Site icon Vistara News

Eshwar Khandre: ಅರಣ್ಯ ಭೂಮಿ ಒತ್ತುವರಿ ತೆರವಿಗೆ ಪ್ರಾಮಾಣಿಕ ಯತ್ನ ಮಾಡಿ; ಅಧಿಕಾರಿಗಳಿಗೆ ಈಶ್ವರ ಖಂಡ್ರೆ ಸೂಚನೆ

Minister Eshwar Khandre and CM Siddaramaiah

ಬೆಂಗಳೂರು: ಅರಣ್ಯ ಒತ್ತುವರಿಯಾದಂತೆ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಾಗುತ್ತದೆ. ಹೀಗಾಗಿ ಅರಣ್ಯವನ್ನು ಉಳಿಸಿ ಬೆಳೆಸಬೇಕಾದ್ದು ಪ್ರತಿಯೊಬ್ಬ ಅರಣ್ಯಾಧಿಕಾರಿಯ ಕರ್ತವ್ಯವಾಗಿದೆ. ಹೀಗಾಗಿ ಪ್ರಾಮಾಣಿಕವಾಗಿ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಅರಣ್ಯ ಭವನದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಪುಷ್ಪಗುಚ್ಛ ಸಮರ್ಪಿಸಿದ ಬಳಿಕ ಮಾತನಾಡಿದ ಅವರು, ಮರಗಳ್ಳರು, ಕಳ್ಳಬೇಟೆಗಾರರು, ಕಾಳ್ಗಿಚ್ಚಿನಿಂದ ಅರಣ್ಯ, ವನ್ಯಜೀವಿಗಳ ರಕ್ಷಣೆ ಮಾಡುವ ಕಾರ್ಯ, ಆನೆ ಕಾರ್ಯಾಚರಣೆ ವೇಳೆ ಈವರೆಗೆ 57 ಅರಣ್ಯ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಭಕ್ತಿಪೂರ್ವಕ ನಮನ ಸಲ್ಲಿಸುತ್ತೇನೆ. ನೀವು ಅವರಿಗೆ ನೈಜ ಶ್ರದ್ಧಾಂಜಲಿ ಸಲ್ಲಿಸಬೇಕೆಂದರೆ ನೀವೆಲ್ಲರೂ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಭೂಮಿ ಮರು ವಶಪಡಿಸಿಕೊಳ್ಳಬೇಕು ಎಂದು ಹೇಳಿದರು.

ವನ್ಯ ಮೃಗಗಳ ಚರ್ಮ, ಉಗುರು, ದಂತಕ್ಕಾಗಿ ಕಳ್ಳಬೇಟೆ ನಡೆಯುತ್ತದೆ. ಮನುಷ್ಯನ ಸ್ವಾರ್ಥಕ್ಕಾಗಿ ನೂರಾರು ವರ್ಷಗಳ ಹಳೆಯ ಮರಗಳನ್ನು ಕಡಿದು ಅರಣ್ಯ ಭೂಮಿ ಒತ್ತುವರಿ ಮಾಡಲಾಗುತ್ತಿದೆ. ಇಂತಹ ಕಳ್ಳ ಬೇಟೆಗಾರರನ್ನು ನಿಗ್ರಹಿಸಲು, ಅರಣ್ಯ ಸಂಪತ್ತನ್ನು ರಕ್ಷಿಸಲು ಅರಣ್ಯ ಸಿಬ್ಬಂದಿ ಅವಿರತವಾಗಿ ಕಣ್ಗಾವಲು ಇಟ್ಟಿದ್ದಾರೆ. ಈ ಸಂರಕ್ಷಣೆಯ ಕಾರ್ಯದಲ್ಲಿ ಹಲವರು ಕಾಡುಗಳ್ಳರೊಂದಿಗೆ ನಡೆದ ಹೋರಾಟದಲ್ಲಿ ಬಲಿಯಾಗಿದ್ದಾರೆ. ಅವರೆಲ್ಲರನ್ನೂ ಸ್ಮರಿಸಿ, ಅವರ ಕುಟುಂಬದ ಸದಸ್ಯರೊಂದಿಗೆ ಸರ್ಕಾರ ಸದಾ ಇರುತ್ತದೆ ಎಂಬ ಆತ್ಮಸ್ಥೈರ್ಯ ತುಂಬುವುದು ಈ ಹುತಾತ್ಮರ ದಿನದ ಉದ್ದೇಶವಾಗಿದೆ ಎಂದರು.

ಇದನ್ನೂ ಓದಿ | DK Shivakumar: ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣ: ನೆದರ್ಲೆಂಡ್ಸ್‌ ನಿಯೋಗಕ್ಕೆ ಡಿಸಿಎಂ ಡಿಕೆಶಿ ಆಹ್ವಾನ

ಸೆ.11ರಂದೇ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಏಕೆ?

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2013 ರಿಂದ ಅರಣ್ಯಗಳು ಮತ್ತು ಅವುಗಳನ್ನು ರಕ್ಷಿಸಲು ಶ್ರಮಿಸಿ ಹುತಾತ್ಮರಾದವರ ಗೌರವಾರ್ಥ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಿಸಲು ತೀರ್ಮಾನಿಸಿತು. ಖೇಜರ್ಲಿ ಹತ್ಯಾಕಾಂಡ ನಡೆದ ಸೆಪ್ಟೆಂಬರ್ 11ರಂದೇ ಈ ದಿನವನ್ನು ಆಚರಿಸಲು ನಿರ್ಧರಿಸಲಾಯಿತು ಎಂದರು.

ಏನಿದು ಖೇಜರ್ಲಿ ಹತ್ಯಾಕಾಂಡ

ಖೇಜರ್ಲಿ ಹತ್ಯಾಕಾಂಡದ ಬಗ್ಗೆ ಬಹಳ ಜನರಿಗೆ ತಿಳಿದಿಲ್ಲ. ಖೇಜರ್ಲಿ ಇರುವುದು ರಾಜಾಸ್ಥಾನದ ಜೋದ್ ಪುರ ವಲಯದಲ್ಲಿ. ಮೇರ್ವಾರ್‌ನ ಮಹಾರಾಜ ಅಜಯ್ ಸಿಂಗ್ 1730ರಲ್ಲಿ ಹೊಸ ಅರಮನೆ ಕಟ್ಟಲು ಖೇಜರ್ಲಿ ಭಾಗದಲ್ಲಿ ಮರಗಳನ್ನು ಕಡಿದು ತರುವಂತೆ ಆದೇಶ ನೀಡಿದ್ದ. ಆದರೆ ವೃಕ್ಷಪ್ರೇಮಿಗಳಾದ ಬಿಷ್ಣೋಯಿ ಸಮುದಾಯದ ಜನರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ, ಶಾಂತಿಯುತ ಹೋರಾಟ ಮಾಡಿದರು. ಆಗ ಮಂತ್ರಿ ಗಿರಿಧರ ಭಂಡಾರಿ ಆದೇಶದ ಮೇರೆಗೆ ವೃಕ್ಷ ರಕ್ಷಣೆಗೆ ಹೋರಾಟ ಮಾಡಿದ 363 ಜನರನ್ನು ಕೊಂದು ಹಾಕಲಾಯಿತು. ಈ ಘಟನೆಯಿಂದ ನೊಂದ ಮಹಾರಾಜ ಅಭಯ್ ಸಿಂಗ್ ಕಾಡಿನಲ್ಲಿ ಮರಗಳನ್ನು ಕಡಿಯುವುದನ್ನು ಮತ್ತು ವನ್ಯಜೀವಿಗಳನ್ನು ಬೇಟೆಯಾಡುವುದನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದ ಎಂದು ಇತಿಹಾಸ ಹೇಳುತ್ತದೆ. ವೃಕ್ಷ ರಕ್ಷಣೆಗೆ ಪ್ರಾಣವನ್ನೇ ಸಮರ್ಪಿಸಿದ 363 ವೃಕ್ಷಪ್ರೇಮಿಗಳ ತ್ಯಾಗವನ್ನೂ ಸ್ಮರಿಸುವ ದಿನವೂ ಇದಾಗಿದೆ ಎಂದರು.

ಇತ್ತೀಚೆಗಷ್ಟೇ ಹಾಸನ ಜಿಲ್ಲೆಯ ಆಲೂರಿನ, ಹೊನ್ನವಳ್ಳಿಯ ಶಾರ್ಪ್ ಶೂಟರ್ ವೆಂಕಟೇಶ್ ಅವರು ಆನೆ ಕಾರ್ಯಾಚರಣೆ ವೇಳೆ ಹುತಾತ್ಮರಾದರು. ಅದೇ ರೀತಿ ಕೊಡಗಿನಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಆನೆಗಳನ್ನು ಓಡಿಸುವ ಪ್ರಯತ್ನದಲ್ಲಿ ಮತ್ತೊಬ್ಬರು ಗಿರೀಶ್ ಎಂಬ ಆನೆ ಕಾರ್ಯಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ. ತಾವು ವೆಂಕಟೇಶ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಂದಿದ್ದಾಗಿ ತಿಳಿಸಿದರು.

ಕಾಡು ಉಳಿದರೆ ಮಾತ್ರ ನಾಡು ಉಳಿಯಲು ಸಾಧ್ಯ. ಅರಣ್ಯ ಸಿಬ್ಬಂದಿ ಕಾಡು ಉಳಿಸಲು, ಕಾಡು ಮೃಗಗಳನ್ನು ಉಳಿಸಲು ಪ್ರಾಣದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಪರಿಸರ ಪ್ರೇಮಿಗಳು ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲವನ್ನೂ ಮನಗಂಡು ನಾವು ಪ್ರಕೃತಿ ಪರಿಸರದ ರಕ್ಷಣೆಗೆ ಮುಂದಾಗಬೇಕು. ಅರಣ್ಯ ಮತ್ತು ನಗರ ಪ್ರದೇಶದಲ್ಲಿನ ಸಾಮಾಜಿಕ ಅರಣ್ಯಗಳ ಪ್ರದೇಶಗಳನ್ನು ರಕ್ಷಿಸಬೇಕು. ಇದನ್ನು ಅನ್ಯ ಉದ್ದೇಶಕ್ಕೆ ಬಳಕೆ ಆಗದಂತೆ ಎಚ್ಚರ ವಹಿಸಬೇಕು ಎಂದರು.

ಜಗತ್ತು ಎದುರಿಸುತ್ತಿರುವ ಜಾಗತಿಕ ತಾಪಮಾನ ಏರಿಕೆ, ಹವಾಮಾನ್ಯ ವೈಪರೀತ್ಯದಂತಹ ಕಠಿಣ ಸವಾಲುಗಳನ್ನು ಮತ್ತಷ್ಟು ಎದುರಿಸಬೇಕಾಗಿ ಬರುತ್ತದೆ. ಈ ಭೂಮಿ ಅಪಾಯಕ್ಕೆ ಸಿಲುಕುತ್ತದೆ. ಈ ಭೂಮಿ ನಮಗೆ ಎಲ್ಲವನ್ನೂ ನೀಡಿದೆ. ನಮ್ಮ ಇಂದಿನ ಐಷಾರಾಮಿ ಬದುಕಿಗೆ ಪ್ರಕೃತಿ ನೀಡಿರುವ ಕೊಡುಗೆ ಅಪಾರ. ಈ ಭೂಮಿಗೆ ತಿರುಗಿಸಿ ನಾವು ಏನನ್ನೂ ಕೊಡಲು ಸಾಧ್ಯವಿಲ್ಲ. ಹೀಗಾಗಿ ನಾವು ಪ್ರಕೃತಿ ಪರಿಸರ ರಕ್ಷಿಸಲು ಕಿಂಚಿತ್ ಪ್ರಯತ್ನ ಪಟ್ಟರೂ ಅದು ನಾವು ಜನ್ಮಭೂಮಿಗೆ ಕೊಟ್ಟ ಕೊಡುಗೆ ಆಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಇದನ್ನೂ ಓದಿ | CM Siddaramaiah: ವಿದ್ಯೆ ಕಲಿತು ಜಾತಿವಾದಿಗಳಾದರೆ ಪ್ರಯೋಜನವಿಲ್ಲ ಎಂದ ಸಿದ್ದರಾಮಯ್ಯ

ಜಗತ್ತಿನ 7 ಜೀವ ವೈವಿಧ್ಯ ತಾಣಗಳಲ್ಲಿ ಭಾರತದ ಪಶ್ಚಿಮಘಟ್ಟ ಸಹ ಒಂದಾಗಿದೆ. ರಾಜ್ಯದಲ್ಲಿರುವ ಪಶ್ಚಿಮಘಟ್ಟವಂತೂ ನೂರಾರು ಅಪರೂಪದ ಪ್ರಭೇದದ ಸಸ್ಯ ಸಂಕುಲ, ಪಕ್ಷಿ ಸಂಕುಲ ಮತ್ತು ಪ್ರಾಣಿ ಸಂಕುಲದ ನೆಲೆವೀಡಾಗಿದೆ. ಕರುನಾಡ ಸಮೃದ್ಧಿಯಲ್ಲಿ ಈ ಕಾನನಗಳ ಪಾತ್ರ ಹಿರಿದಾಗಿದೆ. ಹಲವು ನದಿಗಳ ಉಗಮಸ್ಥಾನವಾಗಿದೆ. ಈ ಪರಿಸರ ಸೂಕ್ಷ್ಮ ಪ್ರದೇಶವನ್ನು ಸಂರಕ್ಷಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ರಂಜನ್ ಮತ್ತಿತರರು ಪಾಲ್ಗೊಂಡಿದ್ದರು. ಮೃತ ಅರಣ್ಯ ಸಿಬ್ಬಂದಿ ಗೌರವಾರ್ಥ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು.

Exit mobile version