ಬೆಂಗಳೂರು: ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿರುವ ಪ್ರತಿಷ್ಠಿತ ಕಾಲೇಜೊಂದಕ್ಕೆ ಮಂಗಳವಾರ ಕಾಲೇಜಿಗೆ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬ ಪ್ರವೇಶ ಮಾಡಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆ ಖಂಡಿಸಿ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ (Students protest) ನಡೆಸಿದರು.
ಮಂಗಳವಾರ ಬೆಳಗ್ಗೆ ವ್ಯಕ್ತಿಯೊಬ್ಬ ಕಾಲೇಜಿಗೆ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅತ್ಯಂತ ಕ್ರೂರವಾಗಿ ವರ್ತಿಸಿದ ಆ ವ್ಯಕ್ತಿಯಿಂದ ಹಲ್ಲೆಗೊಳಗಾದ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಲೇಜಿನಲ್ಲಿ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ವಿದ್ಯಾರ್ಥಿನಿ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಕಾಲೇಜಿಗೆ ಅತಿಕ್ರಮವಾಗಿ ಪ್ರವೇಶಿಸಿದ ವ್ಯಕ್ತಿ ಯಾರು ಎನ್ನುವುದು ಸ್ಪಷ್ಟವಾಗಿಲ್ಲ.
ಕಾಲೇಜಿನಲ್ಲಿ ಇಂಥ ಘಟನೆ ನಡೆದಿರುವುದು ಆತಂಕ ಮೂಡಿಸಿದೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ಮಂಗಳವಾರ ಏನಾಗಿತ್ತು?
ಮಂಗಳವಾರ ಬೆಳಗ್ಗೆ 8 ಗಂಟೆಗೆ ಕಾಲೇಜಿನ ಲೇಡಿಸ್ ಟಾಯ್ಲೆಟ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿದ್ದ. ವಿದ್ಯಾರ್ಥಿನಿಯರ ಟಾಯ್ಲೆಟ್ ಗೆ ನುಗ್ಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ ಕಾಮುಕ ಅಲ್ಲಿದ್ದ ವಿದ್ಯಾರ್ಥಿನಿಯ ಬಾಯಿ ಮುಚ್ಚಿ ಅಸಭ್ಯವಾಗಿ ವರ್ತಿಸಿದ್ದ.
ಆಗ ವಿದ್ಯಾರ್ಥಿನಿ ಕಾಮುಕನ ಕೈ ಕಿತ್ತು ಜೋರಾಗಿ ಕಿರುಚಾಡಿದ್ದಳು. ಇದರಿಂದ ಭಯಗೊಂಡ ಕಾಮುಕ ಸಿಕ್ಕಿ ಬೀಳುವ ಭೀತಿಯಿಂದ ಕಾಲ್ಕಿತ್ತಿದ್ದ. ಈ ಟಾಯ್ಲೆಟ್ ಕಾಲೇಜಿನ ನಾಲ್ಕನೇ ಮಹಡಿಯಲ್ಲಿದೆ. ಅಲ್ಲಿಂದ ಓಡಿ ಹೋಗುವಾಗ ವಿದ್ಯಾರ್ಥಿನಿಯೊಬ್ಬಳನ್ನು ತಳ್ಳಿದ್ದಾನೆ. ಆಕೆಗೂ ಗಾಯಗಳಾಗಿವೆ.
ಕಾಲೇಜಿನಲ್ಲಿ ಭದ್ರತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಪೊಲೀಸರು ಐಪಿಸಿ ಸೆಕ್ಷನ್ 354 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Sexual Harrassment | ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಅಮಾನತು