ಕೋಲಾರ: ಪತ್ನಿಯೊಂದಿಗೆ ಸದಾ ಜಗಳವಾಡುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಪ್ರಶ್ನಿಸಿದ ಹೆಂಡತಿಯ ಸಂಬಂಧಿಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಭೀಕರ ಘಟನೆಯೊಂದು ಕೋಲಾರ ನಗರದಲ್ಲಿ ನಡೆದಿದೆ. ಅದರ ಜತೆಗೆ ಇನ್ನೊಬ್ಬ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ.
ಬಂಬೂ ಬಜಾರ್ ನಿವಾಸಿಯಾಗಿರುವ ಫಯಾಸ್ ಎಂಬಾತನೇ ಕೊಲೆಗಾರ. ಆವನಿಗೆ ಮುಮ್ತಾಜ್ ಎಂಬಾಕೆಯ ಜತೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿತ್ತು. ಗಂಡ-ಹೆಂಡತಿ ನಡುವೆ ನಿರಂತರವಾಗಿ ಜಗಳಗಳು ನಡೆಯುತ್ತಿದ್ದವು. ಇತ್ತೀಚೆಗಂತೂ ಕುಡಿದು ಬಂದು ಗಲಾಟೆ ಮಾಡುವುದು ಜಾಸ್ತಿಯಾಗಿತ್ತು. ಗಂಡನ ನಿರಂತರವಾದ ಹಿಂಸೆ, ಕಿರುಕುಳವನ್ನು ಸಹಿಸಲಾಗದೆ ಮುಮ್ತಾಜ್ ಮೂರು ತಿಂಗಳ ಹಿಂದೆ ತವರು ಮನೆ ಸೇರಿದ್ದಳು.
ಈ ನಡುವೆ, ಮುಮ್ತಾಜ್ ತಾನು ಎದುರಿಸುತ್ತಿರುವ ಸ್ಥಿತಿಯನ್ನು ಮನೆಯಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಫಯಾಜ್‌ನ್ನು ಭೇಟಿ ಮಾಡಿ ಮಾತನಾಡಲು ಕುಟುಂಬಿಕರು ನಿರ್ಧರಿಸಿದ್ದರು. ಹಾಗೆ ಮಾತನಾಡಲು ಹೊರಟವರು ಕೋಲಾರದ ಶಾಂತಿನಗರ ನಿವಾಸಿಯಾಗಿರುವ ತಾಜ್ ಮತ್ತು ನ್ಯಾಮೊದ್ದಿ ಮೊಹಲ್ಲಾ ನಿವಾಸಿಯಾಗಿರುವ ಜಫ್ರುಲ್ಲಾ.
ತಾಜ್ ಮುಮ್ತಾಜ್ ಅವರಿಗೆ ಹತ್ತಿರದ ಸಂಬಂಧಿ. ಅಂದರೆ ಮುಮ್ತಾಜ್‌ಗೆ ಅವನು ಮೈದುನ. ತಾಜ್ ಮತ್ತು ಜಫ್ರುಲ್ಲಾ ಫಯಾಜ್‌ನ ಜತೆ ಮಾತನಾಡಲೆಂದು ಕೋಲಾರದ ಬಂಬೂ ಬಜಾರ್‌ನಲ್ಲಿರುವ ಮನೆಗೆ ಬಂದಿದ್ದಾರೆ. ಹಾಗೆ ಬಂದವರ ಜತೆಗೂ ಫಯಾಜ್ ಜಗಳಕ್ಕೆ ಇಳಿದಿದ್ದು, ಅಂತಿಮವಾಗಿ ಅವರಿಬ್ಬರಿಗೂ ಚೂರಿಯಿಂದ ಇರಿದಿದ್ದಾನೆ. ತಾಜ್ ಮೃತಪಟ್ಟರೆ ಜಫ್ರುಲ್ಲಾ ಗಾಯಗೊಂಡಿದ್ದಾನೆ. ನಿಜವೆಂದರೆ, ಇವರಿಬ್ಬರೂ ಗಲ್ ಪೇಟೆ ನಿವಾಸಿಯಾಗಿರುವ ಫಯಾಸ್‌ಗೂ ಸಂಬಂಧಿಕರೇ ಆಗಿದ್ದಾರೆ. ಆರೋಪಿ ಫಯಾಸ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆಯಲ್ಲಿ ತಾಜ್ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟರು. ಜಫ್ರುಲ್ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಗಲ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಯಾದಿ ಕಲಹ ; ಕಾರು ನಿಲ್ಲಿಸುವ ಗಲಾಟೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮನೆ ಮುಂದೆ ಕಾರು ನಿಲ್ಲಿಸುವ ವಿಚಾರದಲ್ಲಿ ಹುಟ್ಟಿಕೊಂಡ ಸಣ್ಣ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ದಾಯಾದಿಗಳ ನಡುವಿನ ಹಿಂದಿನ ವೈಷಮ್ಯ ಸಣ್ಣ ಕಿಡಿಯಾಗಿ, ಬೂದಿ ಮುಚ್ಚಿದ ಕೆಂಡವಾಗಿದ್ದದ್ದು ಈಗ ರಕ್ತಪಾತಕ್ಕೆ ಕಾರಣವಾಗಿದೆ (Murder case) ಎಂದು ಹೇಳಲಾಗಿದೆ.
ಹೊಸಕೋಟೆ ತಾಲೂಕಿನ ಮೇಡಿ ಮಲ್ಲಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಇಸ್ಮಾಯಿಲ್ ಖಾನ್ ( 26 ) ಅವರನ್ನು ಕೊಂದು ಹಾಕಲಾಗಿದೆ. ಗ್ರಾಮದ ನಿವಾಸಿಗಳೇ ಆದ ಸೈಯದ್ ಹಿದಾಯತ್ ಶಾ, ಸೈಯದ್ ಅಜಿಮ್ ಶಾ, ಮತ್ತು ಸಯ್ಯದ್ ಅಖಿಲ್ ಶಾ ಅವರೇ ಚೂರಿಯಿಂದ ಇರಿದು ಕೊಲೆ ಮಾಡಿದವರು.
ಕೊಲೆಯಾದವರು ಮತ್ತು ಕೊಲೆ ಮಾಡಿದವರು ದಾಯಾದಿಗಳು. ಹಲವು ಸಮಯದಿಂದ ಇವರ ನಡುವೆ ಆಸ್ತಿ ವಿಚಾರ ಸೇರಿದಂತೆ ನಾನಾ ಕಾರಣಗಳಿಗಾಗಿ ಕಲಹ ನಡೆಯುತ್ತಲೇ ಇತ್ತು. ಈ ನಡುವೆ ಮನೆ ಮುಂದೆ ಕಳೆದ ರಾತ್ರಿ ಕಾರು ನಿಲ್ಲಿಸುವ ವಿಚಾರಕ್ಕೆ ಕಿರಿಕ್ ಶುರುವಾಗಿದೆ.
ಇಸ್ಮಾಯಿಲ್ ಖಾನ್ ಕಾರು ನಿಲ್ಲಿಸಲು ಹೋದಾಗ ಮಾತಿನ ಚಕಮಕಿ ಆರಂಭವಾಗಿ ಅದು ವಿಕೋಪಕ್ಕೆ ತಿರುಗಿತು. ಅಂತಿಮವಾಗಿ ಡ್ರಾಗರ್ ನಿಂದ ಹಲ್ಲೆ ಮಾಡಲಾಯಿತು. ಎದೆ ಮತ್ತು ಮೂತ್ರಪಿಂಡ ಜಾಗಕ್ಕೆ ಇರಿದಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಸಾವು ಸಂಭವಿಸಿದೆ.
ಇಸ್ಮಾಯಿಲ್ ಸತ್ತು ಬೀಳುತ್ತಿದ್ದಂತೆಯೇ ಆತೋಪಿಗಳು ಎಸ್ಕೇಪ್ ಆಗಿದ್ದಾರೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ PM Modi status : ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಮೋದಿ ಫೋಟೊ ಹಾಕಿದ್ದ ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆ