ಕೊಪ್ಪಳ: ಈಗ ರಾಜ್ಯಾದ್ಯಂತ ಕಾಂಗ್ರೆಸ್ ಗ್ಯಾರಂಟಿಯದ್ದೇ ಸುದ್ದಿ. 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಐದು ಗ್ಯಾರಂಟಿಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ. ಈ ವೇಳೆ ಜನರೂ ಸಹ ಆ ನಿಟ್ಟಿನಲ್ಲಿ ಬೇಡಿಕೆ ಇಟ್ಟಿದ್ದು, ಕೆಲವು ಕಡೆ ವಿದ್ಯುತ್ ಬಿಲ್ ಕಟ್ಟಲು ನಿರಾಕರಣೆ ಮಾಡುತ್ತಿದ್ದರೆ, ಇನ್ನು ಕೆಲವು ಕಡೆ ಮಹಿಳೆಯರು ಬಸ್ ಟಿಕೆಟ್ ಪಡೆಯುವುದಿಲ್ಲ ಎಂದು ತಗಾದೆ ತೆಗೆಯುತ್ತಿದ್ದಾರೆ. ಈ ನಡುವೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಹಲವು ತಿಂಗಳಿನಿಂದ ಕಟ್ಟದ ಬಾಕಿ ವಿದ್ಯುತ್ ಬಿಲ್ (Electricity Bill) ಅನ್ನು ಪಾವತಿ ಮಾಡುವಂತೆ ಕೇಳಿದ್ದಕ್ಕೆ ಜೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಲ್ಲದೆ, ಚಪ್ಪಲಿಯಿಂದಲೂ ಹೊಡೆದಿದ್ದಾನೆ.
ಜೆಸ್ಕಾಂ ಸಿಬ್ಬಂದಿ ಮಂಜುನಾಥ್ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ. ಕೂಕನಪಳ್ಳಿ ಗ್ರಾಮದ ಚಂದ್ರಶೇಖರಯ್ಯ ಹಿರೇಮಠ ಎಂಬಾತ ಹಲ್ಲೆ ನಡೆಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಚಂದ್ರಶೇಖರಯ್ಯ ಹಿರೇಮಠ ಎಂಬಾತ ಸುಮಾರು 9,990 ರೂಪಾಯಿಯಷ್ಟು ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ಬಳಿ ಬಾಕಿ ಬಿಲ್ ಕಟ್ಟುವಂತೆ ಹೇಳಿ ಹೇಳಿ ಸಾಕಾಗಿ ಕೊನೆಗೆ ಮನೆಯಲ್ಲಿನ ವಿದ್ಯುತ್ ಸಂಪರ್ಕವನ್ನು ಮಂಗಳವಾರ ಕಡಿತಗೊಳಿಸಿದರು. ಇದರಿಂದ ರೊಚ್ಚಿಗೆದ್ದ ಚಂದ್ರಶೇಖರಯ್ಯ ಹಿರೇಮಠ, ಸಿಬ್ಬಂದಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಲ್ಲದೆ, ಹಲ್ಲೆಯನ್ನೂ ಮಾಡಿದ್ದಾನೆ. ಘಟನೆಯ ಕುರಿತು ಜೆಸ್ಕಾಂ ಸಿಬ್ಬಂದಿಯಿಂದ ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವಿಡಿಯೊ ಈ ಟ್ವೀಟ್‌ನಲ್ಲಿದೆ
ಚಿತ್ರದುರ್ಗದಲ್ಲೂ ಬಿಲ್ ಕಟ್ಟಲು ತಗಾದೆ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ. ಬಿಲ್ ನೀಡದಂತೆ ಬೆಸ್ಕಾಂ ಮೀಟರ್ ರೀಡರ್‌ಗೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದ್ಯುತ್ ಬಿಲ್ ಕಟ್ಟಲು ಒಪ್ಪದ ಗ್ರಾಮಸ್ಥರು
ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡದಂತೆ ಗ್ರಾಮಸ್ಥರ ಕಿಡಿಕಾರಿದ್ದು, ಮೀಟರ್ ರೀಡರ್‌ಗೆ ಮನೆಯೊಳಗೇ ಬಿಟ್ಟುಕೊಳ್ಳುವುದಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಆಗ ಮೀಟರ್ ರೀಡರ್ ಮಾತನಾಡಿ, ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ. ಹಳೇ ಬಿಲ್ ಕೊಡಬೇಕಾಗುತ್ತದೆ. ಅದಕ್ಕೆ ಜನ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿದೆಯಲ್ಲ, ಅದನ್ನೇ ನಿಮಗೆ ಕೊಡೋಣವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆದುಕೊಂಡು ಬಾ ಹೋಗು ಎಂದು ಜನರು ಕಿಡಿಕಾರಿದ್ದಾರೆ.