ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ವ್ಯಕ್ತಿಯೊಬ್ಬರು ಶನಿವಾರ (ಜುಲೈ 13) ಮೃತಪಟ್ಟಿದ್ದಾರೆ. ಇದರೊಂದಿಗೆ ಡೆಂಗ್ಯೂಗೆ ದಕ್ಷಿಣ ಕನ್ನಡದಲ್ಲಿ (Dakshina Kannada) ಮೊದಲ ಸಾವು ಉಂಟಾಗಿದೆ. ಪುತ್ತೂರು ತಾಲೂಕು ಪಡ್ನೂರಿನ ಯತೀಶ್ (50) ಮೃತ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ನಿವಾಸಿಯಾದ ಯತೀಶ್ ಅವರಿಗೆ ಜುಲೈ 10ರಂದು ಜ್ವರ ಕಾಣಿಸಿಕೊಂಡಿತು. ವಿಪರೀತ ಜ್ವರದ (Dengue Fever) ಹಿನ್ನೆಲೆಯಲ್ಲಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ (Dengue In Karnataka) ಡೆಂಗ್ಯೂಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಒಂದೇ ದಿನದಲ್ಲಿ 424 ಮಂದಿಗೆ ಡೆಂಗ್ಯೂ
ಕರ್ನಾಟಕದಲ್ಲಿ ದಿನೇದಿನೆ ಡೆಂಗ್ಯೂ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 424 ಮಂದಿಗೆ ಡೆಂಗ್ಯೂ ತಗುಲಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ 9,082 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈಗ 353 ಡೆಂಗ್ಯೂ ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 4 ಮಕ್ಕಳಿಗೆ ಜ್ವರ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದೊಳಗಿನ 154 ಮಕ್ಕಳಲ್ಲಿ ಡೆಂಗ್ಯೂ ದೃಢವಾಗಿದೆ ಎಂದು ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಒಂದು ವರ್ಷದಿಂದ 18 ವರ್ಷದೊಳಗಿನ 168 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಇಲ್ಲಿಯವರೆಗೂ ಒಂದು ವರ್ಷದಿಂದ 18 ವರ್ಷದೊಳಗಿನ 3,203 ಮಂದಿಗೆ ಡೆಂಗ್ಯೂ ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 252 ಜನರಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಇಲ್ಲಿಯವರೆಗೂ 18 ವರ್ಷ ಮೇಲ್ಪಟ್ಟ 5,725 ಜನರಿಗೆ ಜ್ವರ ತಗುಲಿದೆ. ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 202 ಪ್ರಕರಣಗಳು ದೃಢವಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಡೆಂಗ್ಯೂ ನಿಯಂತ್ರಣಕ್ಕಾಗಿ ಕ್ರಮ ತೆಗೆದುಕೊಳ್ಳುವ ಕುರಿತು ಈಗಾಗಲೇ ರಾಜ್ಯದ ತಜ್ಞರು ಸರ್ಕಾರಕ್ಕೆ ಹಲವು ಸಲಹೆ ನೀಡಿದ್ದಾರೆ. “ಡೆಂಗ್ಯೂ ಫಿವರ್ ನಿಯಂತ್ರಣ ಅಂದರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯು ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆ ಬರುತ್ತದೆ. ಡೆಂಗ್ಯು ತಡೆಗಟ್ಟದಿದ್ರೆ ಚಿಕನ್ ಗುನ್ಯ, ಜೀಕಾ ವೈರಸ್ ಬರಬಹುದು. ಕೋವಿಡ್ ಪ್ಯಾಂಡಮಿಕ್ ಅಂದೆವು. ಡೆಂಗ್ಯು ಎಂಡಮಿಕ್ ಆಗಿದೆ. ಎಂಡೆಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು” ಎಂದು ಸಂಸದರೂ ಆಗಿರುವ ಡಾ.ಮಂಜುನಾಥ್ ಹೇಳಿದ್ದಾರೆ.
ಇದನ್ನೂ ಓದಿ: Healthy Food For Dengue: ಈ ಆಹಾರಗಳನ್ನು ತಿನ್ನಿ; ಡೆಂಗ್ಯೂಗೆ ಡೋಂಟ್ ಕೇರ್ ಅನ್ನಿ