Site icon Vistara News

ಪಕ್ಷಾಂತರಿಗಳಿಗೆ 5 ವರ್ಷ ಚುನಾವಣೆ ನಿಷೇಧಿಸಬೇಕು ಎಂದ ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮಹಾರಾಷ್ಟ್ರದಲ್ಲಿ ಕುತಂತ್ರದಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಈ ಹಿಂದೆ ಅನೇಕ ರಾಜ್ಯಗಳಲ್ಲಿ ಇದೇ ರೀತಿ ಅಧಿಕಾರ ಪಡೆದಿದ್ದಾರೆ. ಜನಬೆಂಬಲ ಇಲ್ಲದೇ ಇದ್ದಾಗ ಹಣ ಬಲದಿಂದ ಸರ್ಕಾರ ರಚನೆ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಮೋದಿ ಅವರಿಗೆ ಅಧಿಕಾರದ ತೃಪ್ತಿ ಇಲ್ಲ. ಹೀಗಾಗಿ ಸ್ಥಳೀಯ ಸರ್ಕಾರಗಳನ್ನು ಒಡೆದು ಅಧಿಕಾರ ಪಡೆಯುತ್ತಿದ್ದಾರೆ. ಈ ರೀತಿಯ ಕೆಲಸವನ್ನು ಪ್ರಧಾನಿ ಮಾಡಬಾರದು. ಇದರಿಂದ ಮುಂದೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಬೀಳುತ್ತದೆ. ಪಕ್ಷಾಂತರ ನಿಷೇಧ ಕಾನೂನಿಗೆ ಬದಲಾವಣೆ ತರಬೇಕಾಗಿದ್ದು, ಪಕ್ಷಾಂತರ ಮಾಡುವವರಿಗೆ ಮುಂದಿನ ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿಯಮ ರೂಪಿಸಬೇಕು. ಇದನ್ನು ನಾನು ಸಂಸತ್‌ನಲ್ಲೂ ಪ್ರಸ್ತಾಪ ಮಾಡುತ್ತೇನೆ ಎಂದರು.

ಇದನ್ನೂ ಓದಿ | ಶಿಂಧೆಗೆ ಮಹಾ ಸಿಎಂ ಕುರ್ಚಿ ಬಿಟ್ಟುಕೊಟ್ಟರೂ, ಪ್ರಮುಖ ಖಾತೆಗಳು ಬಿಜೆಪಿ ಕೈಗೆ ಸಂಭವ

ಶಿವಸೇನಾ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಮೂರೂ ಪಕ್ಷಗಳು ಸೇರಿ ಮಹಾ ವಿಕಾಸ ಅಘಾಡಿ ಸರ್ಕಾರ ರಚಿಸಲಾಗಿತ್ತು. ಸಿಎಂ ಮಾಡುತ್ತೇವೆ ಎಂದಿದ್ದರಿಂದ ಶಿವಸೇನಾ ಬಂಡಾಯ ಶಾಸಕರು ಓಡಿ ಹೋಗಿದ್ದಾರೆ. ಎಲ್ಲವನ್ನೂ ಒಳ ಸಂಚಿನಿಂದಲೇ ಮಾಡಿದ್ದು, ಬಿಜೆಪಿಯವರ ಬಳಿ ಹೋದ ಮೇಲೆ ಇದೀಗ ಎಲ್ಲವು ಸರಿಯಾಗುತ್ತದಾ ಎಂದು ಪ್ರಶ್ನಿಸಿದರು. ರಾಜ್ಯ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸಿಎಂ ಯಾರಾಗಬೇಕು, ಮಂತ್ರಿ ಯಾರನ್ನು ಮಾಡಬೇಕು ಎನ್ನುವ ಗುರಿ ನಮಗಿಲ್ಲ, ಮೊದಲು ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರಬೇಕು. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸುವುದು ಸರಿಯಲ್ಲ ಎಂದು ನುಡಿದರು.

ಉದಯಪುರ ಟೇಲರ್ ಕನ್ಹಯ್ಯಲಾಲ್ ಹತ್ಯೆ ಪ್ರಕರಣದ ಬಗ್ಗೆ ಸ್ಪಂದಿಸಿ, ರಾಜಸ್ಥಾನದ ಘಟನೆಯನ್ನು ಎಲ್ಲರೂ ಖಂಡಿಸಿದ್ದಾರೆ. ಸಂವಿಧಾನಬಾಹಿರ ಕೆಲಸ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲೇಬೇಕು. ಘಟನೆ ನಡೆದ ನಂತರ ಆರೋಪಿಗಳನ್ನು ಬಂಧಿಸಲಾಗಿದ್ದು, ಅಲ್ಲಿನ ಸಿಎಂ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಮಾಡಬೇಕು, ಸರ್ಕಾರ‌ ವಜಾ ಮಾಡಬೇಕು ಎನ್ನುವುದು ಸರಿಯಲ್ಲ. ಹಾಗಾದರೆ ಉತ್ತರ ಪ್ರದೇಶದಲ್ಲಿ ಇಂತಹ ಅನೇಕ ಘಟನೆಗಳು ನಡೆದಿವೆ, ಅಲ್ಲಿನ ಸರ್ಕಾರವನ್ನು ವಜಾ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ತಪ್ಪು ಮಾಡಿದವರಿಗೆ ಶಿಕ್ಷೆ ನೀಡಬೇಕೆ ವಿನಃ ರಾಜಕೀಯ ಮಾಡಬಾರದು. ಎಲ್ಲದರಲ್ಲೂ ರಾಜಕೀಯ ಮಾಡಿದ್ದಕ್ಕೆ ದೇಶ ಹಾಳಾಗಿ ಹೋಗುತ್ತಿದೆ. ಪ್ರದಾನಿ ಮೋದಿ ಅವರಿಗೆ ಶಾಂತಿಯ ಮಾತುಗಳನ್ನಾಡಿ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ ಅವರು ಬಾಯಿ ತೆಗೆಯುತ್ತಿಲ್ಲ. ಜರ್ಮನಿಯಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡಿದ್ದಾರೆ. ನಾವು ಬೇರೆ ಕಡೆ ಮಾತನಾಡಿದರೆ ಬೇರೆ ದೇಶದಲ್ಲಿ ನಮ್ಮ ದೇಶದ ಗೌರವ ಹಾಳು ಮಾಡುತ್ತಿದ್ದಾರೆಂದು ಬಿಜೆಪಿಯವರೇ ಬೊಬ್ಬೆ ಹಾಕುತ್ತಾರೆ ಎಂದು ಕುಟುಕಿದರು.

ಇದನ್ನೂ ಓದಿ | ಕರ್ನಾಟಕದ ಮತದಾರರು ಪ್ರಬುದ್ಧರು, ಯುಪಿ ಮತದಾರರಂತಲ್ಲ: ಪ್ರಿಯಾಂಕ್ ಖರ್ಗೆ

Exit mobile version