ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಅಧ್ಯಕ್ಷರಾಗಿ (Congress President) ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. 22 ವರ್ಷದಲ್ಲಿ ಇದೇ ಮೊದಲ ಬಾರಿ ಗಾಂಧಿ ಮನೆತನದ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಹಾಗೆಯೇ, ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷರಾಗುತ್ತಿರುವ ಎರಡನೇ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ ಅವರಾಗಿದ್ದಾರೆ.
ಅಕ್ಟೋಬರ್ 17ರಂದು ನಡೆದ ಎಐಸಿಸಿ ಅಧ್ಯಕ್ಷ ಹುದ್ದೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು, ತಿರುವನಂತಪುರ ಕ್ಷೇತ್ರ ಸಂಸದ ಶಶಿ ತರೂರ್ ಅವರನ್ನು ಸೋಲಿಸಿದ್ದರು. ಖರ್ಗೆ ಪದಗ್ರಹಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸುರ್ಜೇವಾಲಾ, ವೇಣುಗೋಪಾಲ್, ದಿಗ್ವಿಜಯ ಸಿಂಗ್, ಬೈರತಿ ಸುರೇಶ್, ಹಿಟ್ನಾಳ ಡಿ ಕೆ ಶಿವಕುಮಾರ್ ಕೂಡ ಹಾಜರಿದ್ದರು.
ದಿಲ್ಲಿಯಲ್ಲಿ ನಡೆದ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷೀಯ ಚುನಾವಣಾ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಮಧುಸೂದನ್ ಮಿಸ್ತ್ರಿ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೆಲುವಿನ ಸರ್ಟಿಫಿಕೆಟ್ ಪ್ರದಾನ ಮಾಡಿದರು. ಬಳಿಕ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ವ್ಯಕ್ತಿತ್ವನ್ನು ಪರಿಚಯಿಸಿದರು. ಅವರು ಅಧ್ಯಕ್ಷರಾದ್ದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂದು ಹೇಳಿದರು. ಜೊತೆಗೆ, ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ ಸೋನಿಯಾ ಗಾಂಧಿ ಅವರನ್ನು ಈ ವೇಳೆ ಕೊಂಡಾಡಿದರು. ಸೋನಿಯಾ ಅವರು ಸಮರ್ಪಣಾ ಭಾವದಿಂದ ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರಲ್ಲಿ ಅವರ ಬಗ್ಗೆ ಹೃದ್ಯ ಭಾವನೆಯಿದೆ ಎಂದು ಕೆ ಸಿ ವೇಣುಗೋಪಾಲ್ ಅವರು ಹೇಳಿದರು.
ಅಧಿಕಾರ ಸ್ವೀಕರಿಸುವ ಮುಂಚೆ ಮಲ್ಲಿಕಾರ್ಜುನ ಖರ್ಗೆ ಅವರು ರಾಜಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಸೋನಿಯಾ ಕಾರ್ಯ ಶ್ಲಾಘನೆ
ಅಜಯ್ ಮಾಕೆನ್ ಅವರು ಮಾತನಾಡಿ, ಸೋನಿಯಾ ಗಾಂಧಿ ಅವರು ಪಕ್ಷ ಹಾಗೂ ದೇಶಕ್ಕೆ ಸಾಕಷ್ಟು ಕೆಲಸ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕವಾಗಿ ದೇಶವನ್ನು ಅರಿತು, ಅದಕ್ಕೆ ತಕ್ಕಂತೆ ಕೆಲಸ ಮಾಡಿದ್ದಾರೆ. ಜನರು ಕೂಡ ಅವರಿಗೆ ಅದೇ ಪ್ರೀತಿಯನ್ನು ಪ್ರತಿಯಾಗಿ ನೀಡಿದ್ದಾರೆ. ತಮ್ಮ ದೂರದೃಷ್ಟಿಯಿಂದಾಗಿ ಕೆಲಸ ಮಾಡಿದ್ದಾರೆ. ಅನೇಕ ಬಾರಿ ಇದನ್ನು ಮಾಡಿ ತೋರಿಸಿದ್ದಾರೆ. ಪಕ್ಷದ ರಾಜಕೀಯ ಬೆಳವಣಿಗೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಗತ್ಯ ಬಿದ್ದಾಗಲೆಲ್ಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರು ಹಿಂದೆ ಬಿದ್ದಿಲ್ಲ ಎಂದು ಅವರು ತಿಳಿಸಿದರು.
ಖರ್ಗೆ ನೆಲಮೂಲದ ನಾಯಕ- ಸೋನಿಯಾ ಗಾಂಧಿ
ನನಗೆ ತುಂಬ ಸಂತೋಷವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ನಿಮ್ಮ ವಿವೇಕದಿಂದ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೀರಿ. ಖರ್ಗೆ ಅವರು ತಳಸ್ಪರ್ಶಿ, ನೆಲಮೂಲದ ನಾಯಕರಾಗಿದ್ದಾರೆ. ಸಾಧಾರಣ ಕಾರ್ಯಕರ್ತರಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷಕ್ಕೆ ಪ್ರೇರಣೆ ಸಿಗಲಿದೆ, ಸಂದೇಶ ರವಾನೆಯಾಗಲಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಸೋನಿಯಾ ಗಾಂಧಿ ಅವರು ಇದೇ ವೇಳೆ ಹೇಳಿದರು.
ನನಗೆ ಇಷ್ಟು ದಿನ ಪ್ರೀತಿ, ಗೌರವವಗಳನ್ನು ನೀವು ನೀಡಿದ್ದೀರಿ. ಇದು ನನಗೆ ಗೌರವದ ವಿಷಯವಾಗಿದೆ. ನನ್ನ ಕೊನೆಯ ಉಸಿರು ಇರೋವರೆಗೆ ಕಾಪಿಟ್ಟುಕೊಳ್ಳುತ್ತೇನೆ. ನನ್ನನ್ನು ನಂಬಿ ಬಹುದೊಡ್ಡ ಜವಾಬ್ದಾರಿಯನ್ನು ಈ ಹಿಂದೆ ನೀಡಿದ್ದೀರಿ. ಅದನ್ನು ನಿರ್ವಹಿಸಿದ್ದೇನೆ. ಆ ಜವಾಬ್ದಾರಿಯಿಂದ ನಾನೀಗ ಮುಕ್ತನಾಗಿದ್ದೇನೆ. ಈ ಸಂದರ್ಭವನ್ನು ಬಳಸಿಕೊಂಡು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ.
ಪರಿವರ್ತನೆ ಜಗದ ನಿಯಮ. ನಮ್ಮ ಬದುಕಿನಲ್ಲಿ ಪರಿವರ್ತನೆ ಇದೆ. ಹಾಗಾಗಿಯೇ ಇಂದು ಪಕ್ಷವೂ ಪರಿವರ್ತನೆಯ ಹಾದಿಯಲ್ಲಿದೆ. ಇಂದು ನಮ್ಮ ಪಕ್ಷಕ್ಕೆ ಸವಾಲುಗಳಿವೆ. ಪ್ರಜಾತಂತ್ರ ಅಪಮೌಲ್ಯವಾಗುತ್ತಿದೆ. ನಾವು ಇದೆನ್ನೆಲ್ಲ ಎದುರಿಸಬೇಕಾಗಿದೆ. ಈ ಹಿಂದೆಯೂ ಪಕ್ಷವು ಅನೇಕ ಸೋಲುಗಳನ್ನ ಕಂಡಿದೆ. ಏಳು ಬೀಳುಗಳನ್ನು ಕಂಡಿದೆ. ಆ ಎಲ್ಲ ಘಟ್ಟಗಳನ್ನು ಮೀರಿದೆ. ಈಗಲೂ ನಾವೆಲ್ಲ ಒಂದಾಗಿ ಎದುರಾಗಿರುವ ಎಲ್ಲ ಸವಾಲುಗಳನ್ನು ಎದುರಿಸೋಣ ಎಂದು ಹೇಳಿದರು.
ಇದನ್ನೂ ಓದಿ | ವಿಸ್ತಾರ ವಿಶ್ಲೇಷಣೆ | ಮೂರನೇ ಶಕ್ತಿಕೇಂದ್ರ ಆಗಲಿದ್ದಾರ ಮಲ್ಲಿಕಾರ್ಜುನ ಖರ್ಗೆ?: ಯಾವ ಬಣಕ್ಕೆ ಲಾಭ, ಯಾರಿಗೆ ನಷ್ಟ?