Site icon Vistara News

Congress President | ಕಾಂಗ್ರೆಸ್ ಅಧ್ಯಕ್ಷರಾಗಿ ನಾಳೆ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

Mallikarjun Kharge held a press conference in Mangaluru

ನವ ದೆಹಲಿ: ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನಾಳೆ ಬುಧವಾರ (ಅಕ್ಟೋಬರ್ 26) ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೂ ಮೊದಲು ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕರ್ನಾಟಕದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಸಿ ಸೇರಿದಂತೆ ಹಲವು ನಾಯಕರು ಸಾಕ್ಷಿಯಾಗಲಿದ್ದಾರೆ. ಅಕ್ಟೋಬರ್ 17ರಂದು ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು 7897 ಮತಗಳನ್ನು ಪಡೆದು ಗೆದ್ದಿದ್ದರೆ, ಅವರ ಸ್ಪರ್ಧಿ ಶಶಿ ತರೂರ್ ಅವರ 1072 ಮತಗಳನ್ನು ಪಡೆಯಲಷ್ಟೇ ಶಕ್ಯರಾಗಿದ್ದರು.

ಕಳೆದ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಮನೆತನದ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗುತ್ತಿದ್ದಾರೆ. ಹಾಗೆಯೇ, ಕಾಂಗ್ರೆಸ್ ಅಧ್ಯಕ್ಷರಾಗುತ್ತಿರುವ ಕರ್ನಾಟಕದ ಎರಡನೇ ವ್ಯಕ್ತಿಯಾಗಿದ್ದಾರೆ ಮಲ್ಲಿಕಾರ್ಜುನ ಖರ್ಗೆ ಅವರು. ಈ ಹಿಂದೆ ಎಸ್ ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ಎಐಸಿಸಿ ಅಧ್ಯಕ್ಷ ಹುದ್ದೆಗೆ ಅಕ್ಟೋಬರ್ 17ರಂದು ನಡೆದ ಚುನಾವಣೆಯಲ್ಲಿ ಶೇ.96ರಷ್ಟು ಮತದಾನವಾಗಿತ್ತು. ಮತ ಚಲಾಯಿಸಲು ಅರ್ಹರಾದವರ ಪೈಕಿ 9500 ಕಾಂಗ್ರೆಸ್ ಮತದಾರರು ಚಲಾಯಿಸಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಚುನಾವಣೆಗೆ ಮುಂಚೆಯೇ ಮಲ್ಲಿಕಾರ್ಜುನ ಖರ್ಗೆ ಗೆಲ್ಲಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿತ್ತು. ನಿರೀಕ್ಷೆಯಂತೆ ಖರ್ಗೆ ಅವರು ಗೆಲುವು ಸಾಧಿಸಿದ್ದರು.

ಇದನ್ನೂ ಓದಿ | Kharge Congress President | ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಗೆಲುವು

Exit mobile version