Site icon Vistara News

ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿದ್ದಾಗ ಹುಟ್ಟಿದ ಪ್ರೀತಿ; ಈತನ ಲವ್​ಸ್ಟೋರಿಗೆ ಸಾಕ್ಷಿಯಾದ ಫ್ಲೈಓವರ್​​​ದು ಬದಲಾಗದ ಸ್ಥಿತಿ !

Bengaluru traffic

ಬೆಂಗಳೂರು: ಪ್ರೀತಿ ಹೇಗಾದರೂ ಹುಟ್ಟಬಹುದು..ಯಾರ ಮೇಲಾದರೂ ಹುಟ್ಟಬಹುದು. ಕೇಳುತ್ತ ಹೋದರೆ ಒಬ್ಬೊಬ್ಬರ ಪ್ರೀತಿಯ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಸದ್ಯ ಈಗ ಸುದ್ದಿಯಾಗಿರೋದು ಬೆಂಗಳೂರಿನ ವ್ಯಕ್ತಿಯೊಬ್ಬರ ಲವ್​​ಸ್ಟೋರಿ. ಬೆಂಗಳೂರು ಟ್ರಾಫಿಕ್​​ಗೆ ಸದಾ ಬೈಯುವ ಮಂದಿ ನಾವು..ಆದರಿಲ್ಲಿ ಈ ವ್ಯಕ್ತಿಗೆ ಅದೇ ಬೆಂಗಳೂರು ಟ್ರಾಫಿಕ್​ ಸಿಗ್ನಲ್​​ನಲ್ಲೇ ಅವರ ಪ್ರೀತಿ ಸಿಕ್ಕಿದೆ. ಅಂದು ಯಾರ ಮೇಲೆ ಪ್ರೀತಿಯಾಯಿತೋ ಅದೇ ಹುಡುಗಿಯನ್ನು ಮದುವೆಯನ್ನೂ ಆಗಿದ್ದಾರೆ. ಹಾಗೇ, ಪ್ರೀತಿಸಿದ ಹೃದಯಗಳೆರಡೂ ಕೈ ಹಿಡಿದು ಎರಡು ವರ್ಷಗಳೇ ಕಳೆದು ಹೋಗಿದ್ದರೂ ಈ ಲವ್​ಸ್ಟೋರಿ ಮತ್ತೀಗ ಸುದ್ದಿಯಾಗಿದೆ. ತನ್ನ ಲವ್​ ಸ್ಟೋರಿಯನ್ನು ರೆಡ್ಡಿಟ್​ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆ ವ್ಯಕ್ತಿ ಕೊನೆಗೊಂದು ಮಜವಾದ ಟ್ವಿಸ್ಟ್​ ಕೂಡ ಕೊಟ್ಟಿದ್ದಾರೆ..!

‘ನನಗೊಬ್ಬಳು ಸ್ನೇಹಿತೆ ಇದ್ದಳು. ಆಕೆ ಕೇವಲ ಸ್ನೇಹಿತೆ ಆಗಿದ್ದಳಷ್ಟೇ. ಒಂದು ದಿನ ನಾನು ಆಕೆಯನ್ನು ಮನೆಗೆ ಬಿಡಬೇಕಿತ್ತು. ಅಂದು ಅವಳನ್ನು ನನ್ನ ವಾಹನದಲ್ಲಿ ಕೂರಿಸಿಕೊಂಡು ಬೆಂಗಳೂರಿನ ಕೋರಮಂಗಲ ಸಮೀಪ ಹೋಗುತ್ತಿದ್ದೆ. ಆ ಮಾರ್ಗದಲ್ಲಿ ವಿಪರೀತ ಟ್ರಾಫಿಕ್​ ಉಂಟಾಗಿತ್ತು. ಅಲ್ಲಿನ ಇಜಿಪುರ ಮೇಲ್ಸೇತುವೆ (ಇಜಿಪುರ ಫ್ಲೈಓವರ್​) ಕಾಮಗಾರಿ ನಡೆಯುತ್ತಿದ್ದ ಕಾರಣ ಸಂಚಾರಕ್ಕೆ ತೊಡಕಾಗಿತ್ತು ಮತ್ತು ಟ್ರಾಫಿಕ್​​ಗೆ ಇದೇ ಕಾರಣವೂ ಆಗಿತ್ತು. ನಾವು ಸೋನಿ ವರ್ಲ್ಡ್​ ಸಿಗ್ನಲ್​ ಬಳಿ ಸಿಲುಕಿಕೊಂಡಿದ್ದೆವು. ಎಷ್ಟೇ ಹೊತ್ತಾದರೂ ವಾಹನ ಸಂಚಾರ ಮುಕ್ತವಾಗುವ ಲಕ್ಷಣ ಕಾಣಲಿಲ್ಲ. ನಮಗಿಬ್ಬರಿಗೂ ಹಸಿವಾಗಿತ್ತು ಮತ್ತು ಕಾದುಕಾದು ತೀರ ಬೇಸರವೂ ಬಂದಿತ್ತು. ಹಾಗಾಗಿ ಅಲ್ಲಿಯೇ ಇನ್ನೊಂದು ಕವಲುದಾರಿಯಲ್ಲಿ ಗಾಡಿ ಓಡಿಸಿಕೊಂಡು ಹೋಗಿ, ಹೋಟೆಲ್​​ವೊಂದಕ್ಕೆ ತೆರಳಿ ಊಟ ಮಾಡಿದೆವು. ಇಲ್ಲಿಂದ ನಮ್ಮ ಪ್ರೀತಿ ಪ್ರಾರಂಭವಾಯಿತು. ಅಂದಿನವರೆಗೂ ನನಗೆ ಬರೀ ಫ್ರೆಂಡ್ ಆಗಿದ್ದವಳು ಲವರ್​ ಆದಳು. ಅಷ್ಟಾದ ಮೇಲೆ ಮೂರುವರ್ಷ ಆಕೆಯೊಂದಿಗೆ ಡೇಟಿಂಗ್​ ಮಾಡಿ, ಮದುವೆಯಾಗಿ ಈಗ ಎರಡು ವರ್ಷಗಳೇ ಕಳೆದು ಹೋಗಿವೆ. ಇಷ್ಟೆಲ್ಲ ಆದರೂ ಇಜಿಪುರದ 2.5 ಕಿಮೀ ಉದ್ದದ ಮೇಲ್ಸೇತುವೆ ಕಾಮಗಾರಿ ಮಾತ್ರ ಇನ್ನೂ ನಿರ್ಮಾಣ ಹಂತದಲ್ಲಿಯೇ ಇದೆ. ಅದು ಮುಗಿಯಲೇ ಇಲ್ಲ’ ಎಂದು ಈ ವ್ಯಕ್ತಿ ರೆಡ್ಡಿಟ್​​ನಲ್ಲಿ ಪೋಸ್ಟ್ ಹಾಕಿದ್ದಾರೆ.

ಇಲ್ಲಿ ತಮ್ಮ ಲವ್​ ಸ್ಟೋರಿ ಹೇಳುತ್ತಲೇ, ಬೆಂಗಳೂರು ಟ್ರಾಫಿಕ್​ ಮತ್ತು ರಸ್ತೆ ಕಾಮಗಾರಿಗಳನ್ನು ಟೀಕಿಸಿದ್ದಾರೆ. ನಾವು ಮದುವೆಯಾಗಿ ಎರಡು ವರ್ಷವಾದರೂ, 2.5 ಕಿಮೀ ಉದ್ದದ ಫ್ಲೈಓವರ್​ ಕೆಲಸ ಮುಗಿಯಲಿಲ್ಲ ಎಂದು ಕೊನೆಯಲ್ಲಿ ಹೇಳಿದ್ದೇ ಅವರು ತಮ್ಮ ರೊಮ್ಯಾಂಟಿಕ್​ ಪ್ರೇಮಕಥೆಗೆ ನೀಡಿದ ಫನ್ನಿ ಟ್ವಿಸ್ಟ್​ ಎನ್ನಿಸಿದೆ. ಈ ಇಜಿಪುರ ಮೇಲ್ಸೇತುವೆ ಕಾಮಗಾರಿ ಐದಾರು ವರ್ಷಗಳಿಂದ ಹಾಗೇ ಇದೆ. ಅದು ಕಂಬವನ್ನೆಲ್ಲ ಕಟ್ಟಿದ್ದರೂ ಮುಂದುವರಿಯಲೇ ಇಲ್ಲ. ಅದನ್ನೇ ಈಗ ಈ ವ್ಯಕ್ತಿ ಆಡಿಕೊಂಡಿದ್ದಾರೆ.

ಇವರ ಸೋಷಿಯಲ್​ ಮೀಡಿಯಾ ಪೋಸ್ಟ್​​ನ್ನು 4 ಸಾವಿರಕ್ಕೂ ಅಧಿಕ ಜನರು ಮೆಚ್ಚಿಕೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್​ ಬಗ್ಗೆಯೂ ಕಮೆಂಟ್​ ಮಾಡಿದ್ದಾರೆ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ‘ಆ ಫ್ಲೈ ಓವರ್​ ಕೆಲಸ ಪ್ರಾರಂಭವಾದಾಗ ನನ್ನ ಪುತ್ರಿ ಆಗಷ್ಟೇ ಕ್ರಿಸ್ಟ್​ ಜ್ಯೂನಿಯರ್ ಕಾಲೇಜು ಸೇರಿಕೊಂಡಿದ್ದಳು. ಈಗವಳು ಪದವಿ ಶಿಕ್ಷಣ ಮುಗಿಸಿ, ಸ್ನಾತಕೋತ್ತರ ವ್ಯಾಸಂಗಕ್ಕೆ ಸೇರಿದ್ದಾಳೆ. ಆದರೂ ಮೇಲ್ಸೇತುವೆ ಪೂರ್ಣಗೊಂಡಿಲ್ಲ’ ಎಂದಿದ್ದಾರೆ.

ಟ್ರಾಫಿಕ್​​ನಲ್ಲಿ ಪ್ರೀತಿ ಕಂಡುಕೊಂಡವನ ಸೋಷಿಯಲ್ ಮೀಡಿಯಾ ಪೋಸ್ಟ್​

ಇದನ್ನೂ ಓದಿ: Traffic | ಬೆಂಗಳೂರು ಟ್ರಾಫಿಕ್‌ ಜಾಮ್‌ ಮುಕ್ತಿಗೆ ನಾನಾ ಇಲಾಖೆಗಳ ಸಮನ್ವಯ

Exit mobile version