Site icon Vistara News

Malavalli bandh : ಕಾವೇರುತ್ತಿರುವ ಕಾವೇರಿ ಕಿಚ್ಚು; ಇಂದು ಮಳವಳ್ಳಿ, ಕೆ.ಆರ್‌.ಪೇಟೆ ಬಂದ್

krpete dandh Cauvery water dispute Latest Updates

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು (Cauvery water dispute) ಖಂಡಿಸಿ ರೈತ ಸಂಘಟನೆಗಳ ಹೋರಾಟ ಮುಂದುವರಿದಿದೆ. ರೈತ ಸಂಘಟನೆಗಳು ಸೆ.26ರಂದು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಕೆ.ಆರ್‌.ಪೇಟೆ, ಮಳವಳ್ಳಿ ಬಂದ್‌ಗೆ (Malavalli bandh) ಕರೆ ಕೊಟ್ಟಿದ್ದಾರೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಳವಳ್ಳಿಯಲ್ಲಿ ಬಹುತೇಕ ಅಂಗಡಿ ಮುಂಗಟ್ಟು ಬಂದ್‌ ಆಗಿವೆ. ತುರ್ತು ಸೇವೆ ಅಡಿ ಬರುವ ಆಸ್ಪತ್ರೆ, ಮೆಡಿಕಲ್, ಹಾಲಿನ ಬೂತ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಿ, ಕಾವೇರಿ ಹೋರಾಟಕ್ಕೆ ಬೆಂಬಲ ನೀಡಲು ಮನವಿ ಮಾಡಿದ್ದಾರೆ. ಬಳಿಕ ಮಳವಳ್ಳಿ ನಗರದ ರಾಜಕುಮಾರ್ ವೃತ್ತದಲ್ಲಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಾರೆ. ಮಳವಳ್ಳಿಯಲ್ಲಿ ಪ್ರತಿಭಟನಾಕಾರರು ಶಾಲಾ- ಕಾಲೇಜುಗಳನ್ನು ಬಂದ್‌ ಮಾಡಿಸಿದ್ದಾರೆ. ತರಗತಿಯಿಂದ ಹೊರ ಬಂದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಟದಾದ್ಯಂತ ಪೊಲೀಸ್ ಬಂದ್ ಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಕೆಆರ್‌ಎಸ್‌ ಮುತ್ತಿಗೆ

ಬಿಜೆಪಿ ಯುವ ಮೋರ್ಚದ ಕಾರ್ಯಕರ್ತರು ಮತ್ತೊಂದು ಕಡೆ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಿದ್ದಾರೆ. ಇತ್ತ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಿರುವ ವಿಶ್ವೇಶ್ವರಯ್ಯ ಪ್ರತಿಮೆ‌ ಮುಂದೆ ಧರಣಿ ನಡೆಸಲಿದ್ದಾರೆ.

ಕೆ.ಆರ್‌ಪೇಟೆಯೂ ಬಂದ್‌

ಕಾವೇರಿ ನೀರಿನ ಜತೆಗೆ ಹೇಮಾವತಿ ನೀರು ಉಳಿವಿಗಾಗಿ ಕೆ.ಆರ್‌.ಪೇಟೆ ಬಂದ್‌ಗೂ ಕರೆ ಕೊಟ್ಟಿದ್ದಾರೆ. ಕಾವೇರಿ ಮತ್ತು ಹೇಮಾವತಿ ನೀರು ಉಳಿಸಿಕೊಳ್ಳಲು ರೈತ ಸಂಘ, ಕನ್ನಡ ಸಂಘಟನೆ, ದಲಿತ, ಪ್ರಗತಿಪರ ಸಂಘಟನೆಗಳಿಂದ ಬಂದ್‌‌ಗೆ ಕರೆ ನೀಡಲಾಗಿದೆ. ಕೆ.ಆರ್.ಪೇಟೆ‌ ಭಾಗದಲ್ಲಿ ಉಪಯೋಗಕ್ಕೆ ಸಿಗುವುದು ಹೇಮಾವತಿ ನೀರು, ಕೆ.ಆರ್.ಎಸ್ ನೀರು ಖಾಲಿಯಾದರೆ ಹೇಮಾವತಿಯಿಂದ ನೀರು ಬಿಡುಗಡೆ ಮಾಡಬೇಕಾಗುತ್ತದೆ.

ಆಗ ಎರಡು ಡ್ಯಾಂನ ನೀರು ಖಾಲಿಯಾಗುವ ಆಂತಕ ಎದುರಾಗುತ್ತದೆ. ಜತೆಗೆ ಕೆ.ಆರ್.ಪೇಟೆ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಎರಡು ಡ್ಯಾಂಗಳ ನೀರು ರಕ್ಷಣೆಗೆ ಆಗ್ರಹಿಸಿ ಕೆ.ಆರ್.ಪೇಟೆ ಬಂದ್‌ಗೆ ಕರೆ ನೀಡಲಾಗಿದೆ. ಇತ್ತ ಕೆಆರ್‌ಪೇಟ್‌ ಬಂದ್‌ ಇದ್ದರೂ ಅಂಚೆ ಕಚೇರಿ ತೆರೆದಿದ್ದ ಕಾರಣಕ್ಕೆ ಹೋರಾಟಗಾರರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಹೋರಾಟಗಾರರ ಒತ್ತಡಕ್ಕೆ ಮಣಿದು ಕಚೇರಿ ಬಾಗಿಲು ಹಾಕಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version