Site icon Vistara News

Tunga Arati | ಎಲೆ ಚುಕ್ಕೆ ರೋಗ ನಿಯಂತ್ರಣಕ್ಕಾಗಿ ತುಂಗಾ ಆರತಿ ಮೊರೆಹೋದ ಮಲೆನಾಡಿಗರು

tunga arati theerthahalli 6

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆಗೆ ಹಲವು ರೋಗಗಳೂ ಭಾದಿಸುತ್ತಿವೆ. ಈ ಮಧ್ಯೆ ಎಲೆ ಚುಕ್ಕೆ ರೋಗ ಬಹಳವಾಗಿಯೇ ಕಾಡುತ್ತಿದ್ದು, ಏನೇ ಮಾಡಿದರೂ ಪರಿಹಾರ ಸಿಗುತ್ತಿಲ್ಲ. ಕೃಷಿ ತಜ್ಞರ ಸಹಿತ ಸಾಕಷ್ಟು ಮಂದಿಯ ಸಲಹೆ ಪಡೆದು ಏನೇ ಔಷಧ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಈಗ ಮಲೆನಾಡಿಗರು ದೇವರ ಮೊರೆಹೋಗಿದ್ದಾರೆ. ಇದಕ್ಕಾಗಿ ತುಂಗಾ ಆರತಿ (Tunga Arati) ನೆರವೇರಿಸಿದ್ದಾರೆ.

Tunga Arati

ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನದಿ ದಡದಲ್ಲಿ ಸೋಮವಾರ (ನ.೧೪) ಸಂಜೆ ಹೊತ್ತಿಗೆ ತುಂಗಾ ಆರತಿಯನ್ನು ಆಯೋಜಿಸಲಾಗಿತ್ತು. ಸಾವಿರಾರು ಮಂದಿ ರೈತರು ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಅರ್ಚಕರು ತುಂಗಾ ಆರತಿಯನ್ನು ನೆರವೇರಿಸಿದರು.

Tunga Arati

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ್ ಗೌಡ, ತಹಸೀಲ್ದಾರ್ ಅಮೃತ್ ಅತ್ರೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ ಸೇರಿ ನೂರಾರು ಜನರು ಹಾಜರಿದ್ದರು.

ಏಕೆ ಈ ಆಚರಣೆ?
ಆರತ್ರಿಕ ಎಂಬ ಸಂಸ್ಕೃತ ಪದದಿಂದ ಆರತಿ ಎಂಬುದಾಗಿ ಪದ ಬಳಕೆ ಬಂದಿದ್ದು, ಆರತಿ ಎಂದರೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದು ಎಂದು ಅರ್ಥ. ದೇವರಿಂದ ಸೂರ್ಯನ ಬೆಳಕು, ಜೀವದ ಬೆಳಕು ಮತ್ತು ಆಶೀರ್ವಾದವೆಂಬ ಬೆಳಕು ಸಿಗುತ್ತದೆ, ಅಂತಹ ದೇವರಿಗೆ ಭಕ್ತಾದಿಗಳು ತಮ್ಮ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯನ್ನು ದೇವರಿಗೆ ಸಲ್ಲಿಸುವ ಒಂದು ಆಚರಣೆಯೇ ಆರತಿ. ಪಂಚಭೂತಗಳಾದ ಜಲ, ವಾಯು, ಅಗ್ನಿ, ಭೂಮಿ ಹಾಗೂ ಆಕಾಶವು ಬೇರೆ ಬೇರೆ ರೀತಿಯಲ್ಲಿ ಪೂಜಿಸಲ್ಪಡುತ್ತದೆ. ಹಾಗೆಯೇ ದೇವಿ ಸ್ವರೂಪಳಾದ ನದಿಗೆ ಆರತಿ ಮಾಡುವುದು ಒಂದು ಭಕ್ತಿಪೂರ್ವಕ ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ಮಲೆನಾಡಿಗರು ಈಗ ತುಂಗಾ ಆರತಿಯ ಮೂಲಕ ರೋಗ ನಿಯಂತ್ರಣಕ್ಕೆ ಮೊರೆ ಇಟ್ಟಿದ್ದಾರೆ.

ಇದನ್ನೂ ಓದಿ | ಶಿವಮೊಗ್ಗ | 165 ಎಸೆತಗಳಲ್ಲಿ 407 ರನ್‌ ಬಾರಿಸಿ ದಾಖಲೆ ಬರೆದ ಮಲೆನಾಡಿನ ಪೋರ ತನ್ಮಯ್ ಮಂಜುನಾಥ್

Exit mobile version