ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಉಳ್ಳಾಲ ದರ್ಗಾಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ ಮಕ್ಕಳೊಂದಿಗೆ ನೀರಾಟಕ್ಕಿಳಿದ ವೇಳೆ ಮುಳುಗಿ ಮೃತಪಟ್ಟಿದ್ದು, ಅವರ ಪುತ್ರನನ್ನು ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ.
ಮಳಲಿ ನಿವಾಸಿ ಖಾಲಿದ್ (51) ಸಮುದ್ರ ಪಾಲಾದ ವ್ಯಕ್ತಿ. ಖಾಲಿದ್ ಅವರು ತನ್ನ ಪತ್ನಿ, ಮಗ, ಸಂಬಂಧಿ ಮಕ್ಕಳ ಜತೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದರು. ದರ್ಗಾ ಭೇಟಿ ಬಳಿಕ ಉಳ್ಳಾಲ ಬೀಚ್‌ಗೆ ತೆರಳಿದ್ದರು. ಈ ವೇಳೆ ಮಗನೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದಾಗ ಭಾರಿ ಅಲೆಗಳ ರಭಸಕ್ಕೆ ಖಾಲಿದ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ತಕ್ಷಣ ಸ್ಥಳದಲ್ಲಿದ್ದ ಈಜುಗಾರರು ಖಾಲಿದ್ ಅವರ ಮಗನನ್ನು ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಂಜೆ ವೇಳೆ ಖಾಲಿದ್ ಅವರ ಮೃತದೇಹ ಸಮುದ್ರ ತೀರದಲ್ಲಿ ಸಿಕ್ಕಿದ್ದು, ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.
ರಕ್ಷಣೆಗಿಳಿದವನ ಪರ್ಸ್ ನಾಪತ್ತೆ
ಖಾಲಿದ್ ಮುಳುಗುತ್ತಿದ್ದಂತೆ ಕುಟುಂಬಸ್ಥರು ರಕ್ಷಣೆಗಾಗಿ ಬೊಬ್ಬಿರಿದಿದ್ದು, ಈ ವೇಳೆ ಸಮೀಪದಲ್ಲೇ ಇದ್ದ ಕೋಡಿ ನಿವಾಸಿಗಳಾದ ಜಬ್ಬಾರ್, ಅಶ್ರಫ್, ಇಮ್ತಿಯಾಝ್, ಮಹಮ್ಮದ್ ಎಂಬವರು ಧಾವಿಸಿ ಖಾಲಿದ್ ಅವರ ಪುತ್ರನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಖಾಲಿದ್ ಅವರನ್ನು ಸಮುದ್ರ ದೂರಕ್ಕೆ ಎಳೆದಿದ್ದು, ಹಲವು ಗಂಟೆಗಳ ಕಾರ್ಯಾಚರಣೆ ನಂತರ ಮೃತದೇಹ ಪತ್ತೆಹಚ್ಚಿದ್ದಾರೆ. ಸಮುದ್ರಕ್ಕೆ ಹಾರುವ ಸಂದರ್ಭ ಜಬ್ಬಾರ್ ಅವರು ಪರಿಚಿತರ ಕೈಯಲ್ಲಿ ತಮ್ಮ ಪರ್ಸ್, ವಾಚ್ ಎಲ್ಲವನ್ನೂ ನೀಡಿದ್ದರು. ಅವರಂತೆ ರಕ್ಷಣೆಗೆ ಇಳಿದ ಇತರರೂ ಯುವಕನೊಬ್ಬನ ಕೈಯಲ್ಲಿ ವಸ್ತುಗಳು ನೀಡಿದ್ದರು. ಆದರೆ, ಜಬ್ಬಾರ್ ಪರ್ಸ್ ನಾಪತ್ತೆಯಾಗಿದೆ. ಕಳೆದುಹೋದ ಪರ್ಸ್‌ನಲ್ಲಿ ದಾಖಲೆಗಳು, ರೂ. 8,000 ನಗದು ಇದ್ದು, ಸಿಕ್ಕಿದವರು ವಾಪಸ್ಸು ಹಿಂತಿರುಗಿಸುವಂತೆ ಸಮಾಜಿಕ ತಾಣಗಳ ಮೂಲಕ ಮನವಿ ಮಾಡಿದ್ದಾರೆ.
ಕೊಡ್ಲಗದ್ದೆ ಬಳಿ ಹಣ್ಣಿನ ಲಾರಿ ಉರುಳಿ ಚಾಲಕ ಸಾವು
ಅಂಕೋಲಾ: ಹಣ್ಣುಗಳನ್ನು ತುಂಬಿ ಸಾಗಿಸುತ್ತಿದ್ದ ಐಷರ್ ವಾಹನವೊಂದು ದಾರಿಮಧ್ಯೆ ಉರುಳಿ ಮರಕ್ಕೆ ಗುದ್ದಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ-63 ಕೊಡ್ಲಗದ್ದೆ ಬಳಿ ನಡೆದಿದೆ.
ಮಹಾರಾಷ್ಟ್ರದ ಸಾಂಗ್ಲಿಯಿಂದ ಕೇರಳದ ಕೊಚ್ಚಿಗೆ ಹಣ್ಣುಗಳನ್ನು ತುಂಬಿ ಸಾಗಿಸುತ್ತಿದ್ದ ಲಾರಿ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಉರುಳಿ ಹೆದ್ದಾರಿ ಅಂಚಿನ ಮರಕ್ಕೆ ಜೋರಾಗಿ ಗುದ್ದಿಕೊಂಡ ಪರಿಣಾಮ ಲಾರಿ ಸಂಪೂರ್ಣ ನುಜ್ಜು ಗುಜ್ಜಾಗಿದೆ. ವಾಹನದಲ್ಲಿದ್ದ ಹಣ್ಣಿನ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತಗೊಂಡ ಲಾರಿ ಚಾಲಕ ಮರದ ಮಧ್ಯೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದು ಮೃತ ದೇಹವನ್ನು ಕ್ರೇನ್ ಬಳಸಿ ಹೊರತೆಗೆಯಲಾಗಿತು.
ಅಂಕೋಲಾ ಸಿಪಿಐ ಜಾಕ್ಸನ್ ಡಿಸೋಜ, ಪಿಎಸ್‌ಐ ಪ್ರೇಮನಗೌಡ ಪಾಟೀಲ್ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು-ಲಾರಿ ನಡುವೆ ಅಪಘಾತ, ನಾಲ್ವರಿಗೆ ಗಾಯ
ಅಂಕೋಲಾ: ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾದ ಘಟನೆ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ. ಕಾರವಾರ ತಾಲೂಕಿನ ಅಮದಳ್ಳಿ ಕಂತ್ರಿವಾಡಾ ನಿವಾಸಿಗಳಾದ ದಿನೇಶ ಅಶೋಕ ಕಂತ್ರಿಕರ (34), ನವೀನ ಅನಿಲ ಕಂತ್ರಿಕರ (23), ರೋಹಿತ ಸುಭಾಷ ಕಂತ್ರಿಕರ (23), ರಾಜರಾಮ ಅಶೋಕ ಠಾಕರಕರ (23) ಗಾಯಾಳುಗಳು.
ಇದನ್ನೂ ಓದಿ | Karnataka Election: ಗೋಕಾಕ್ ಬಳಿ ದಾಖಲೆ ಇಲ್ಲದೆ ಬಸ್‌ನಲ್ಲಿ ಸಾಗಿಸುತ್ತಿದ್ದ 65 ಲಕ್ಷ ರೂಪಾಯಿ ಜಪ್ತಿ
ಲಾರಿ ಚಾಲಕನಾದ ಬಾಬುಷಾ ಗುಂಡಪ್ಪ ಎಂಬಾತ ಕುಮಟಾ ಕಡೆಯಿಂದ ಅಂಕೋಲಾ ಕಡೆ ತನ್ನ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದ. ಎದುರಿನಿಂದ ಬರುತ್ತಿದ್ದ ಕಾರನ್ನು ನೋಡಿಯು ತನ್ನ ಮುಂದೆ ಹೊಗುತ್ತಿದ್ದ ರಿಕ್ಷಾವನ್ನು ಓವರಟೇಕ್ ಮಾಡುವ ಬರದಲ್ಲಿ ಅಂಕೋಲಾ ಕಡೆಯಿಂದ ಕುಮಟಾ ಕಡೆ ಹೊಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ನಡೆದಿದೆ. ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.