Site icon Vistara News

Karnataka Election: ಮೋದಿ ಈಗ ಅಳುಮುಂಜಿ ಮಗು; ಆಳುವ ದೊರೆಗೆ ಅಳುವುದೇ ಕೆಲಸವೆಂದ ಮಲ್ಲಿಕಾರ್ಜುನ ಖರ್ಗೆ

Mallikarjun Kharge

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ತಾವು ಕೆಳ ಜಾತಿಯವರು ಅಂತ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ, ನಾನು ಮೋದಿಗಿಂತಲೂ ಕೆಳ ಜಾತಿಯವನು, ಅವರು ನನ್ನ ಮೇಲೆಯೇ ಇರುವುದು. ನಾವೇನೂ ಮೋದಿ ಅವರಂತೆ ನನಗೆ 91 ಬೈಗುಳ ಆದವು ಅಂತ ಅಳುತ್ತಾ ಕೂರೋದಿಲ್ಲ. ಪ್ರಧಾನಿ ಮೋದಿ ಬೆಳಗ್ಗೆಯಿಂದ ಸಂಜೆಯವರೆಗೆ ಅಳುತ್ತಿದ್ದು, ಅಳುಮುಂಜಿ ಮಗು (ಕ್ರೈ ಬೇಬಿ) ಆಗಿದ್ದಾರೆ. ಆಳುವ ದೊರೆಗೆ ಅಳುವುದೇ ಕೆಲಸವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯಿಂದ ಪುತ್ರ ಪ್ರಿಯಾಂಕ್ ಖರ್ಗೆ ಟಾರ್ಗೆಟ್ ವಿಚಾರಕ್ಕೆ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ನಾವೇನೂ ಮೋದಿಯಂತೆ ಅಳುತ್ತಾ ಕೂರುವುದಿಲ್ಲ. ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Election 2023 : ಅಬ್ಬಬ್ಬಾ! ಕಣದಲ್ಲಿವೆ 80ಕ್ಕೂ ಹೆಚ್ಚು ಪಕ್ಷಗಳು!! ಈ ಪಕ್ಷಗಳ ಹೆಸರೇ ವಿಶೇಷವಾಗಿದೆ ನೋಡಿ!

ಸೋನಿಯಾ ಗಾಂಧಿಗೆ ಬಿಜೆಪಿಯವರು ಏನೆಲ್ಲ ಬೈದಿಲ್ಲ? ಸೋನಿಯಾ ಗಾಂಧಿಗೆ ವಿಡೋ, ಇಟಲಿ ಗರ್ಲ್ ಎಂದಿದ್ದಾರೆ. ರಾಹುಲ್ ಗಾಂಧಿಯನ್ನು ಹೈ ಬ್ರಿಡ್ ಅಂತೆಲ್ಲಾ ಕರೆದಿದ್ದಾರೆ. ಬಿಜೆಪಿ ಭಾವನಾತ್ಮಕ ವಿಚಾರ ಇಟ್ಟುಕೊಂಡು ಹೋದರೆ ಅಭಿವೃದ್ಧಿ ಆಗಲ್ಲ. ಆದರೆ, ಅವರು ಅದೇ ರೀತಿಯಲ್ಲಿ ಹೋಗುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್‌ ಪ್ರಣಾಳಿಕೆಗೆ ಬಿಜೆಪಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ನಮ್ಮ ಪ್ರಣಾಳಿಕೆಯಲ್ಲಿರುವುದನ್ನು ನಮಗೆ ಅನುಷ್ಠಾನ ಮಾಡಲು ಆಗಲ್ಲ ಎಂದು ಹೇಳುತ್ತಾರೆ. ಆದರೆ, ಈ ಹಿಂದೆ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮ ಪ್ರಣಾಳಿಕೆ ನರೇಂದ್ರ ಮೋದಿಯವರ ಗ್ಯಾರಂಟಿ, ವಾರಂಟಿ ಇಲ್ಲದ ಮಾದರಿಯಲ್ಲ. ನಮ್ಮ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿ ಮಾಡುತ್ತೇವೆ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಚಾರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಣಾಳಿಕೆ ಕಮಿಟಿ ಅದರ ಬಗ್ಗೆ ಸ್ಪಷ್ಟನೆ ಮಾಡಿದ್ದಾರೆ. ಬೇರೆಯವರು ರಾತ್ರಿ ನಾನ್ ವೆಜ್ ತಿಂದು, ಹಗಲು ಹೊತ್ತಲ್ಲಿ ನಾನ್ ವೆಜ್ ತಿನ್ನುವವರಿಗೆ ಬಯ್ಯುತ್ತಾರೆ. ಪ್ರಶ್ನೆ ಪತ್ರಿಕೆ ಕೊಡದೆ ಉತ್ತರ ಬಿಡಿಸಿ ಎಂದರೆ ಹೇಗಾಗುತ್ತದೆ? ಅಧಿಕಾರಕ್ಕೆ ಬಂದ ಮೇಲೆ ಪ್ರಣಾಳಿಕೆ ಹೇಗೆ ಅನುಷ್ಠಾನ ಮಾಡುತ್ತೇವೆ ಎಂಬುವುದನ್ನು ತೋರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದನ್ನೂ ಓದಿ | Karnataka Election 2023: ಪ್ರಧಾನಿ ಮೋದಿ ಭಾಷಣದಲ್ಲಿ ‘ಜೈ ಬಜರಂಗಬಲಿ’ ಸಂಚಲನ!

ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

“ಕ್ರೈಪಿಎಂ ಪೇಸಿಎಂ” ಅಭಿಯಾನ ಮಾಡಿದ್ದ ಕಾಂಗ್ರೆಸ್‌

ಇತ್ತೀಚೆಗೆ 40 ಪರ್ಸೆಂಟ್‌ ಸರ್ಕಾರ ಎಂದು ಆರೋಪಿಸಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ʼಪೇ ಸಿಎಂʼ ಅಭಿಯಾನ ನಡೆಸಿತ್ತು. ಆದರೆ, ಬಿಜೆಪಿ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ನವರು 91 ಬಾರಿ ಬೈದಿದ್ದಾರೆ ಎಂದು ಹೇಳಿದ್ದರು. ಇದರಿಂದ ಕಾಂಗ್ರೆಸ್‌ ಸಹ “ಕ್ರೈಪಿಎಂ ಪೇಸಿಎಂ” ಎಂಬ ಮತ್ತೊಂದು ಅಭಿಯಾನವನ್ನು ಆರಂಭಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸುತ್ತಿದೆ.

Exit mobile version