Site icon Vistara News

Mallikarjun Kharge | ಮಲ್ಲಿಕಾರ್ಜುನ ಖರ್ಗೆ ನೆಲಮೂಲದ ನಾಯಕ, ಸೋನಿಯಾ ಗಾಂಧಿ ಬಣ್ಣನೆ

Sonia Gandhi

ನವೆ ದೆಹಲಿ: ನನಗೆ ಈಗ ತುಂಬ ಸಂತೋಷವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ನಿಮ್ಮ ವಿವೇಕದಿಂದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೀರಿ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ತಳಸ್ಪರ್ಶಿ, ನೆಲಮೂಲದ ನಾಯಕರಾಗಿದ್ದಾರೆ. ಸಾಧಾರಣ ಕಾರ್ಯಕರ್ತರಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷಕ್ಕೆ ಪ್ರೇರಣೆ ಸಿಗಲಿದೆ, ಸಂದೇಶ ರವಾನೆಯಾಗಲಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಸೋನಿಯಾ ಗಾಂಧಿ ಅವರು ಹೇಳಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, ನನಗೆ ಇಷ್ಟು ದಿನ ಪ್ರೀತಿ, ಗೌರವವಗಳನ್ನು ನೀವು ನೀಡಿದ್ದೀರಿ. ಇದು ನನಗೆ ಗೌರವದ ವಿಷಯವಾಗಿದೆ. ನನ್ನ ಕೊನೆಯ ಉಸಿರು ಇರೋವರೆಗೆ ಕಾಪಿಟ್ಟುಕೊಳ್ಳುತ್ತೇನೆ. ನನ್ನನ್ನು ನಂಬಿ ಬಹುದೊಡ್ಡ ಜವಾಬ್ದಾರಿಯನ್ನು ಈ ಹಿಂದೆ ನೀಡಿದ್ದೀರಿ. ಅದನ್ನು ನಿರ್ವಹಿಸಿದ್ದೇನೆ. ಆ ಜವಾಬ್ದಾರಿಯಿಂದ ನಾನೀಗ ಮುಕ್ತನಾಗಿದ್ದೇನೆ. ಈ ಸಂದರ್ಭವನ್ನು ಬಳಸಿಕೊಂಡು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ.

ಪರಿವರ್ತನೆ ಜಗದ ನಿಯಮ. ನಮ್ಮ ಬದುಕಿನಲ್ಲಿ ಪರಿವರ್ತನೆ ಇದೆ. ಹಾಗಾಗಿಯೇ ಇಂದು ಪಕ್ಷವೂ ಪರಿವರ್ತನೆಯ ಹಾದಿಯಲ್ಲಿದೆ. ಇಂದು ನಮ್ಮ ಪಕ್ಷಕ್ಕೆ ಸವಾಲುಗಳಿವೆ. ಪ್ರಜಾತಂತ್ರ ಅಪಮೌಲ್ಯವಾಗುತ್ತಿದೆ. ನಾವು ಇದೆನ್ನೆಲ್ಲ ಎದುರಿಸಬೇಕಾಗಿದೆ. ಈ ಹಿಂದೆಯೂ ಪಕ್ಷವು ಅನೇಕ ಸೋಲುಗಳನ್ನ ಕಂಡಿದೆ. ಏಳು ಬೀಳುಗಳನ್ನು ಕಂಡಿದೆ. ಆ ಎಲ್ಲ ಘಟ್ಟಗಳನ್ನು ಮೀರಿದೆ. ಈಗಲೂ ನಾವೆಲ್ಲ ಒಂದಾಗಿ ಎದುರಾಗಿರುವ ಎಲ್ಲ ಸವಾಲುಗಳನ್ನು ಎದುರಿಸೋಣ ಎಂದರು.

ಸೋನಿಯಾ ಕಾರ್ಯ ಶ್ಲಾಘನೆ
ಅಜಯ್ ಮಾಕೆನ್ ಅವರು ಮಾತನಾಡಿ, ಸೋನಿಯಾ ಗಾಂಧಿ ಅವರು ಪಕ್ಷ ಹಾಗೂ ದೇಶಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕವಾಗಿ ದೇಶವನ್ನು ಅರಿತು, ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದಾರೆ. ಜನರು ಕೂಡ ಅವರಿಗೆ ಅದೇ ಪ್ರೀತಿಯನ್ನು ಪ್ರತಿಯಾಗಿ ನೀಡಿದ್ದಾರೆ. ತಮ್ಮ ದೂರದೃಷ್ಟಿಯಿಂದಾಗಿ ಕೆಲಸ ಮಾಡಿದ್ದಾರೆ. ಅನೇಕ ಬಾರಿ ಇದನ್ನು ಮಾಡಿ ತೋರಿಸಿದ್ದಾರೆ. ಪಕ್ಷದ ರಾಜಕೀಯ ಬೆಳವಣಿಗೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಗತ್ಯ ಬಿದ್ದಾಗಲೆಲ್ಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರು ಹಿಂದೆ ಬಿದ್ದಿಲ್ಲ ಎಂದು ಅವರು ತಿಳಿಸಿದರು.

ಇದನ್ನೂ ಓದಿ | Mallikarjun Kharge | ಇದೆಂಥ ಹೊಸ ಭಾರತ? ಬಿಜೆಪಿ ನೀತಿಗಳನ್ನು ಟೀಕಿಸಿದ ಕಾಂಗ್ರೆಸ್‌ನ ಹೊಸ ಅಧ್ಯಕ್ಷ ಖರ್ಗೆ

Exit mobile version