Site icon Vistara News

ಡೆಂಕಣಿಕೋಟೆಯಲ್ಲಿ ಶ್ವಾನವನ್ನು ಗುಂಡಿಕ್ಕಿ ಕೊಂದ ಪಾಪಿ; ವ್ಯಕ್ತಿ ಮೇಲೆ ಕರಡಿ ದಾಳಿ, ವಾಹನ ಡಿಕ್ಕಿಯಾಗಿ ಚಿರತೆ ಸಾವು

ತಮಿಳುನಾಡು/ರಾಮನಗರ/ಚಿಕ್ಕಬಳ್ಳಾಪುರ: ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಕುತೈಲ್ ಪೈಲ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ನಾಯಿಗೆ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ.

ಶಿವಪ್ಪ ಎಂಬುವವರಿಗೆ ಸೇರಿದ ಶ್ವಾನವನ್ನು ಕ್ಷುಲ್ಲಕ ಕಾರಣಕ್ಕೆ ವೆಂಕಟೇಶ್ (50) ಎಂಬಾತ ಅನಧಿಕೃತ ಕಂಟ್ರಿ ಬಂದೂಕಿನಿಂದ ಗುಂಡು ಹೊಡೆದು ಸಾಯಿಸಿದ್ದಾನೆ. ಈತ ಬಂದೂಕಿನಿಂದ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಶ್ವಾನ ಮಾಲೀಕ ಶಿವಪ್ಪ ಡೆಂಕಣಿಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಶ್ವಾನ ಕೊಂದ ಆರೋಪಿ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದು, ಕಂಟ್ರಿ ಬಂದೂಕನ್ನು ವಶಪಡಿಸಿಕೊಂಡಿಸಿದ್ದಾರೆ.

ವ್ಯಕ್ತಿ ಮೇಲೆ ಎರಗಿದ ಕರಡಿ
ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ಕಸ ಸುರಿಯಲು ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ದಾಳಿಗೆ ಗಾಯಗೊಂಡ ಗ್ರಾಮದ ಹನುಮಂತಯ್ಯ (62) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೈ, ಕಾಲು‌ ಮತ್ತು ಹೊಟ್ಟೆಯ ಭಾಗಕ್ಕೆ ಗಾಯವಾಗಿದ್ದು, ರಾಮನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ
ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಮುದಗಾನಕುಂಟೆ ಕ್ರಾಸ್ ಬಳಿ ರಸ್ತೆ ದಾಟುತ್ತಿದ್ದ ಚಿರತೆಯೊಂದಕ್ಕೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಚಿರತೆ ಸ್ಥಳದಲ್ಲಿಯೇ ಮೃತಪಟ್ಟಿದೆ. ಡಿಕ್ಕಿ ರಭಸಕ್ಕೆ ತೀವ್ರ ಗಾಯಗೊಂಡು ರಸ್ತೆ ಪಕ್ಕ ಬಿದ್ದಿದ್ದ ಚಿರತೆ ಕೆಲವೇ ಕ್ಷಣದಲ್ಲಿ ಅಸುನೀಗಿದೆ. ಸ್ಥಳಕ್ಕೆ ಗೌರಿಬಿದನೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ | Shivamogga violence| ಎಲ್ಲಾ ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ, ಆದರೆ, ನಮಗೆ ರಕ್ಷಣೆ ಇಲ್ಲ: ಹರ್ಷ ಸೋದರಿ ಆಕ್ರೋಶ

Exit mobile version