ಬೆಂಗಳೂರು: ಮಾಲ್ ಆಫ್ ಏಷ್ಯಾ ಸುತ್ತಮುತ್ತ ಪೊಲೀಸ್ ಆಯುಕ್ತರು ಹೊರಡಿಸಿದ ನಿಷೇಧಾಜ್ಞೆ ಕೋರ್ಟ್ ಮೆಟ್ಟಿಲೇರಿದ್ದು, ಇದರ ಹಿಂದೆಯೇ ವಿವಿಧ ಇಲಾಖೆಗಳಿಂದ ಮಾಲ್ ಆಫ್ ಏಷ್ಯಾಗೆ (Mall of Asia) ನೋಟಿಸ್ ನೀಡಲಾಗಿದೆ. ಇತ್ತ ಐಟಿ-ಬಿಟಿ ಮಂದಿಯು ಮಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಲ್ ಆಫ್ ಏಷ್ಯಾ ಬೆಂಗಳೂರು ಉತ್ತರದಲ್ಲಿ ತಲೆ ಎತ್ತಿರುವ ಅತಿ ದೊಡ್ಡ ಮಾಲ್. ಆದರೆ ಅದೇ ಮಾಲ್ ಇವತ್ತು ಬೆಂಗಳೂರಿನ ಜನತೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಸಿಟಿ ಪೊಲೀಸರು ಹಾಗೂ ಮಾಲ್ ಆಡಳಿತ ಮಂಡಳಿ ನಡುವೆ ಕಾನೂನು ಸಮರಕ್ಕೆ ನಾಂದಿಯಾಡಿದೆ.
ಕರ್ನಾಟಕ ರಕ್ಷಣಾ ವೇದಿಕೆ ಹೋರಾಟದ ಬಳಿಕ ಕೆಲ ಕಾನೂನು ಮಾನದಂಡ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡ ನಗರ ಪೊಲೀಸ್ ಆಯುಕ್ತರು, ಮಾಲ್ ಆಫ್ ಏಷ್ಯಾ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿ ನಿಷೇಧಾಜ್ಞೆ ಹೊರಡಿಸಿದ್ದರು. ಮಾಲ್ ಮುಂದೆ ನಿಯಮಗಳನ್ನು ಗಾಳಿಗೆ ತೂರಿ ವಾಹನ ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದ ಉಂಟಾದ ಸಮಸ್ಯೆಗಳನ್ನು ತಪ್ಪಿಸುವುದಾಗಿತ್ತು.
ಇದನ್ನೂ ಓದಿ: BJP Karnataka: ರಾಜ್ಯ ಬಿಜೆಪಿ ವಕ್ತಾರರಾಗಿ ಹರಿಪ್ರಕಾಶ್ ಕೋಣೆಮನೆ ನೇಮಕ
ದೊಡ್ಡ ಮಾಲ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ
ಬೆಂಗಳೂರಿನ ಅತೀ ದೊಡ್ಡ ಮಾಲ್‌ನಲ್ಲಿ ಗ್ರಾಹಕರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದ್ದರೂ ಪಾರ್ಕಿಂಗ್ ದರ ಬಲು ದುಬಾರಿ. ಹೀಗಾಗಿ ವಾಹನ ಮಾಲೀಕರು ಮಾಲ್ ಸುತ್ತ ಮುತ್ತಲ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಿ ಹೋಗುತ್ತಿದ್ದಾರೆ. ಇದ್ದರಿಂದ ಬ್ಯಾಟರಾಯನಪುರ ಸುತ್ತಮುತ್ತಲ ರಸ್ತೆಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್‌ನಿಂದ ಪ್ರಯಾಣಿಕರು ಹೈರಾಣಾರಾಗಿದ್ದಾರೆ. ಇದರ ಜತೆಗೆ ಮಾಲ್‌ನಲ್ಲಿರುವ ಸ್ಟಾಲ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಾಹನಗಳ ನಿಲುಗಡೆಗೂ ಅವಕಾಶವಿಲ್ಲ. ಹೀಗಾಗಿ ಅವರು ರಸ್ತೆ ಬದಿಯೇ ವಾಹನಗಳ ಪಾರ್ಕಿಂಗ್ ಮಾಡುತ್ತಿದ್ದು, ಆಂಬ್ಯುಲೆನ್ಸ್ ಓಡಾಟಕ್ಕೂ ಅಡ್ಡಿಯಾಗುತ್ತಿದೆ.
ಐಟಿ ಬಿಟಿ ಮಂದಿಗೂ ತಟ್ಟಿದ ಟ್ರಾಫಿಕ್ ಬಿಸಿ; ಫ್ಲೈಟ್ ಮಿಸ್ಸಿಂಗ್
ಒಂದ್ ಕಡೆ ಸಿಟಿ ಪೊಲೀಸರು ಹಾಗೂ ಮಾಲ್ ಆಡಳಿತ ಮಂಡಳಿ ಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೆ ಬಿಬಿಎಂಪಿ ಹಾಗೂ ರಾಷ್ಡ್ರೀಯ ಹೆದ್ದಾರಿಯ ನಿಯಮಗಳನ್ನು ಮಾಲ್ ಆಡಳಿತ ಮಂಡಳಿ ಗಾಳಿಗೆ ತೂರಿದೆ ಎಂಬುದು ಬೆಳಕಿಗೆ ಬಂದಿದೆ. ಬಿಬಿಎಂಪಿ ನೀಡಿದ್ದ ನಕ್ಷೆಯನ್ನು ಬದಲಾಯಿಸಿ ಕಟ್ಟಡ ಕಾಮಗಾರಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಪಾರ್ಕಿಂಗ್ ಏರಿಯಾ ಎಂದು ಪ್ಲಾನ್‌ನಲ್ಲಿ ಸೂಚಿಸಿದ್ದು, ಸದ್ಯ ಅದನ್ನು ಪಾರ್ಟಿ ಏರಿಯಾ ಎಂದು ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ.
ಅದಲ್ಲದೇ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿರುವ ಆರೋಪದ ಮೇಲೆ ನೋಟಿಸ್ ಸರ್ವ್ ಆಗಿದೆ. ಇದರ ಮಧ್ಯೆ ಏರ್‌ಪೋರ್ಟ್‌ಗೆ ಹೋಗುವವರು, ಐಟಿಬಿಟಿ ಹಾಗೂ ಉದ್ಯಮಿಗಳಿಗೆ ಟ್ರಾಫಿಕ್ ಜಾಮ್ ಉಂಟಾಗಿ, ಫ್ಲೈಟ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಮಾಲ್ ಪ್ರವೇಶಕ್ಕೆ ಎಂಟ್ರಿ ಫೀಸ್ ಹಾಗೂ ಡಿಜೆ ಮ್ಯೂಸಿಕ್ ಸೇರಿದಂತೆ ಕೆಲ ಮನರಂಜನೆ ಕಾರ್ಯಕ್ರಮಗಳಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಮಾಲ್ ಆಫ್ ಏಷ್ಯಾ ಆಡಳಿತ ಮಂಡಳಿಗೆ ನೋಟಿಸ್ ಜಾರಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ