Site icon Vistara News

Mallikarjun Kharge: ರೈಲ್ವೆ ಸಚಿವ ವೈಷ್ಣವ್‌ಗೆ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ, ಏನು ಬೇಡಿಕೆ ಇಟ್ಟರು?

Mallikarjun Kharge wrote letter to Railway minister Ashwini Vaishnav for additional train

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (ashwini vaishnaw) ಅವರಿಗೆ ಪತ್ರ ಬರೆದು, ಹೆಚ್ಚಿನ ರೈಲುಗಳನ್ನು (Rail) ಓಡಿಸಲು ಮನವಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ್ (Bidar) ಮತ್ತು ಕಲಬುರಗಿಯಿಂದ (Kalaburagi) ಬೆಂಗಳೂರಿಗೆ (Bengaluru) ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ವಿನಂತಿಸಿಕೊಂಡಿದ್ದಾರೆ. ಪ್ರಯಾಣಿಕರ ಸಂಖ್ಯೆಯ ಹೆಚ್ಚಳವಾಗಿರುವುದರಿಂದ ಈ ಎರಡೂ ನಗರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಬೀದರ್, ಕಲಬುರಗಿಯಿಂದ ಬೆಂಗಳೂರಿಗೆ ಈಗ ಚಾಲ್ತಿಯಲ್ಲಿರುವ ರೈಲುಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದ ಸಾಕಷ್ಟು ರಶ್ ಉಂಟಾಗುತ್ತಿದೆ. ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ವಿಶೇಷವಾಗಿ ಮೀಸಲು ರಹಿತ ಬೋಗಿಗಳಲ್ಲಿ ಭಾರೀ ಸಮಸ್ಯೆಯಾಗುತ್ತಿದ್ದು, ಈ ಬೋಗಿಗಳು ತುಂಬಿರುತ್ತವೆ. ಕಲಬುರಗಿಯಿಂದ ಬೆಂಗಳೂರಿಗೆ ನಿತ್ಯ 6 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ. ಹಾಗಾಗಿ, ಬಹಳಷ್ಟು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಗಳಿಗೆ ನುಗ್ಗುತ್ತಿದ್ದಾರೆ. ಈ ಬೋಗಿಗಳಲ್ಲಿ ನೆಲದ ಮೇಲೆ ಮಲಗಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಜನರಲ್ ಬೋಗಿಗಳಲ್ಲಿ ಕಾಲಿಡಲು ಆಗುವುದಿಲ್ಲ. ಅಷ್ಟು ರಶ್ ಇರುತ್ತದೆ ಎಂಬ ಸಂಗತಿಯನ್ನು ತಮ್ಮ(ರೈಲು ಸಚಿವ) ಗಮನಕ್ಕೆ ತರಲು ಬಯಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸಲು ರೈಲು ಸಚಿವರು ಮಧ್ಯ ಪ್ರವೇಶಿಸಿ, ಮಧ್ಯಂತರ ಪರಿಹಾರವಾಗಿ ಕೂಡಲೇ ಕಲಬುರಗಿಯಿಂದ ಎರಡು ಮತ್ತು ಬೀದರ್‌ನಿಂದ ಒಂದ ಹೆಚ್ಚುವರಿ ರೈಲು ಓಡಿಸುವ ಪ್ರಯತ್ನ ಮಾಡಬೇಕು. ವಾಸ್ತವದಲ್ಲಿ ಬೀದರ್ ಮತ್ತು ಬೆಂಗಳೂರು ನಡುವೆ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ. ಈ ಎರಡು ನಗರಗಳಿಗೆ ಕಾಯ್ದಿರಿಸಿದ ಕೋಟಾ ಅಗತ್ಯಕ್ಕಿಂತ ತುಂಬಾ ಕಡಿಮೆಯಾಗಿದೆ. ಈ ಪರಿಸ್ಥಿತಿಯಲ್ಲಿ ಕಲಬುರಗಿಯಿಂದ ಎರಡು ಹೊಸ ರೈಲುಗಳು ಮತ್ತು ಬೀದರ್‌ನಿಂದ ಬೆಂಗಳೂರಿಗೆ ಇನ್ನೂ ಒಂದು ರೈಲು ತುರ್ತಾಗಿ ಓಡಿಸುವ ಅವಶ್ಯಕತೆಯಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: Karnataka Election 2023: ಪ್ರಣಾಳಿಕೆ ಸುಟ್ಟು ಜನರಿಗೆ ಅವಮಾನ ಮಾಡಿದ್ದಾರೆ ಈಶ್ವರಪ್ಪ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಕಾಂಗ್ರೆಸ್ ಅಧ್ಯಕ್ಷ ಮಲ್ಲಕಾರ್ಜುನ ಖರ್ಗೆ ಅವರ ಪತ್ರಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿಕ್ರಿಯಿಸಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಪ್ರಸ್ತುತ, ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ಉದ್ಯಾನ್ ಎಕ್ಸ್‌ಪ್ರೆಸ್, ಕರ್ನಾಟಕ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್, ಸೋಲಾಪುರ್ ಹಾಸನ್ ಎಕ್ಸ್‌ಪ್ರೆಸ್ ಮತ್ತು ಕೊಯಮತ್ತೂರು ಎಕ್ಸ್‌ಪ್ರೆಸ್, ಟುಟಿಕಾರಿನ್ ವಿವೇಕ್ ಎಕ್ಸ್‌ಪ್ರೆಸ್ ರೈಲು ನಿತ್ಯ ಸಂಚರಿಸುತ್ತಿವೆ. ಇದಲ್ಲದೇ ಕೆಲವು ರೈಲು, ವಾರಕ್ಕೊಮ್ಮೆ ಕಲಬುರಗಿ-ಬೆಂಗಳೂರು ಮಧ್ಯೆ ಸಂಚರಿಸುತ್ತೇವೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version