್ಷಾ ಅಕ್ರಮ ಕೇಸಿನಲ್ಲಿ ಜಾಮೀನು ಸಿಕ್ಕಿದ ಕೂಡಲೇ CONSTABLE ಪರೀಕ್ಷೆ ಅಕ್ರಮದಲ್ಲಿ ಅರೆಸ್ಟ್‌!

sanjeeva KPTCL

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ (KPTCL Irregularity) ಅಕ್ರಮ ಪ್ರಕರಣದ ಕಿಂಗ್‌ಪಿನ್ ಸಂಜೀವ ಲಕ್ಷ್ಮಣ ಭಂಡಾರಿ ಸೇರಿದಂತೆ 20 ಆರೋಪಿಗಳಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಜೆಎಂಎಫ್‌ಸಿ ಎರಡನೇ ಕೋರ್ಟ್‌ನ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿತ್ತು. ಈ ನಡುವೆ ಸಂಜೀವ ಭಂಡಾರಿ ಜಾಮೀನು ಪಡೆದು ಕೋರ್ಟ್‌ನಿಂದ ಹೊರಬರುತ್ತಿದ್ದಂತೆಯೇ ಆತನನ್ನು ಇನ್ನೊಂದು ಪ್ರಕರಣದಲ್ಲಿ ಬಂಧಿಸಲಾಗಿದೆ. ಅದು ಕಾನ್‌ಸ್ಟೇಬಲ್‌ ನೇಮಕಾತಿ ಅಕ್ರಮ!

ಗೋಕಾಕ ಜಿಎಸ್ಎಸ್ ಪರೀಕ್ಷಾ ಕೇಂದ್ರದಲ್ಲಿ ಆ.7ರಂದು ನಡೆದ ಪರೀಕ್ಷೆಯ ವೇಳೆ ಅಕ್ರಮ ನಡೆದಿತ್ತು. ಸಿದ್ದಪ್ಪ ಮದಿಹಳ್ಳಿ ಎಂಬಾತ ಸ್ಮಾರ್ಟ್‌ ವಾಚ್‌ ಬಳಸಿ ಪ್ರಶ್ನೆಪತ್ರಿಕೆಯನ್ನು ಹೊರಗೆ ರವಾನಿಸಿದ್ದ. ಸಿಸಿ ಟಿವಿ ಫೂಟೇಜ್‌ ಆಧರಿಸಿ ಬೆಳಕಿಗೆ ಬಂದಿದ್ದ ಪ್ರಕರಣದಲ್ಲಿ ಆಗಸ್ಟ್ 10ರಂದು ಸಿದ್ದಪ್ಪ ಮದಿಹಳ್ಳಿಯನ್ನು ಬಂಧಿಸಲಾಗಿತ್ತು. ಸಿದ್ದಪ್ಪ ಅಕ್ರಮ ಎಸಗುವ ದೃಶ್ಯ ಪರೀಕ್ಷಾ ಕೇಂದ್ರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮುಂದೆ ಆ. 23ರಂದು ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಮುಂದೆ ಬಳಿಕ ಹಂತ ಹಂತವಾಗಿ 20 ಆರೋಪಿಗಳನ್ನು ಜಿಲ್ಲಾ ಪೊಲೀಸರು ಸೆರೆ ಹಿಡಿದಿದ್ದರು. ಅವರಿಗೆ ಜಾಮೀನು ಸಿಕ್ಕಿದೆ.

ಈ ನಡುವೆ, ಪ್ರಧಾನ ಆರೋಪಿ ಬೆಳಗಾವಿ ಮೂಲದ ಸಂಜೀವ್ ಲಕ್ಷ್ಮಣ ಭಂಡಾರಿ ಜಾಮೀನು ಸಿಕ್ಕು ಹೊರಬರುತ್ತಿದ್ದಂತೆ ಮತ್ತೆ ಅರೆಸ್ಟ್ ಆಗಿದ್ದಾನೆ. ಬೆಳಗಾವಿಯ ಹಿಂಡಲಗಾ ಜೈಲು ಮುಂದೆಯೇ ಸಿಐಡಿ ಅಧಿಕಾರಿಗಳು ಆತನನ್ನು ಹಿಡಿದುಕೊಂಡಿದ್ದಾರೆ. ಈತನ ಮೇಲೆ 2021 ರಲ್ಲಿ ನಡೆದಿದ್ದ ಪೊಲೀಸ್ ಕಾನ್ಸಸ್ಟೇಬಲ್ ನೇಮಕಾತಿಯಲ್ಲೂ ಅಕ್ರಮ ಎಸಗಿರುವ ಆರೋಪವಿದೆ.
ಇದೀಗ ಸಂಜೀವ ಭಂಡಾರಿಯನ್ನು ಬೆಳಗಾವಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ಆರು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಲಾಗಿದೆ.

ನಾಗಪ್ಪ
ಯಲ್ಲಪ್ಪ

ಇನ್ನೂ ಇಬ್ಬರ ಬಂಧನ
ಇದೇ ವೇಳೆ, ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಗೋಕಾಕ ನಗರ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ. ಗೋಕಾಕ ತಾಲ್ಲೂಕಿನ ಲೋಳಸೂರ ಗ್ರಾಮದ ಯಲ್ಲಪ್ಪ ಮಹದೇವ ರಕ್ಷಿ (26), ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದ ನಾಗಪ್ಪ ದೊಡಮನಿ (27) ಬಂಧಿತರು. ಇದರೊಂದಿಗೆ ಅಕ್ರಮಕ್ಕೆ ಸಂಬಂಧಿಸಿ ಬಂಧಿತರಾದವರ ಸಂಖ್ಯೆ ೨೨ಕ್ಕೇರಿದೆ.

ಬಂಧಿತರಲ್ಲಿ ಒಬ್ಬನಾದ ನಾಗಪ್ಪ ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ಸ್‌ ಉಪಕರಣ ತೆಗೆದುಕೊಂಡು ಹೋಗಿದ್ದ ಮತ್ತು ಯಲ್ಲಪ್ಪನಿಗೆ ಬ್ಲೂಟೂತ್‌ ಮೂಲಕ ಉತ್ತರ ಹೇಳಿದ್ದ ಎಂದು ಕೇಸು ದಾಖಲಾಗಿದೆ.

ಇದನ್ನೂ ಓದಿ | KPTCL Scam | ಕೆಪಿಟಿಸಿಎಲ್‌ ನೇಮಕಾತಿ ಹಗರಣದ 20 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು

Exit mobile version